ಪಿಎಂ ಕುಸುಮ್-ಬಿ : ರೈತರಿಗೆ ಸೌರಶಕ್ತಿ ಭಾಗ್ಯ!

| N/A | Published : Jul 26 2025, 12:30 AM IST / Updated: Jul 26 2025, 11:50 AM IST

ಸಾರಾಂಶ

ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸೌರಶಕ್ತಿ ಅಳವಡಿಕೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಪ್ರಧಾನಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಮ್ ಉತ್ತಾನ್ ಮಹಾಭಿಯಾನ (ಪಿಎಂ ಕುಸುಮ್-ಬಿ) ಯೋಜನೆಯಡಿ ಜಿಲ್ಲೆಯ 121 ರೈತರಿಗೆ ಸೌರಶಕ್ತಿ ಭಾಗ್ಯ ಲಭಿಸಿದೆ.

ಶಿವಕುಮಾರ ಕುಷ್ಟಗಿ

ಗದಗ: ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸೌರಶಕ್ತಿ ಅಳವಡಿಕೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಪ್ರಧಾನಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಮ್ ಉತ್ತಾನ್ ಮಹಾಭಿಯಾನ (ಪಿಎಂ ಕುಸುಮ್-ಬಿ) ಯೋಜನೆಯಡಿ ಜಿಲ್ಲೆಯ 121 ರೈತರಿಗೆ ಸೌರಶಕ್ತಿ ಭಾಗ್ಯ ಲಭಿಸಿದೆ.

ಸರ್ಕಾರದ ನಿಯಮದಂತೆ, ಎಚ್‌ಟಿ (ಹೈ ಟೆನ್ಶನ್) ಮತ್ತು ಎಲ್‌ಟಿ (ಲೋ ಟೆನ್ಯನ್) ವಿದ್ಯುತ್ ಲೈನ್‌ನಿಂದ 500 ಮೀಟರ್ ಹೊರಗಿರುವ, ನೀರಾವರಿ ಪಂಪ್‌ಸೆಟ್ ಹೊಂದಿರುವ ರೈತರು ಕುಸುಮ್-ಬಿ ಯೋಜನೆಯ ಅಳವಡಿಕೆಗೆ ಅರ್ಹರಾಗಿದ್ದು, ಜಿಲ್ಲೆಯಲ್ಲಿ ಹೆಸ್ಕಾಂ ಅಧಿಕಾರಿಗಳು ಜಿಲ್ಲೆಯ 121 ರೈತರನ್ನು ಗುರುತಿಸಿದ್ದು, ಅವರಲ್ಲಿ 20 ರೈತರಿಗೆ ಈಗಾಗಲೇ ಯೋಜನೆ ಅಳವಡಿಕೆಗೆ ಅನುಮೋದನೆಯೂ ದೊರೆತಿದೆ.

ಜಿಲ್ಲೆಯಲ್ಲಿ ಎಚ್‌ಟಿ, ಎಲ್‌ಟಿ ವಿದ್ಯುತ್‌ ಲೈನ್‌ನಿಂದ 500 ಮೀಟರ್ ಒಳಗಿರುವ 7 ಸಾವಿರಕ್ಕೂ ಅಧಿಕ ಪಂಪ್‌ಸೆಟ್‌ಗಳು ಇನ್ನೂ ಇವೆ. ಈ ಪಂಪ್‌ಸೆಟ್‌ಗಳಿಗೆ ಪ್ರತಿ ತಿಂಗಳು ₹ 9.60 ಕೋಟಿ ಸಬ್ಸಿಡಿ ಜಿಲ್ಲೆಗೆ ದೊರೆಯಲಿದೆ. ಹಾಗಾಗಿ ಎಲ್ಲಾ ರೈತರು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಸೋಲಾರ್ ಅಳವಡಿಕೆ ಮಾಡಿಕೊಂಡರೆ ರೈತರಿಗೂ ಅನುಕೂಲ ಮತ್ತು ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆ ತಪ್ಪಲಿದೆ.

