ಕನ್ನಡಪ್ರಭ ವಾರ್ತೆ ವಿಧಾನ ಪರಿಷತ್‌ಬಿಜೆಪಿಯ ಏಳು ಮತ್ತು ಕಾಂಗ್ರೆಸ್‌ನ ಐವರು ಸೇರಿ ವಿಧಾನ ಪರಿಷತ್‌ನ ಒಟ್ಟು ಹನ್ನೆರಡು ಸದಸ್ಯರ ಅಧಿಕಾರಾವಧಿಯು ಬರುವ ಜೂನ್‌ ಮತ್ತು ಜುಲೈನಲ್ಲಿ ಮುಕ್ತಾಯವಾಗಲಿದೆ. ಈ ಪೈಕಿ ಕೆಲ ಸದಸ್ಯರು ಗುರುವಾರ ಅಧಿವೇಶನದ ಕೊನೆಯ ದಿನ ವಿದಾಯ ಭಾಷಣ ಮಾಡಿದರು.ಕಾಂಗ್ರೆಸ್‌ನ ಗೋವಿಂದರಾಜು, ನಸೀರ್‌ ಅಹ್ಮದ್‌, ಬಿ.ಕೆ.ಹರಿಪ್ರಸಾದ್‌ ಮತ್ತು ತಿಪ್ಪಣ್ಣಪ್ಪ ಕಮಕನೂರು, ಬಿಜೆಪಿಯ ಎನ್‌.ನಾಗರಾಜು(ಎಂಟಿಬಿ), ಪ್ರತಾಪ್‌ ಸಿಂಹ ನಾಯಕ್‌, ಸುನೀಲ್‌ ವಲ್ಯಾಪುರ್‌ ಅವರ ಪರಿಷತ್‌ ಸದಸ್ಯತ್ವ ಅವಧಿಯು ಜೂ.30ಕ್ಕೆ, ಬಿಜೆಪಿಯ ಅಡಗೂರು ಎಚ್‌.ವಿಶ್ವನಾಥ್‌, ಭಾರತಿ ಶೆಟ್ಟಿ, ಶಾಂತಾರಾಮ್ ಸಿದ್ದಿ, ಡಾ.ತಳವಾರ ಸಾಬಣ್ಣ ಮತ್ತು ಕಾಂಗ್ರೆಸ್‌ನ ರಮೇಶ್‌ ಬಾಬು ಅವರ ಸದಸ್ಯತ್ವ ಅವಧಿ ಜು.21ಕ್ಕೆ ಮುಕ್ತಾಯಗೊಳ್ಳಲಿದೆ. ಈ ವಿಧಾನಸಭೆಯಿಂದ ಆಯ್ಕೆಯಾಗಿರುವ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ಐದು ಸ್ಥಾನ ಗೆಲ್ಲುವ ಅವಕಾಶವಿದ್ದರೆ, ಬಿಜೆಪಿ-ಜೆಡಿಎಸ್‌ ಮೈತ್ರಿಪಕ್ಷಗಳು ಎರಡು ಸ್ಥಾನಗಳನ್ನು ಗೆಲ್ಲಬಹುದಾಗಿದೆ. ಇನ್ನುಳಿದ ಐದು ಸ್ಥಾನಗಳಿಗೆ ಸರ್ಕಾರದಿಂದಲೇ ನೇರ ನಾಮನಿದೇಶನ ಮಾಡಬೇಕಾದ ಸ್ಥಾನಗಳಾಗಿದ್ದು, ಅವುಗಳೆಲ್ಲವೂ ಆಡಳಿತ ಪಕ್ಷದ ಪಾಲಾಗುವುದು ಬಹುತೇಕ ಖಚಿತ. ಇದರಿಂದ ಕಾಂಗ್ರೆಸ್‌ಗೆ ಒಟ್ಟಾರೆ 10 ಸ್ಥಾನಗಳು ದೊರೆಯುವ ಸಾಧ್ಯತೆ ಇದೆ.

ಇದೇ ಕೊನೇ ಅಧಿವೇಶನ ಆಗಬಹುದು:

ಈ ವೇಳೆ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ ಅವರು, ಈ ಪೈಕಿ ಒಂದಷ್ಟು ಸದಸ್ಯರಿಗೆ ಇದೇ ಕೊನೆಯ ಅಧಿವೇಶನ ಆಗಬಹುದು. ಆದರೆ, ಮುಂದಿನ ಅಧಿವೇಶನವನ್ನು ಈ ಸದಸ್ಯರ ನಿವೃತ್ತಿಗೆ ಮೊದಲೇ ಆಯೋಜಿಸಲು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗುವುದು. ಎಲ್ಲ ಸದಸ್ಯರು ಮತ್ತೊಮ್ಮೆ ಆಯ್ಕೆಯಾಗಿ ಸದನಕ್ಕೆ ಬರಲಿ ಎನ್ನುವುದು ನಮ್ಮ ಆಶಯ. ಎಲ್ಲರೂ ಸದನದ ಕಾರ್ಯಕಲಾಪಗಳ ಪಾಲ್ಗೊಂಡು ಉತ್ತಮ ರೀತಿಯ ಚರ್ಚೆ ನಡೆಸಿದ್ದು, ಎಲ್ಲರಿಗೂ ಧನ್ಯವಾದ ತಿಳಿಸಿದರು.

ಬಳಿಕ ತಳವಾರ ಸಾಬಣ್ಣ, ಶಾಂತರಾಮ ಸಿದ್ಧಿ, ಸುನೀಲ್‌ ವಲ್ಯಾಪುರ್‌, ತಿಪ್ಪಣ್ಣಪ್ಪ ಕಮಕನೂರ ವಿದಾಯ ಭಾಷಣ ಮಾಡಿದರು. ಬಿಜೆಪಿಯ ಮೂವರೂ ಸದಸ್ಯರು ತಾವು ಮೇಲ್ಮನೆಗೆ ಬರಲು ಯಡಿಯೂರಪ್ಪ ಅವರು ಕಾರಣ ಎಂದರೆ, ಕಾಂಗ್ರೆಸ್‌ನ ತಿಪ್ಪಣ್ಣಪ್ಪ ಕಮಕನೂರ ಅವರು ತಮಗೆ ಅವಕಾಶ ನೀಡಿದ್ದು ಮಲ್ಲಿಕಾರ್ಜುನ ಖರ್ಗೆ ಅವರು ಎಂದು ಸ್ಮರಿಸಿದರು. ಶಾಂತರಾಮ ಸಿದ್ಧಿ ಮತ್ತು ಕಮಕನೂರ ಅವರು ತಮಗೂ ಸಭಾಪತಿ ಪೀಠದಲ್ಲಿ ಕೂತು ಕೆಲ ಗಂಟೆ ಕಲಾಪ ನಡೆಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಅತೀವ ಸಂತಸ ವ್ಯಕ್ತಪಡಿಸಿ, ಸಭಾಪತಿ ಹೊರಟ್ಟಿ ಹಾಗೂ ಇಡೀ ಸದನದ ಸದಸ್ಯರಿಗೆ ಧನ್ಯವಾದ ತಿಳಿಸಿದರು.