ಸಾರಾಂಶ
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ: ಇಲ್ಲಿನ ಸರಾಫಗಟ್ಟಿಯಲ್ಲಿ ಆರು ಅಡಿ ಎತ್ತರದ ಬೆಳ್ಳಿ ಗಣೇಶ ಮೂರ್ತಿ, ಎರಡೂವರೆ ಅಡಿ ಎತ್ತರದ ಬೆಳ್ಳಿಯಿಂದ ತಯಾರಿಸಿದ ಮೂಷಿಕ (ಇಲಿ) ಪ್ರತಿಷ್ಠಾಪಿಸಲಾಗುತ್ತಿದೆ. ಇಷ್ಟು ಎತ್ತರದ ಬೆಳ್ಳಿಯ ಮೂರ್ತಿ ಪ್ರತಿಷ್ಠಾಪಿಸಿರುವುದು ಇದು ಭಾರತದಲ್ಲಿಯೇ ಮೊದಲು ಎಂಬುದು ಸಂಘಟಕರ ಅಂಬೋಣ.ಗಣೇಶ ಹಬ್ಬ ಬಂದರೆ ಎಲ್ಲಿ ನೋಡಿದಲ್ಲಿ ಶ್ರೀಗಣೇಶನ ಮಂಟಪಗಳ ಆರ್ಭಟ ಮತ್ತು ಸಡಗರ ಕಾಣಬಹುದು. ಅದಕ್ಕೆ ಮೂಲ ಸ್ಥಾನ ಮತ್ತು ಎಲ್ಲ ಸಂಸ್ಥೆಗಳಿಗೆ ಪ್ರೇರಣೆಯೆಂದರೆ ಇಲ್ಲಿನ ಸರಾಫಗಟ್ಟಿ ಗಣೇಶೋತ್ಸವ ಮಂಡಳಿ. ಹುಬ್ಬಳ್ಳಿಯಲ್ಲಿ ಪ್ರಪ್ರಥಮವಾಗಿ ಸಾರ್ವಜನಿಕ ಶ್ರೀ ಗಣೇಶನನ್ನು ಪ್ರತಿಷ್ಠಾಪಿಸಿದ ಕೀರ್ತಿ ಈ ಗಣೇಶೋತ್ಸವ ಮಂಡಳಿಗೆ ಸಲ್ಲುತ್ತದೆ.
ಸರಾಫಗಟ್ಟಿ ಶ್ರೀಗಣೇಶೋತ್ಸವ ಮಂಡಳವು ಅಸ್ತಿತ್ವಕ್ಕೆ ಬರುವುದಕ್ಕಿಂತ ಪೂರ್ವದಲ್ಲಿ ನಗರದಲ್ಲಿ ಸಾರ್ವಜನಿಕವಾಗಿ ಶ್ರೀಗಣೇಶೋತ್ಸವ ಆಚರಿಸುತ್ತಿರಲಿಲ್ಲ. ಸಾರ್ವಜನಿಕವಾಗಿ ಕಾಮನ ಉತ್ಸವವನ್ನು ಮಾತ್ರ ಆಚರಿಸುತ್ತಿತ್ತು. 1958ರಲ್ಲಿ ದಿ. ಶ್ರೀ ರಾಮಾಸಾ ತುಳಜಣಸಾ ನಿರಂಜನ ಮತ್ತು ದಿ. ಕಾಳಪ್ಪ ಕಮಡೊಳ್ಳಿ ಕೂಡಿಕೊಂಡು ಯುವಕರಲ್ಲಿ ದೈವ ಭಕ್ತಿಯನ್ನುಂಟು ಮಾಡುವ ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸುವುದು ಒಳಿತು ಎಂದು ಶ್ರೀ ಗಣೇಶೋತ್ಸವ ಮಂಡಳಿ ಸ್ಥಾಪಿಸಿದರು. ಅಂದಿನಿಂದ ಪ್ರಾರಂಭವಾಯಿತು ಸಾರ್ವಜನಿಕ ಗಣೇಶೋತ್ಸವ.ಮುಂದೆ 12 ವರ್ಷ ಸಣ್ಣ ಪ್ರಮಾಣದಲ್ಲಿ ಶ್ರೀಗಣೇಶನ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಲಾಗುತ್ತಿತ್ತು. ಆ ಮೇಲೆ ಉತ್ಸವ ಅಧ್ಯಕ್ಷರನ್ನಾಗಿ ಎನ್.ಎಸ್. ಟೆಂಗಿನಕಾಯಿ ಅವರನ್ನು ನೇಮಿಸಲಾಯಿತು. ಎನ್.ಎಸ್. ಟೆಂಗಿನಕಾಯಿ, ಚಂದ್ರಹಾಸ ನಿರಂಜನ, ಎಸ್.ಎಸ್. ಕಮಡೊಳ್ಳಶೆಟ್ರು, ಆರ್.ಟಿ. ನಿರಂಜನ ಅಧ್ಯಕ್ಷತೆಯಲ್ಲಿ ಹಬ್ಬದಲ್ಲಿ ರೂಪಕ ಪ್ರದರ್ಶನ ಪ್ರಸ್ತುತಪಡಿಸಲು ಪ್ರಾರಂಭಿಸಲಾಯಿತು. ಅಂದಿನಿಂದ ಈವರೆಗೂ ಈ ಪದ್ಧತಿ ಮುಂದುವರೆಸಿಕೊಂಡು ಬರಲಾಗುತ್ತಿದೆ. ಈ ವರ್ಷ "ಪಾಡುರಂಗನ ಮಹಿಮೆ " ಸಾರುವ ರೂಪಕ ಪ್ರದರ್ಶಿಸಲಾಗುತ್ತಿದೆ.
೧೨೪ ಕೆಜಿ ಬೆಳ್ಳಿಯ ಗಣಪ: ಶಂಕರ ನಿರಂಜನ್ ಅವರು ಮಂಡಳದ ಅಧ್ಯಕ್ಷರಾದ ಬಳಿಕ ಎಲ್ಲರ ಅಭಿಪ್ರಾಯದ ಮೇರೆಗೆ 17 ವರ್ಷದ ಹಿಂದೆ 6 ಅಡಿ ಎತ್ತರದ 124ಕೆಜಿಯ ಬೆಳ್ಳಿಯ ಗಣೇಶ ಮೂರ್ತಿ ಹಾಗೂ ಎರಡೂವರೆ ಅಡಿ ಎತ್ತರದ ಮೂಷಕ(ಇಲಿ) ತಯಾರಿಸಿ ಪ್ರತಿಷ್ಠಾಪಿಸಿಕೊಂಡು ಬರಲಾಗುತ್ತಿದೆ. ಇದು ಭಾರತದಲ್ಲಿಯೇ ಇಷ್ಟು ಎತ್ತರದ ಬೆಳ್ಳಿಯಿಂದ ತಯಾರಿಸಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿರುವುದು ಮೊದಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಇಷ್ಟಾರ್ಥ ಸಿದ್ಧಿ ವಿನಾಯಕ: ಇದನ್ನು ಇಷ್ಟಾರ್ಥ ಸಿದ್ಧಿ ಗಣಪನೆಂದೇ ಖ್ಯಾತಿ ಪಡೆದಿದೆ. ಇಲ್ಲಿ ಪ್ರತಿಷ್ಠಾಪಿಸಿದ ಎರಡೂವರೆ ಅಡಿ ಎತ್ತರದ ಬೆಳ್ಳಿಯ ಮೂಷಕನ ಕಿವಿಯಲ್ಲಿ ತಾವು ಅಂದುಕೊಳ್ಳುವ ಇಷ್ಟಾರ್ಥ ಹೇಳಿಕೊಂಡರೆ ಒಂದು ವರ್ಷದಲ್ಲಿ ಈಡೇರುತ್ತವೆ ಎಂಬ ನಂಬಿಕೆಯಿದೆ.
ಮಂಡಳಿಯು ಹಲವು ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲೂ ಕೈ ಜೋಡಿಸಿದೆ. ಕಾರ್ಗಿಲ್ ಯುದ್ಧದ ವೇಳೆ ಮಂಡಳಿಯಿಂದ ₹೫೧ ಸಾವಿರ ದೇಣಿಗೆ ನೀಡಲಾಗಿದೆ. ದಾನಿಗಳು ನೀಡಿದ ದೇಣಿಗೆಯಿಂದ ಬರುವ ದತ್ತಿ ಹಣದಿಂದ ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುತ್ತದೆ ಎಂದು ಉತ್ತರ ಕರ್ನಾಟಕ ಜ್ಯುವೇಲರ್ಸ್ ಅಸೋಸಿಯೇಶನ್ಸ್ ಮಹಾಸಭಾದ ಅಧ್ಯಕ್ಷ ಗೋವಿಂದ ನಿರಂಜನ್ ಕನ್ನಡಪ್ರಭ ಕ್ಕೆ ತಿಳಿಸಿದರು.ಸರಾಫಗಟ್ಟಿ ಗಣೇಶ ಉತ್ಸವ ಮಂಡಳಿಯ ಅಧ್ಯಕ್ಷರಾಗಿ ದೇವದಾಸ್ .ಆರ್.ಹಬೀಬ ಕಾರ್ಯ ನಿರ್ವಹಿಸುತ್ತಿದ್ದು, ಪದಾಧಿಕಾರಿಗಳಾಗಿ ಮಂಜು ಹಬೀಬ, ಸಚಿನ್ ಮಿಸ್ಕಿನ್, ಸಿದ್ಧಾರ್ಥ ಮೆಹರವಾಡೆ, ಸಂತೋಷ ಪಾಲಂಕರ, ಗಜು ಹಬೀಬ, ನಿತೀನ ಪೂಜಾರ, ಪವನ ಬರಾಡೆ, ವೀರಣ್ಣ ಹುಲಿ, ಶಂಕರ ನಿರಂಜನ್, ಸುರೇಶ ಕಾಂಬಳೆ, ರಿತೇಶ ಚಿಲ್ಲಾಳ ಪದಾಧಿಕಾರಿಗಳಾಗಿದ್ದಾರೆ.
ಪ್ರತಿವರ್ಷ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸುತ್ತ ಬರಲಾಗುತ್ತಿದೆ. ಮುಂದೆಯೂ ಹಲವು ಸಾಮಾಜಿಕ ಕಾರ್ಯಚಟುವಟಿಕೆ ಹಮ್ಮಿಕೊಳ್ಳುವ ಉದ್ದೇಶ ಹೊಂದಿದೆ ಎಂದು ಸರಾಫಗಟ್ಟಿ ಗಣೇಶ ಉತ್ಸವ ಮಂಡಳಿಯ ಅಧ್ಯಕ್ಷ ದೇವದಾಸ್ .ಆರ್. ಹಬೀಬ ಹೇಳಿದರು.