ಮಡಿಕೇರಿ ಎಫ್‌ಎಂಕೆಎಂಸಿ ಕಾಲೇಜಿನಲ್ಲಿ ಫೀ.ಮಾ.ಕೆ.ಎಂ.ಕಾರ್ಯಪ್ಪ 126ನೇ ಜನ್ಮದಿನಾಚರಣೆ

| Published : Jan 30 2025, 12:30 AM IST

ಮಡಿಕೇರಿ ಎಫ್‌ಎಂಕೆಎಂಸಿ ಕಾಲೇಜಿನಲ್ಲಿ ಫೀ.ಮಾ.ಕೆ.ಎಂ.ಕಾರ್ಯಪ್ಪ 126ನೇ ಜನ್ಮದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 126ನೇ ಜನ್ಮದಿನವನ್ನು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು. ಗಣ್ಯರು, ವಿದ್ಯಾರ್ಥಿಗಳು ಕಾರ್ಯಪ್ಪ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 126ನೇ ಜನ್ಮದಿನವನ್ನು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ.ಬಿ.ರಾಘವ, ಮುಖ್ಯ ಅತಿಥಿಗಳು ಹಾಗೂ ಎನ್‌ಸಿಸಿ ಕೆಡೆಟ್‌ಗಳು ಕಾರ್ಯಪ್ಪ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಮೇಜರ್ ಡಾ.ಬಿ.ರಾಘವ ಅವರು, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅಪ್ರತಿಮ ಸೇನಾ ದಂಡ ನಾಯಕರಾಗಿದ್ದರು. ಯಾವುದೇ ಜಾತಿ, ಧರ್ಮ ಮತ್ತು ಜನಾಂಗಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ದೇಶಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಶಿಸ್ತು, ಸಂಯಮ, ಧೈರ್ಯ, ದೇಶಭಕ್ತಿಯ ಮೂಲಕ ಸೇನಾ ಸೇವೆ ಸಲ್ಲಿಸಿ, ತಮ್ಮ ಆದರ್ಶಗಳಿಂದ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.

ಕಾರ್ಯಪ್ಪ ಅವರ ಪುತ್ರ ಏರ್ ಮಾರ್ಷಲ್ ನಂದಾ ಕಾರ್ಯಪ್ಪ ವಾಯುದಳದಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಎರಡನೇ ಇಂಡೋ-ಪಾಕ್ ಯುದ್ಧದಲ್ಲಿ ಪಾಕಿಸ್ತಾನದ ಕೈದಿ ಆಗಿದ್ದಾಗ ಪುತ್ರನಿಗೆ ವಿಶೇಷ ಸವಲತ್ತುಗಳನ್ನು ನಿರಾಕರಿಸಿದ ಫೀ.ಮಾ.ಕಾರ್ಯಪ್ಪ ಅವರು ಎಲ್ಲಾ ಸಾಮಾನ್ಯ ಸೈನಿಕರಂತೆ ನನ್ನ ಪುತ್ರ ಕೂಡ ಒಬ್ಬ ಎಂದು ಪಾಕಿಸ್ತಾನಕ್ಕೆ ತಿಳಿಸುವುದರ ಮೂಲಕ ಅಪ್ಪಟ ದೇಶಪ್ರೇಮ ಮೆರೆದಿದ್ದರು ಎಂದು ಸ್ಮರಿಸಿದರು.

ಇಂತಹ ವೀರ ಸೇನಾ ನಾಯಕನಿಗೆ ಗೌರವ ಸಲ್ಲಿಸುವುದು ಮತ್ತು ಸದಾ ಸ್ಮರಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಯುವ ಜನತೆ ಫೀ.ಮಾ.ಕಾರ್ಯಪ್ಪ ಅವರ ಶಿಸ್ತು, ಕೌಶಲ್ಯ, ಧೈರ್ಯ, ದೇಶಪ್ರೇಮವನ್ನು ಮಾದರಿಯಾಗಿಟ್ಟುಕೊಂಡು ಗುರಿ ಸಾಧಿಸಬೇಕೆಂದು ಡಾ.ಬಿ.ರಾಘವ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪ್ರೊ.ಶ್ರೀಧರ್ ಆರ್.ಹೆಗಡೆ ಮಾತನಾಡಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಬಾಲ್ಯ ಜೀವನ, ಶಿಕ್ಷಣ, ಸಾಧನೆ ಮತ್ತು ಅವರ ರಾಜಕೀಯ ಜೀವನದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ಕೆ.ಬಸವರಾಜು, ಗೋಣಿಕೊಪ್ಪ ಕಾವೇರಿ ಕಾಲೇಜಿನ ಡಾ.ಪಿ.ಪಿ.ಸವಿತ, ಮಡಿಕೇರಿ ಮಹಿಳಾ ಕಾಲೇಜಿನ ಎನ್.ಪಿ.ಸತೀಶ್, ಡಾ.ಎನ್.ಪಿ.ಕಾವೇರಿ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರೊ.ಗಾಯತ್ರಿದೇವಿ, ಕೆ.ಎಂ.ಪೂಣಚ್ಚ, ಡಾ.ಕೆ.ಶೈಲಶ್ರೀ ಮತ್ತಿತರರಿದ್ದರು.

ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಕೆ.ಸೌಮ್ಯಾ ಸ್ವಾಗತಿಸಿದರು. ಕೆಡೆಟ್ ಎಚ್.ಆರ್.ಸಂದೇಶ್ ನಿರೂಪಿಸಿದರು. ಗ್ರಂಥಪಾಲಕಿ ಡಾ.ಸಿ.ವಿಜಯಲತ ವಂದಿಸಿದರು. ಎನ್‌ಸಿಸಿ ವಿದ್ಯಾರ್ಥಿ ನಾಯಕರಾದ ಎಸ್‌ಯುಒ ಗುಣಶೇಖರ್, ಜೆಯುಒ ಅಭಿ ಉತ್ತಯ್ಯ, ಜೆಯುಒ ಅರ್ಚನಾ ಹಾಗೂ ಉಪನ್ಯಾಸಕಿ ಕುರ್ಶಿದ ಬಾನು ಕಾರ್ಯಕ್ರಮ ಸಂಯೋಜಿಸಿದರು.