ಶಾಶ್ವತ ಶುದ್ಧ ನೀರಿನ ಸೌಲಭ್ಯಕ್ಕಾಗಿ ₹1200 ಕೋಟಿ ಯೋಜನೆಗೆ ಶೀಘ್ರ ಚಾಲನೆ: ಭರತ್ ರೆಡ್ಡಿ

| Published : Oct 26 2024, 12:51 AM IST / Updated: Oct 26 2024, 12:52 AM IST

ಶಾಶ್ವತ ಶುದ್ಧ ನೀರಿನ ಸೌಲಭ್ಯಕ್ಕಾಗಿ ₹1200 ಕೋಟಿ ಯೋಜನೆಗೆ ಶೀಘ್ರ ಚಾಲನೆ: ಭರತ್ ರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಜನರ ನಿರೀಕ್ಷೆ ಹುಸಿ ಮಾಡದೇ ಬಳ್ಳಾರಿ ನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ.

ಬಳ್ಳಾರಿ: ನಗರದ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ₹1200 ಕೋಟಿ ಯೋಜನೆ ರೂಪಿಸಲಾಗಿದೆ. ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.

ಶಾಸಕ ನಾರಾ ಭರತ್ ರೆಡ್ಡಿ ಜನ್ಮ ದಿನದ ನಿಮಿತ್ತ ಎಪಿಎಂಸಿ ಆವರಣದಲ್ಲಿ ಶುಕ್ರವಾರ ಶಾಸಕರ ಅಭಿಮಾನಿಗಳ ಬಳಗ (ಎನ್''''''''ಬಿಆರ್ ಟೀಮ್) ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಿಮ್ಮ ಆಶೀರ್ವಾದದಿಂದ ಶಾಸಕನಾಗಿದ್ದೇನೆ. ಜನರ ನಿರೀಕ್ಷೆ ಹುಸಿ ಮಾಡದೇ ಬಳ್ಳಾರಿ ನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನಗರದ ಮೂಲಸೌಕರ್ಯಕ್ಕಾಗಿ ಹತ್ತಾರು ಕೋಟಿ ಅನುದಾನ ತಂದಿರುವೆ. ಕೋಲ್ಡ್ ಸ್ಟೋರೇಜ್, ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಾಣಕ್ಕಾಗಿ ₹51 ಕೋಟಿ, ಎಪಿಎಂಸಿಯ ಆವರಣದ ಅಭಿವೃದ್ಧಿಗೆ ₹27 ಕೋಟಿ ಅನುದಾನ ತಂದಿರುವೆ ಎಂದರು.

ತುಂಗಭದ್ರಾ ಜಲಾಶಯದಿಂದ ನೀರು ತರುವುದಾಗಿ ಪ್ರತಿಪಕ್ಷಗಳ ನಾಯಕರು ಬರೀ ಬಾಯಿ ಮಾತಲ್ಲಿ ಹೇಳಿದರು. ಆದರೆ ನಾನು ₹1200 ಕೋಟಿ ಅನುದಾನದಲ್ಲಿ ಬಳ್ಳಾರಿ ನಗರಕ್ಕೆ ನೇರವಾಗಿ ನೀರು ಪೂರೈಸಲು ಯೋಜನೆ ರೂಪಿಸಿರುವೆ. ನಾನು ಮನೆಯಲ್ಲಿ ಯಾವ ನೀರು ಕುಡಿಯುತ್ತೇನೇಯೋ ನನ್ನ ಜನರು ಅದೇ ನೀರು ಕುಡಿಯಬೇಕು ಎಂಬುದು ನನ್ನಾಸೆ. ಜನರಿಂದ ಗೆದ್ದು ಜನರಿಗಾಗಿ ಸೇವೆ ಮಾಡುವುದೇ ನನ್ನ ಮುಖ್ಯ ಆಶಯ ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅಪ್ಪಟ ಹೃದಯವಂತ ಮನುಷ್ಯ. ವೈರಿಗಳ ಮನಸನ್ನೂ ಗೆಲ್ಲಬಲ್ಲ ವ್ಯಕ್ತಿಯಾಗಿದ್ದಾರೆ. ಇಂತಹ ಶಾಸಕರನ್ನು ಪಡೆದ ಬಳ್ಳಾರಿಯ ಜನ ಭಾಗ್ಯಶಾಲಿಗಳು ಎಂದರು. ನಾರಾ ಮನೆತನದ ನೆರವಿನಿಂದಲೇ ನಾನು ಎರಡು ಸಲ ಶಾಸಕ ಆಗಿರುವೆ. ಆ ಮನೆತನದ ಋಣವನ್ನು ಮರೆಯಲಾರೆ. ಕಷ್ಟದ ಸಮಯದಲ್ಲಿ ಸಹಾಯಕ್ಕೆ ಬಂದವರೇ ಬಂಧುಗಳು ಎಂದು ಶಾಸಕ ಗಣೇಶ್ ಸ್ಮರಿಸಿದರು.

