ಸಾರಾಂಶ
ಎಸ್.ಜಿ. ತೆಗ್ಗಿನಮನಿ
ಕನ್ನಡಪ್ರಭ ವಾರ್ತೆ ನರಗುಂದಕಳೆದ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ಮಳೆ ಕೈ ಕೊಟ್ಟಿದ್ದರಿಂದ ರೈತರು ಬೆಳೆ ಹಾನಿ ಮಾಡಿಕೊಂಡು ಒಂದು ವರ್ಷ ಗತಿಸಿದರೂ ಸರ್ಕಾರ ಕೆಲವೇ ರೈತರಿಗೆ ಪರಿಹಾರ ನೀಡಿದೆ. ಉಳಿದ ರೈತರಿಗೆ ಬೆಳೆ ಹಾನಿ ಪರಿಹಾರ ಬರದಿದ್ದರಿಂದ ಪ್ರತಿ ದಿನ ಉದ್ಯೋಗ ಬಿಟ್ಟು ಅನ್ನದಾತರು ಅಲೆದಾಟ ಮಾಡುತ್ತಿದ್ದಾರೆ.
ಹಿಂದಿನ ವರ್ಷ ತಾಲೂಕಿನ ರೈತರು ಅಲ್ಪಸ್ವಲ್ಪ ಮಳೆಗೆ ವಾಣಿಜ್ಯ ಬೆಳೆಗಳಾದ ಹೆಸರು, ಗೋವಿನ ಜೋಳ, ಈರುಳ್ಳಿ, ಬಿ.ಟಿ. ಹತ್ತಿ, ತೊಗರಿ, ಸೂರ್ಯಕಾಂತಿ, ಮೆಣಸಿನಕಾಯಿ ಸೇರಿದಂತೆ ಮುಂತಾದ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಬಳಿಕ ಮಳೆಯಾಗದ್ದರಿಂದ ಬಿಸಲಿನ ತಾಪಕ್ಕೆ ಬೆಳೆ ಒಣಿಗಿ ಹೋಯಿತು. ಸರ್ಕಾರ ಒಂದು ವರ್ಷದ ನಂತರ ಬೆಳೆ ಹಾನಿ ಪರಿಹಾರವನ್ನು ಕೆಲವೇ ಕೆಲ ರೈತರಿಗೆ ನೀಡಿದೆ, ಉಳಿದ ರೈತರು ಬೆಳೆ ಹಾನಿ ಪರಿಹಾರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.ತಾಲೂಕಿನಲ್ಲಿ 25174 ರೈತರ ಖಾತಗಳವೆ. ಇದರಲ್ಲಿ ಸರ್ಕಾರ ಮೊದಲನೇ ಮತ್ತು ಎರಡುನೇ ಕಂತುಗಳಲ್ಲಿ 12962 ರೈತರಿಗೆ ಮಾತ್ರ ಬೆಳೆ ಹಾನಿ ಪರಿಹಾರ ನೀಡಿದೆ. ಉಳಿದ 12962 ರೈತರಿಗೆ ಮೂರು ಮತ್ತು ನಾಲ್ಕನೇ ಕಂತನಲ್ಲಿ ಬೆಳೆ ಹಾನಿ ಪರಿಹಾರವನ್ನು ಸರ್ಕಾರ ನೀಡುತ್ತದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಂಗಳಿಂದ ಹೇಳುತ್ತಿದ್ದಾರೆ. ಆದರೂ ಪರಿಹಾರ ಸಿಗದ ರೈತರು ಪ್ರತಿ ದಿವಸ ತಮ್ಮ ನಿತ್ಯದ ಉದ್ಯೋಗ ಬಿಟ್ಟು ತಮ್ಮ ಜಮೀನಗಳ ದಾಖಲೆಗಳನ್ನು ಹಿಡಿದುಕೊಂಡು ಬ್ಯಾಂಕ್‌ಗಳಿಗೆ ಹೋಗಿ ಬೆಳೆ ಹಾನಿ ಪರಿಹಾರ ಜಮಾ ಆಗಿದೆಯಾ, ಇಲ್ಲವಾ ಎಂದು ಪರಶೀಲಿಸುವಂತಾಗಿದೆ.
ಬೆಳೆ ಹಾನಿ ಪರಿಹಾರ ಬಾರದ 3127 ರೈತರು ತಹಸೀಲ್ದಾರ್ ಕಚೇರಿಗೆ ತಮಗೆ ಪರಿಹಾರ ಬಂದಿಲ್ಲ ಎಂದು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬೇಗ ಪರಿಹಾರ ನೀಡಬೇಕು ಎಂದು ಈಗಾಗಲೇ ಒಂದು ದಿನದ ಧರಣಿ ಮತ್ತು ಮೂರು ಬಾರಿ ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಸವರಾಜ ಸಾಬಳೆ ಆರೋಪಿಸಿದರು.ತಾಲೂಕಿನಲ್ಲಿ 12962 ರೈತರಿಗೆ ಬೆಳೆ ಹಾನಿ ಪರಿಹಾರ ಬಂದಿಲ್ಲ, ಬೇಗ ಉಳಿದ ರೈತರಿಗೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಸರ್ಕಾರಕ್ಕೆ ಮಾಹಿತಿ ನೀಡಿದ್ದೇವೆ ಎಂದು ತಹಸೀಲ್ದಾರ್ ಶ್ರೀಶೈಲ ತಳವಾರ ತಿಳಿಸಿದ್ದಾರೆ.