ಧಾರವಾಡ ಜಿಲ್ಲೆಗೆ ಮತ್ತೇ 12 ಹೊಸ ನಮ್ಮ ಕ್ಲಿನಿಕ್‌

| Published : Apr 19 2025, 12:35 AM IST

ಸಾರಾಂಶ

30,000 ಕ್ಕಿಂತ ಹೆಚ್ಚು 60 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಳಿ ನಮ್ಮ ಚಿಕಿತ್ಸಾಲಯಗಳು ಪ್ರಾರಂಭವಾಗುತ್ತಿವೆ

ಬಸವರಾಜ ಹಿರೇಮಠ ಧಾರವಾಡ

ಜನರಿಗೆ ತುರ್ತು ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಮತ್ತೇ 12 ಹೊಸ ನಮ್ಮ ಕ್ಲಿನಿಕ್ ಆರೋಗ್ಯ ಕೇಂದ್ರಗಳನ್ನು ಮಂಜೂರು ಮಾಡಿದೆ.

ಪ್ರಸ್ತುತ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ತಲಾ ಎರಡು, ಕಲಘಟಗಿ, ನವಲಗುಂದ, ಕುಂದಗೋಳ, ಅಳ್ನಾವರ ಮತ್ತು ಅಣ್ಣಿಗೇರಿಯಲ್ಲಿ ತಲಾ ಒಂದು ಸೇರಿದಂತೆ ಜಿಲ್ಲೆಯಲ್ಲಿ ಒಂಬತ್ತು ನಮ್ಮ ಕ್ಲಿನಿಕ್ ಕೇಂದ್ರಗಳಿವೆ. ಇದೀಗ ಹುಬ್ಬಳ್ಳಿಯಲ್ಲಿ ಏಳು, ಧಾರವಾಡದಲ್ಲಿ ಎರಡು ಹಾಗೂ ಜಿಲ್ಲೆಯ ಇತರೆ ತಾಲೂಕುಗಳಲ್ಲಿ ಮೂರು ಸೇರಿ 12 ಹೊಸ ನಮ್ಮ ಕ್ಲಿನಿಕ್ ಆರಂಭಿಸಲು ಸರ್ಕಾರ ನಿರ್ಧರಿಸಿದ್ದು, ಶೀಘ್ರದಲ್ಲಿಯೇ ಜನರಿಗೆ ಸೇವೆ ಒದಗಿಸಲಿವೆ.

ಎಲ್ಲೆಲ್ಲಿ ಕೇಂದ್ರಗಳು: ಧಾರವಾಡದ ನವಲೂರು ಮತ್ತು ಮಾಳಾಪುರ ಹಾಗೂ ತಾರಿಹಾಳ, ಗೋಪನಕೊಪ್ಪ, ಮಂಟೂರು ರಸ್ತೆ, ಮೆಹಬೂಬನಗರ, ಹೊಸ ಮೇದಾರ ಓಣಿ, ವಡ್ಡರ ಓಣಿ, ಹುಬ್ಬಳ್ಳಿಯ ಅರಳಿಕಟ್ಟಿ ಓಣಿಗಳಲ್ಲಿ ನಮ್ಮ ಹೊಸ ಕ್ಲಿನಿಕ್‌ಗಳನ್ನು ತೆರೆಯಲಾಗುವುದು. ಹುಬ್ಬಳ್ಳಿಯ ಹೊಸ ಮೇದಾರ ಓಣಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ₹4.57 ಕೋಟಿ ವೆಚ್ಚದಲ್ಲಿ ನಮ್ಮ ಕ್ಲಿನಿಕ್’ಗೆ ಕಟ್ಟಡ ನಿರ್ಮಿಸಲಾಗಿದೆ. ಸರ್ಕಾರವು ಹಣ ಒದಗಿಸಿದರೆ ಉಳಿದ ನಮ್ಮ ಕ್ಲಿನಿಕ್‌ ಗಳು ಸ್ವಂತ ಕಟ್ಟಡಗಳಲ್ಲಿ, ಇಲ್ಲದಿದ್ದರೆ ಬಾಡಿಗೆ ಕಟ್ಟಡಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ಪ್ರಸ್ತುತ ಅವಳಿ ನಗರಗಳಲ್ಲಿ ಪ್ರತಿ 50,000 ಜನಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. 30,000 ಕ್ಕಿಂತ ಹೆಚ್ಚು 60 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಳಿ ನಮ್ಮ ಚಿಕಿತ್ಸಾಲಯಗಳು ಪ್ರಾರಂಭವಾಗುತ್ತಿವೆ. ನಮ್ಮ ಚಿಕಿತ್ಸಾಲಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸಲಿವೆ.