ಎಪಿಎಂಸಿ ಅಧ್ಯಕ್ಷ ಕಟ್ಟೆಮನೆ ನಾಗೇಂದ್ರ, ಅಬ್ದುಲ್ ಬಾರಿ, ಮಾಜಿ ಮೇಯರ್ ರಾಜೇಶ್ವರಿ, ಪಾಲಿಕೆಯ ಸದಸ್ಯರಾದ ರಾಮಾಂಜನೇಯ, ಕುಬೇರಾ, ಎಂ.ಪ್ರಭಂಜನಕುಮಾರ್, ಮಿಂಚು ಶ್ರೀನಿವಾಸ್, ಕೆ.ನೂರ್ ಮಹಮ್ಮದ್, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ಚಾನಾಳ್ ಶೇಖರ್, ವಿಷ್ಣು ಬೋಯಪಾಟಿ, ಸತೀಶ್ ರೆಡ್ಡಿ, ಅಲಿವೇಲು ಸುರೇಶ್, ಮಂಜುಳಾ, ಎಂ.ವಿವೇಕ್, ಸಿಲಾರ್, ವಿಶ್ವ, ರಘುನಾಥ ಪಾಟೀಲ್, ಸಿದ್ಧೇಶ್, ಕಂಪ್ಲಿಯ ಕಾಂಗ್ರೆಸ್ ಮುಖಂಡರಾದ ವಾಸು, ರಘು ಮೊದಲಾದ ಮುಖಂಡರು ಹಾಜರಿದ್ದರು. ನಗರ ಶಾಸಕ ಭರತ್‌ರೆಡ್ಡಿ ಅವರ ಜನ್ಮದಿನ ಅಂಗವಾಗಿ ಎಪಿಎಂಸಿಯ ಮುಖ್ಯ ದ್ವಾರದಿಂದ ವೇದಿಕೆವರೆಗೆ ಸಿಂಗರಿಸಿದ ಎತ್ತಿನ ಗಾಡಿಯಲ್ಲಿ ಮೆರವಣಿಗೆಯಲ್ಲಿ ಕರೆ ತರಲಾಯಿತು.

ಜನ್ಮದಿನ ಅಂಗವಾಗಿ ಶಾಸಕ ಭರತ್ ರೆಡ್ಡಿ ನಗರದ ಶ್ರೀಕನಕ ದುರ್ಗಮ್ಮ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಶಾಸಕರ ಕಚೇರಿಯಲ್ಲಿ 800ಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ಬಟ್ಟೆ ವಿತರಿಸಲಾಯಿತು.

ನಗರದ ಬಾಪೂಜಿನಗರ, ಶ್ರೀರಾಂಪುರ ಕಾಲನಿ ಸೇರಿದಂತೆ ನಗರದ ನಾನಾ ಕಡೆ ಜನ್ಮದಿನ ಸಮಾರಂಭ ಆಯಜಿಸಲಾಯಿತು. ರಾತ್ರಿ ನಗರದ ವಿವಿಧೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಮೋತಿ ವೃತ್ತದಲ್ಲಿ ಶಾಸಕ ಭರತ್ ರೆಡ್ಡಿ ಅವರ 135 ಅಡಿ ಎತ್ತರದ ಬೃಹತ್ ಕಟೌಟ್ ನಿರ್ಮಿಸಲಾಗಿದೆ.