ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಭಾರತರತ್ನ ಸುಭಾಷ್ ಚಂದ್ರ ಬೋಸ್ ನಮ್ಮ ಭಾರತದ ಸ್ವಾತಂತ್ರ್ಯ ಸೂರ್ಯ. ನಮ್ಮ ದೇಶದ ಸ್ವಾತಂತ್ರ್ಯದಾಕಾಶದಲ್ಲಿ ಮಹಾತ್ಮ ಗಾಂಧೀಜಿ ಅವರು ತಮ್ಮ ತಣ್ಣನೆಯ ಸಾತ್ವಿಕ ವ್ಯಕ್ತಿತ್ವದಿಂದ ಪೂರ್ಣ ಚಂದ್ರನಾದರೆ, ತಮ್ಮ ಕ್ರಾಂತಿಕಾರಿ ವ್ಯಕ್ತಿತ್ವದಿಂದ ತಮ್ಮನ್ನೇ ತಾವು ಸುಟ್ಟುಕೊಳ್ಳುತ್ತಲೇ ಬೇಳಕಾದ ಬೋಸ್ ಅವರು ಸೂರ್ಯ ಎಂದು ಕವಿ ಜಯಪ್ಪ ಹೊನ್ನಾಳಿ ಹೇಳಿದರು.ಮೈಸೂರು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಬನ್ನಿಮಂಟಪದ ಸಂತ ಮಥಾಯಿಸ್ ಪ್ರೌಢಶಾಲಾ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ 2024-25ನೇ ಸಾಲಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.ಮಹಾನ್ ದೇಶಭಕ್ತ, ಅಪೂರ್ವ ಹೋರಾಟಗಾರ, ಅನನ್ಯ ಸಂಘಟಕ, ಸಮರ್ಪಣೆಗೆ, ಬದ್ಧತೆಗೆ, ಕ್ರಾಂತಿಕಾರಿ ಮನೋಧೋರಣೆಗೆ, ರಾಷ್ಟ್ರೀಯವಾದಿ ವ್ಯಕ್ತಿತ್ವಕ್ಕೆ, ಕೆಚ್ಚೆದೆಯ ಹೋರಾಟಕ್ಕೆ ಈ ಪರಮ ತ್ಯಾಗಿ ಒಂದು ಆದರ್ಶದ ರೂಪಕವಾಗಿದ್ದಾರೆ ಎಂದರು.ಸುಭಾಷ್ಚಂದ್ರ ಬೋಸ್ ಅವರು ಅಂದೇ ಆತ್ಮನಿರ್ಭರ ಭಾರತದ ಕನಸನ್ನು ಕಂಡಂಥವರು, ರಕ್ತ ಕೊಡಿ, ಸ್ವಾತಂತ್ರ್ಯ ಕೊಡುತ್ತೇನೆ ಎಂದು ಕರೆ ನೀಡಿ, ಬ್ರಿಟಿಷರ ನಿದ್ದೆ ಕೆಡೆಸಿ, ಸೂರ್ಯಮುಳುಗದ ಸಾಮ್ರಾಜ್ಯ ಕಟ್ಟಿದವರಿಗೆ ಅಕ್ಷರಶಃ ಸಿಂಹಸ್ವಪ್ನವಾಗಿದ್ದರು, 1920ರಲ್ಲಿ ಬ್ರಿಟಿಷರ ಐಸಿಎಸ್ಅಂದರೆ ಇಂಡಿಯನ್ ಸಿವಿಲ್ ಸರ್ವೀಸ್ ಪರೀಕ್ಷೆಯನ್ನು ನಾಲ್ಕನೇ ಸ್ಥಾನಿಗರಾಗಿ ಉತ್ತೀರ್ಣರಾಗಿ, ತಮ್ಮ ಮೇಧಾವಿತನವನ್ನು ಸಾಬೀತುಪಡಿಸಿ ಅವರ ಕೈಕೆಳಗೆ ಗುಲಾಮನಾಗಿ ಕೆಲಸ ಮಾಡಲಾರೆ ಎಂದು ಆ ಪದವಿ ತಿರಸ್ಕರಿಸಿ, ಸ್ವಾಭಿಮಾನ ಮೆರೆದಿದ್ದಾಗಿ ಅವರು ಹೇಳಿದರು.ಸ್ವಾತಂತ್ರ್ಯ ಚಳುವಳಿ ವೇಳೆ ಮ್ಯಾಜಿಸ್ಟ್ರೇಟರು ಆರು ತಿಂಗಳ ಶಿಕ್ಷೆ ವಿಧಿಸಿದಾಗ ಬರಿಯ ಆರು ತಿಂಗಳೇ..!? ನನ್ನದೇನು ಕೋಳಿ ಕದ್ದ ಅಪರಾಧವೇ..!? ಎಂದು ಪ್ರತಿಕ್ರಿಯಿಸಿದ್ದರು ಬೋಸ್, ಕಾಂಗ್ರೆಸ್ ನ ಶಕ್ತಿಹೀನ ನಾಯಕತ್ವ, ದುರ್ಬಲ ಒಪ್ಪಂದಗಳು, ಸ್ವಾಭಿಮಾನ ಶೂನ್ಯ ವರ್ತನೆಗಳಿಗೆ ಪ್ರತಿಯಾಗಿ, ಆತ್ಮಾಭಿಮಾನದ ಸ್ವರಾಜ್ಯ ಹೋರಾಟಕ್ಕೆ ಬಲತುಂಬಿದರು. ರಾಷ್ಟ ಎಲ್ಲಕ್ಕಿಂತ ಮೊದಲು ಎಂಬ ಧ್ಯೇಯವನ್ನಿಟ್ಟು, ಭಾರತದ ವಿಮೋಚನೆಗಾಗಿ ಅಜಾದ್ ಹಿಂದ್ ಸೈನ್ಯ ಕಟ್ಟಿ, ಅದರ ಕಮಾಂಡರ್ ಇನ್ ಚೀಪ್ ಆಗಿ, ದೇಶ ವಿದೇಶಗಳನ್ನೂ ಮಿಂಚಿನಂತೆ ಸುತ್ತಿ, ಅನೇಕ ರಾಷ್ಟ್ರೀಯ ನಾಯಕರನ್ನು ಕಂಡು, ಭಾರತ ಸ್ವಾತಂತ್ರ್ಯಗೊಳಿಸುವ ಕಾರಣಕ್ಕಾಗಿ ಸಹಾಯ ಕೇಳಿದ್ದಾಗಿ ಅವರು ತಿಳಿಸಿದರು.ಆ ಕಾರಣಕ್ಕಾಗಿಯೇ ಜಪಾನ್ ನಿಂದ ರಷ್ಯಾಕ್ಕೆ ಹೊರಟಾಗ ವಿಮಾನ ಅಪಘಾತದಲ್ಲಿ ಬಹುಪಾಲು ಸುಟ್ಟು; ಚಿಕಿತ್ಸೆ ಫಲಕಾರಿಯಾಗದೆ, ಮಾತೃಭೂಮಿಯನ್ನು ಮುಕ್ತಗೊಳಿಸುವ ಪ್ರಯತ್ನಪೂರ್ಣ ಹೋರಾಟದಲ್ಲೇ ಮುಕ್ತರಾದರು. ಆದರೆ ಅವರು ಇಂದೂ ಕೂಡಾ ದೇಶಪ್ರೇಮಿಗಳಾದ ಭಾರತೀಯರೆದೆಯಲ್ಲಿ ಚಿರಂಜೀವಿಗಳೇ ಆಗಿದ್ದಾರೆ ಎಂದರು.ಜೈಹಿಂದ್ ಅವರದೇ ಅಮೃತ ಘೋಷಣೆಯಾಗಿದ್ದು, ಅವರಾಶಯದಂತೆ ದೇಶಾಭಿಮಾನಿಗಳಾಗಿ ಬದುಕುವುದೊಂದೇ ಬೋಸ್ ಅವರಿಗೆ ನಾವು ಕೊಡಬಹುದಾದ ನಿಜವಾದ ಗೌರವ, ಹಿಂದೂಸ್ಥಾನದ ಆ ಹುಲಿಯಂತೆ ಮೂರು ದಿನ ಬದುಕಿದರೂ ಅದು ಸಾರ್ಥಕ ಬದುಕೇ, ಇಲಿಯಂತೆ ನೂರು ದಿನ ಬದುಕಿದರೇನೂ ಪ್ರಯೋಜನವಿರದು ಎಂದಿದ್ದಾಗಿ ಅವರು ಹೇಳಿದರು.ಶಿಕ್ಷಣ ಇಲಾಖೆಯ ಸಹ ನಿರ್ದೇಶಕ ಡಾ. ಪಾಂಡುರಂಗ ಕಾರ್ಯಕ್ರಮ ಉದ್ಘಾಟಿಸಿದರು. ಬಿಇಒ ಎಸ್. ರೇವಣ್ಣ ಅತಿಥಿಯಾಗಿದ್ದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಸಿ.ಬಿ. ಅರುಣ್ ಕುಮಾರ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಿ.ಎ. ಸೋಮಶೇಖರ್, ಸಹಾಯಕ ನಿರ್ದೇಶಕ ಲಿಂಗರಾಜು, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಎಸ್. ಗೋಪಿನಾಥ್, ಮೈಸೂರು ಉತ್ತರ ವಲಯದ ದೈಹಿಕ ಶಿಕ್ಷಣ ಪರಿವೀಕ್ಷಕ ಜಿ. ನಾಗೇಶ್, ಶಿಕ್ಷಕರಾದ ಕೃಷ್ಣ, ಸಿಂಧು, ವೆಂಕಟೇಶ್, ಮಕ್ಸೂದ್ ಅಹಮ್ಮದ್, ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ಶ್ರೀನಿವಾಸ್, ಮುತ್ತಣ್ಣ, ಮಂಜುನಾಥ್, ರಾಜೇಶ್, ನಂಜುಂಡನಾಯಕ ಮೊದಲಾದವರು ಇದ್ದರು.ಉತ್ತಮ ಶಿಕ್ಷಕರನ್ನು ಸುಭಾಷ್ಚಂದ್ರ ಬೋಸ್ ಅವರ ಹೆಸರಿನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಿವೃತ್ತ ಶಿಕ್ಷಕರನ್ನು ಅಭಿನಂದಿಸಲಾಯಿತು. ಹೆಚ್ಚು ಅಂಕ ಪಡೆದ ದೈಹಿಕ ಶಿಕ್ಷಣ ಶಿಕ್ಷಕ ಶಿಕ್ಷಕಿಯರ ಮಕ್ಕಳನ್ನು ಗೌರವಿಸಲಾಯಿತು.