ಶೋಷಿತ ಸಮುದಾಯದ ಒಕ್ಕೂಟದಿಂದ 12 ಹಕ್ಕೊತ್ತಾಯ

| Published : Jan 29 2024, 01:31 AM IST

ಸಾರಾಂಶ

ಚಿತ್ರದುರ್ಗದಲ್ಲಿ ಭಾನುವಾರ ನಡೆದ ಶೋಷಿತರ ಜಾಗೃತಿ ಸಮಾವೇಶದಲ್ಲಿ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ವತಿಯಿಂದ ಒಟ್ಟು ಹನ್ನೆರೆಡು ಹಕ್ಕೊತ್ತಾಯಗಳ ಮಂಡನೆ ಮಾಡಲಾಯಿತು.

ಚಿತ್ರದುರ್ಗ: ಚಿತ್ರದುರ್ಗದಲ್ಲಿ ಭಾನುವಾರ ನಡೆದ ಶೋಷಿತರ ಜಾಗೃತಿ ಸಮಾವೇಶದಲ್ಲಿ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ವತಿಯಿಂದ ಒಟ್ಟು ಹನ್ನೆರೆಡು ಹಕ್ಕೊತ್ತಾಯಗಳ ಮಂಡನೆ ಮಾಡಲಾಯಿತು.

ಸಮಾವೇಶದ ಉದ್ಘಾಟನೆ ನಂತರ ಸಿಎಂ ಸಿದ್ದರಾಮಯ್ಯ ಅವರಿಗೆ ಈ ಸಂಬಂಧ ಮನವಿ ಸಲ್ಲಿಸಿದ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ.ರಾಮಚಂದ್ರಪ್ಪ ಶೀಘ್ರ ಈಡೇರಿಸುವಂತೆ ಮನವಿ ಮಾಡಿದರು.

ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಎಚ್‌.ಕಾಂತರಾಜು ಅವರ ಆಯೋಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಯಾವ ಒತ್ತಡಕ್ಕೂ ಮಣಿಯದೆ ಅಂಗೀಕರಿಸಿ ಜಾರಿಗೊಳಿಸಬೇಕು. ಕೇಂದ್ರ ಸರ್ಕಾರ ಕೂಡ ದೇಶಾದ್ಯಂತ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡಬೇಕು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಆರ್ಥಿಕ ಆಧಾರದ ಇಡಬ್ಲ್ಯುಎಸ್‌ ಶೇ.10ರಷ್ಟು ಮೀಸಲಾತಿ ರದ್ದುಪಡಿಸಬೇಕು. ಮಹಿಳಾ ರಾಜಕೀಯ ಮೀಸಲಾತಿ ಕಾಯ್ದೆ ಕೂಡಲೇ ಜಾರಿಗೊಳಿಸಬೇಕು. ರಾಜಕೀಯ ಕ್ಷೇತ್ರದಲ್ಲೂ ಎಸ್ಸಿ, ಎಸ್ಟಿ, ಒಬಿಸಿ ಸಮುದಾಯಗಳ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಬೇಕು. ಈ ಸಮುದಾಯಗಳ ಅಭ್ಯರ್ಥಿಗಳ ಆದಾಯದ ಮಿತಿ ಹೆಚ್ಚಿಸಬೇಕು.

ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಹಿಂದುಳಿದ ಜಾತಿಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ರಾಜಕೀಯ ಮೀಸಲಾತಿ ನೀಡುವ ಕಾನೂನು ರೂಪಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಖಾಸಗಿ ಕ್ಷೇತ್ರಕ್ಕೂ ಮೀಸಲಾತಿ ವಿಸ್ತರಿಸಬೇಕು. ಮುಸ್ಲಿಂ ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಬಲೀಕರಣಕ್ಕಾಗಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ರಾಜೇಂದ್ರ ಸಾಚಾರ್‌ ಅವರ ವರದಿ ಕೂಡಲೇ ಅನುಷ್ಠಾನಗೊಳಿಸಬೇಕು. ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳ ಸಂವಿಧಾನ ಹಕ್ಕುಗಳನ್ನು ಸಂರಕ್ಷಿಸಬೇಕು. ಈ ಸಮುದಾಯಗಳ ಅಭಿವೃದ್ಧಿಗಾಗಿ ಯೋಜನೆ ರೂಪಿಸಬೇಕು. ನಿಗಮ ಮಂಡಳಿ, ಪ್ರಾಧಿಕಾರಗಳ ನೇಮಕಾತಿಯಲ್ಲೂ ಸಾಮಾಜಿಕ ನ್ಯಾಯ ನೀಡಬೇಕು. ರಾಜ್ಯಸಭೆ, ವಿಧಾನಪರಿಷತ್‌, ಸಹಕಾರಿ ರಂಗಗಳಲ್ಲೂ ಎಸ್ಸಿ, ಎಸ್ಟಿ, ಒಬಿಸಿ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬ ಹಕ್ಕೊತ್ತಾಯದ ಮನವಿಯ ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಲ್ಲಿಸಲಾಯಿತು.