ಏನಿದು ನಮ್ಮ ಕ್ಲಿನಿಕ್?: ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಆಳ್ವಿಕೆಯ ಸಮಯದಲ್ಲಿ ನಮ್ಮ ಕ್ಲಿನಿಕ್’ ಪರಿಕಲ್ಪನೆ ಪ್ರಾರಂಭಿಸಲಾಯಿತು. ಇದು ಸಮಾಜದ ದುರ್ಬಲ ವರ್ಗಗಳಿಗೆ, ವಿಶೇಷವಾಗಿ ಕೊಳೆಗೇರಿ ನಿವಾಸಿಗಳು, ದಿನಗೂಲಿ ಕಾರ್ಮಿಕರು ಮತ್ತು ಸಮಾಜದ ಇತರ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸುವ ಗುರಿ ಹೊಂದಿದೆ. ಈ ಕ್ಲಿನಿಕ್‌ಗಳಲ್ಲಿ ಹನ್ನೆರಡು ರೀತಿಯ ಆರೋಗ್ಯ ಸೇವೆಗಳು ಲಭ್ಯ ಇವೆ.

ಪ್ರತಿ ನಮ್ಮ ಕ್ಲಿನಿಕ್‌ನಲ್ಲಿ ಓರ್ವ ವೈದ್ಯಕೀಯ ಅಧಿಕಾರಿ, ನರ್ಸ್, ಲ್ಯಾಬ್ ತಂತ್ರಜ್ಞ ಮತ್ತು ಗ್ರೂಪ್ ಡಿ ಉದ್ಯೋಗಿ ಒಳಗೊಂಡಿರುತ್ತದೆ. ಹನ್ನೆರಡು ರೀತಿಯ ಸೇವೆಗಳಲ್ಲಿ ಗರ್ಭಧಾರಣೆ, ಪ್ರಸವಪೂರ್ವ, ನವಜಾತ ಶಿಶುಗಳ ಆರೈಕೆ, ಬಾಲ್ಯ ಮತ್ತು ಹದಿಹರೆಯದ ಆರೈಕೆ, ಸಾರ್ವತ್ರಿಕ ರೋಗನಿರೋಧಕ ಸೇವೆಗಳು, ಕುಟುಂಬ ಕಲ್ಯಾಣ, ಗರ್ಭನಿರೋಧಕ, ಸಾಂಕ್ರಾಮಿಕ ರೋಗ ನಿರ್ವಹಣೆ, ಸಾಮಾನ್ಯ ಮತ್ತು ಸಣ್ಣ ಕಾಯಿಲೆಗಳ ಆರೈಕೆ, ಮಧುಮೇಹ, ರಕ್ತದೊತ್ತಡ ನಿರ್ವಹಣೆ, ದೀರ್ಘಕಾಲದ ಕಾಯಿಲೆಗಳು, ಬಾಯಿಯ ಕಾಯಿಲೆಗಳು ಇತ್ಯಾದಿ ಸೇರಿವೆ. ಸ್ತನ ಮತ್ತು ಗರ್ಭಾಶಯದ ಕ್ಯಾನ್ಸರ್ ಮತ್ತು ಕಣ್ಣಿನ ಪರೀಕ್ಷೆಯಂತಹ ತೃತೀಯ ಆರೈಕೆಯ ಅಗತ್ಯವಿರುವ ಕಾಯಿಲೆಗಳಿಗೆ ಇತರ ಆಸ್ಪತ್ರೆಗಳಿಗೆ ಉಚಿತ ಉಲ್ಲೇಖಗಳನ್ನು ಸಹ ನೀಡಲಾಗುವುದು ಎಂದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಂ. ಹೊನಕೇರಿ ಮಾಹಿತಿ ನೀಡಿದರು.

ವೃದ್ಧರ ಆರೈಕೆ, ತುರ್ತು ವೈದ್ಯಕೀಯ ಸೇವೆಗಳು, ಆರೋಗ್ಯ ತಪಾಸಣೆ ಮತ್ತು ಔಷಧಿಗಳು ಸಂಪೂರ್ಣವಾಗಿ ಉಚಿತವಾಗಿರುತ್ತವೆ. ನಮ್ಮ ಕ್ಲಿನಿಕ್‌ನಲ್ಲಿ ಹದಿನಾಲ್ಕು ಪ್ರಯೋಗಾಲಯ ಪರೀಕ್ಷೆಗಳು, ದೂರಸಂಪರ್ಕ ಸೇವೆಗಳು ಮತ್ತು ಕ್ಷೇಮ ಚಟುವಟಿಕೆಗಳು ಉಚಿತವಾಗಿ ಲಭ್ಯವಿರುತ್ತವೆ. ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 9 ರಿಂದ ಸಂಜೆ 4.30 ರವರೆಗೆ ಎಲ್ಲ ಸೇವೆಗಳು ಲಭ್ಯವಿದ್ದು, ಸಾರ್ವಜನಿಕರು ಪ್ರಯೋಜನ ಪಡೆಯಬೇಕೆಂದು ಡಾ. ಹೊನಕೇರಿ ಮನವಿ ಮಾಡಿದರು.