ಶೇ. 80 ಸಬ್ಸಿಡಿ: ಈ ಯೋಜನೆಯಲ್ಲಿ ಫಲಾನುಭವಿ ರೈತರಿಗೆ ಸಬ್ಸಿಡಿಯ ದೊಡ್ಡ ನೆರವು ಸಿಗಲಿದೆ. ಒಟ್ಟು ವೆಚ್ಚದಲ್ಲಿ ಶೇ. 50ರಷ್ಟು ರಾಜ್ಯ ಸರ್ಕಾರ, ಶೇ. 30ರಷ್ಟು ಕೇಂದ್ರ ಸರ್ಕಾರ ಭರಿಸಲಿದೆ. ರೈತರು ಕೇವಲ ಶೇ. 20ರಷ್ಟು ವೆಚ್ಚವನ್ನು ಮಾತ್ರ ಪಾವತಿಸಬೇಕಾಗುತ್ತದೆ. ಯೋಜನೆಯಡಿ ಅರ್ಹ ರೈತರ ಪಂಪ್‌ಸೆಟ್‌ಗಳಿಗೆ ಕ್ರೆಡಲ್ ಸಂಸ್ಥೆ ಮೂಲಕ ಸೋಲಾರ್ ಪಂಪ್‌ಸೆಟ್‌ಗಳನ್ನು ಅಳವಡಿಸುವ ಮಹತ್ವದ ಯೋಜನೆ ಇದಾಗಿದೆ.

ರೈತರು ಈ ಯೋಜನೆ ಸರ್ಕಾರದ ಆರ್ಥಿಕ ಹೊರೆಯನ್ನು ಕಡಿಮೆಗೊಳಿಸುವುದರೊಟ್ಟಿಗೆ ರೈತರು ಕೂಡಾ ದಿನಕ್ಕೆ 10 ತಾಸಿಗೂ ಹೆಚ್ಚು ಕಾಲ ವಿದ್ಯುತ್ ಬಳಕೆ ಮಾಡಿಕೊಳ್ಳಬಹುದಾಗಿದೆ.

​ರೈತರಿಗೆ ಲಾಭಗಳು: ರೈತರ ಪಂಪ್‌ಸೆಟ್‌ಗಳಿಗೆ ಇದುವರೆಗೂ ಸರ್ಕಾರದಿಂದ 7 ಗಂಟೆ ವಿದ್ಯುತ್ ಪೂರೈಕೆಯಾಗುತ್ತಿತ್ತು. ಸೋಲಾರ್ ಅಳವಡಿಕೆಯಿಂದ ರೈತರು 10 ಗಂಟೆಗಳವರೆಗೆ ವಿದ್ಯುತ್ ಬಳಸಬಹುದಾಗಿದೆ. ನೀರಾವರಿಗೆ ಮಾತ್ರವಲ್ಲದೆ, ರೈತರು ಹೈನುಗಾರಿಕೆ, ಇತರೆ ಕೃಷಿ ಚಟುವಟಿಕೆಗಳು, ನೀರು ಎತ್ತುವಳಿ ಮತ್ತು ತಮ್ಮ ಮನೆಗಳಿಗೂ ಸೋಲಾರ್ ವಿದ್ಯುತ್ ಬಳಸಬಹುದು. ಇದು ಕೃಷಿಯಲ್ಲಿ ರೈತರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗಲಿದೆ.

ಜಿಲ್ಲೆಗೆ 2023ರಲ್ಲಿ 8.80 ಕೋಟಿ, 2024ರಲ್ಲಿ 10.50, 2025ರಲ್ಲಿ 9.60 ಕೋಟಿ ರು. ಸಬ್ಸಿಡಿ ಬಂದಿದೆ.

ಪಿಎಂ ಕುಸುಮ್-ಬಿ ಯೋಜನೆಯು ರೈತರಿಗೆ ಆರ್ಥಿಕವಾಗಿ ಸದೃಢರಾಗಲು ಮತ್ತು ಶಕ್ತಿಯ ಸ್ವಾವಲಂಬನೆ ಸಾಧಿಸಲು ಉತ್ತಮ ಅವಕಾಶ ಒದಗಿಸುತ್ತಿದೆ. ಜಿಲ್ಲೆಯಲ್ಲಿ ಆರಂಭಿಕ ಹಂತದಲ್ಲಿ 121 ಪಂಪ್‌ಸೆಟ್‌ಗಳು ಯೋಜನೆಯಡಿ ಅರ್ಹತೆ ಪಡೆದಿವೆ. ಈ 121 ಪಂಪ್‌ಸೆಟ್‌ಗಳಿಗೆ ರಾಜ್ಯ ಸರ್ಕಾರದಿಂದ ಅಂದಾಜು ₹ 1.81 ಕೋಟಿ, ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ₹1.06 ಕೋಟಿ ಸಬ್ಸಿಡಿ ಲಭ್ಯವಾಗಲಿದೆ ಎಂದು ಹೆಸ್ಕಾಂ ಹಿರಿಯ ಅಧಿಕಾರಿನಜ್ಮನ್ನಿಸಾ ಕೆ. ಹೇಳಿದರು.

Read more Articles on