ಸಾರಾಂಶ
- ಸಂಸದ ಜಿ. ಕುಮಾರನಾಯಕ ನೇತೃತ್ವದಲ್ಲಿ ನಡೆದ ದಿಶಾ ಸಭೆಯಲ್ಲಿ ಆಘಾತಕಾರಿ ಅಂಶ ಬೆಳಕಿಗೆ
- ಗರ್ಭಿಣಿ, ತಾಯಿ, ಶಿಶುಗಳ ಮರಣ ಪ್ರಮಾಣ ತಗ್ಗಿಸಲು ವಿಶೇಷ ಗಮನಕ್ಕೆ ಆರೋಗ್ಯ ಇಲಾಖೆಗೆ ಸಂಸದರ ಸೂಚನೆಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯಲ್ಲಿ ಏಪ್ರೀಲ್ 2024 ರಿಂದ ಅಕ್ಟೋಬರ್ ಈ ಅಂತ್ಯದವರೆಗೆ 127 ನವಜಾತ ಶಿಶುಗಳು ಮರಣ ಹೊಂದಿದ ಆಘಾತಕಾರಿ ಅಂಶ ಜಿ.ಪಂ ಸಭಾಂಗಣ ದಲ್ಲಿ, ರಾಯಚೂರು ಸಂಸದ ಜಿ. ಕುಮಾರನಾಯಕ ಅವರ ನೇತೃತ್ವದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆಯಲ್ಲಿ ಅನಾವರಣಗೊಂಡಾಗ, ಎಲ್ಲರಲ್ಲಿ ಆತಂಕ ಮನೆ ಮಾಡಿತ್ತು.ದಿಶಾ ಸಭೆಯಲ್ಲಿ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಇಂತಹ ಆಘಾತಕಾರಿ ಅಂಶದ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಂಸದ ಜಿ. ಕುಮಾರನಾಯಕ, ಜಿಲ್ಲೆಯಲ್ಲಿ ಗರ್ಭಿಣಿ ತಾಯಿ-ಶಿಶು ಮರಣ ಪ್ರಮಾಣ ತಗ್ಗಿಸಲು ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ವಿಶೇಷ ಗಮನ ನೀಡುವಂತೆ ಸೂಚಿಸಿದರು.
ಕಳೆದ 2024 ರ ಏಪ್ರಿಲ್‌ನಿಂದ ಅಕ್ಟೋಬರ್ ಅಂತ್ಯದವರೆಗೆ 14,000 ಹೆರಿಗೆಗಳಲ್ಲಿ 8 ತಾಯಂದಿರರ ಮರಣ ಹಾಗೂ 127 ಶಿಶುಗಳ ಮರಣ ಆಗಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಜಿಲ್ಲೆಯ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಜಿಲ್ಲೆಯಲ್ಲಿ ಈ ರೀತಿಯ ಘಟನೆ ಗಂಭೀರವಾಗಿರ ಪರಿಗಣಿಸಬೇಕು, ಮುಂದಿನ ದಿನಗಳಲ್ಲಿ ಗರ್ಭಿಣಿ ತಾಯಿ-ಶಿಶುಮರಣ ಪ್ರಮಾಣ ತಗ್ಗಿಸುವ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಸಾಂಸ್ಥಿಕ ಹೆರಿಗೆ ಬಗ್ಗೆ ಪ್ರೋತ್ಸಾಹಿಸಬೇಕು. ಬಾಲ್ಯ ವಿವಾಹ ಬಗ್ಗೆ ದೂರು ನೀಡುವವರಿಗೆ ಪ್ರೋತ್ಸಾಹಿಸಬೇಕು, ಬೇಟಿ ಬಚಾವೋ, ಬೇಟಿ ಪಡಾವೋ, ಭಾಗ್ಯಲಕ್ಷ್ಮಿ ಯೋಜನೆಗಳ ಕುರಿತು ಜಾಗೃತಿ ಮೂಡಿಸಬೇಕು. ತಾಂಡಾ, ಹಟ್ಟಿ, ಹಿಂದುಳಿದ ಪ್ರದೇಶ, ಜಾಗೃತಿ ಇಲ್ಲದ ಸಮುದಾಯದಲ್ಲಿ ಅರಿವು ಮೂಡಿಸುವಂತೆ ಸಂಸದ ಜಿ. ಕುಮಾರನಾಯಕ ಸಲಹೆ ನೀಡಿದರು.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಜಲಾನಯನ ಅಭಿವೃದ್ಧಿ ಯೋಜನೆಗಳಡಿ ಜಲಾನಯನ ಅಭಿವೃದ್ಧಿ, ಸ್ವಸಹಾಯ ಗುಂಪುಗಳಿಗೆ ಆವರ್ತನಿಧಿ ಸಮರ್ಪಕ ವಿತರಣೆ, ಬಂಡಿಂಗ್, ಸುಸ್ಥಿತಿಗಳ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿ.ಪಂ ಸಿಇಒ ಪರಿಶೀಲಿಸುವಂತೆ ತಿಳಿಸಿದ ಅವರು, ವಿವಿಧ ಯೋಜನೆಗಳ ಕುರಿತು ಮಾಹಿತಿ ಪಡೆದು, ಯೋಜನೆಗಳ ಕಾರ್ಯಗತ ಚುರುಕಿಗೆ ಸೂಚಿಸಿದರು.ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಸಿಂದಗಿ-ಕೊಡಂಗಲ್-ರಾ.ಹೆ, ರಾ.ಹೆ ಅಭಿವೃದ್ಧಿ ಹಾಗೂ ಶಹಾಪುರ ಬೈಪಾಸ್ ರಸ್ತೆ ಅಭಿವೃದ್ಧಿ ಬಗ್ಗೆ ವರದಿ ಸಲ್ಲಿಸಬೇಕು. ಪ್ರಧಾನ ಮಂತ್ರಿಗ ಉದ್ಯೋಗ ಸೃಜನೆ ಯೋಜನೆ ಬಗ್ಗೆ ಅರಿವು ಮೂಡಿಸಬೇಕು. ಜಲಧಾರೆ ಯೋಜನೆಯಡಿ ಹೆಚ್ಚುವರಿ ಓವರ್ ಹೆಡ್ ಟ್ಯಾಂಕುಗಳ ಬೇಡಿಕೆ ವರದಿ ಮೂಲ ಯೋಜನೆಯಲ್ಲಿ ಸೇರಿಸಬೇಕು. ಈ ಕುರಿತು ಹತ್ತು ದಿನದಲ್ಲಿ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಎಲ್ಲ ಶಾಲೆಗಳಿಗೆ ಕಂಪೌಂಡ್, ಸೌಲಭ್ಯ, ರಿಂಗ್ ರಸ್ತೆಗೆ ಸಂಬಂಧಿಸಿದ ಭೂಸ್ವಾಧೀನ ತಕ್ಷಣ ಆಗಬೇಕು. ಶಾಲೆಯಿಂದ ಮಕ್ಕಳು ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.ಗುರಮಠಕಲ್ ಶಾಸಕ ಶರಣಗೌಡ ಕಂದಕೂರು, ಜಿಲ್ಲೆಗೆ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು. ಮನರೇಗಾ ಯೋಜನೆಯಡಿ ಅರ್ಹರಿಗೆ ಸೌಲಭ್ಯ ಕಲ್ಪಿಸಿ, ಪರಂಪರಾಗತ ಕೃಷಿ ವಿಕಾಸ ಯೋಜನೆ, ಸಿಂದಗಿ ಕೊಡಂಗಲ್ ರಾ.ಹೆ ಉನ್ನತೀಕರಣ, ನೂರು ಕೋ. ರು.ಗಳ ಕೆರೆ ಅಭಿವೃದ್ಧಿ ಯೋಜನೆ ಜಾರಿಗೆಗೆ ಕೇಂದ್ರ ಮಟ್ಟದಲ್ಲಿ ಪ್ರಯತ್ನಿಸುವಂತೆ ಸಂಸದರಲ್ಲಿ ಮನವಿ ಮಾಡಿದರು.
ಶಾಸಕ ರಾಜಾ ವೇಣುಗೋಪಾಲ ನಾಯಕ, ರೈತರಿಗೆ ಇರುವ ಯೋಜನೆ ಅರಿವು ಮೂಡಿಸಿ, ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಸಲಹೆ ನೀಡಿದರು. ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ, ಜಿ.ಪಂ ಸಿಇಒ ಲವೀಶ ಒರಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ್, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.-
30ವೈಡಿಆರ್9: ಯಾದಗಿರಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆ ಜರುಗಿತು.---000---