ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣದ ಲಕ್ಷ್ಮೀಪುರದಲ್ಲಿನ ಶ್ರೀ ವೀರಾಂಜನೇಯ ಸ್ವಾಮಿಯ ಜಯಂತಿ ಮಹೋತ್ಸವ ಸಾವಿರಾರು ಭಕ್ತಾದಿಗಳೊಂದಿಗೆ ಸಡಗರ, ಸಂಭ್ರಮದಿಂದ ನಡೆಯಿತು.ಶನಿವಾರ ಬೆಳಗ್ಗಿನಿಂದಲೇ ಗಣಪತಿ ಪೂಜೆ, ಪುಣ್ಯಾಹ ವಾಚನ, ಸಂಕಲ್ಪ, ಪೂರ್ವಕ, ಶ್ರೀಸ್ವಾಮಿಗೆ ಫಲ ಪಂಚಾಮೃತ ಅಭಿಷೇಕ, ಪವಮಾನ, ಪಂಚಸೂಕ್ತ ಅಭಿಷೇಕ, ಗಣಪತಿ ಹೋಮ, ನವಗ್ರಹ ಹೋಮ, ರಾಮ ತಾರಕ ಹೋಮ, ಆಂಜನೇಯ ಮೂಲ ಮಂತ್ರ ಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮಾಡಲಾಯಿತು. ಈ ಎಲ್ಲಾ ಪೂಜಾ ಕೈಂಕರ್ಯಗಳನ್ನು ಪ್ರಧಾನ ಅರ್ಚಕರು ಹಾಗೂ ಪುರೋಹಿತ ವೃಂದದವರು ನಡೆಸಿಕೊಟ್ಟರು.
ಶ್ರೀ ಆಂಜನೇಯಸ್ವಾಮಿ ಸಮ್ಮುಖದಲ್ಲಿ ತೇರಾ ಕೋಟಿ ರಾಮನಾಮ ಜಪದ ಸಂಕಲ್ಪವನ್ನು ಹನುಮ ಮಾಲಧಾರಿಗಳು ಮಾಡಿದರು. ಬಳಿಕ ದೇಗುಲದಲ್ಲಿ ಹನುಮನಿಗೆ ವಿಶೇಷ ಮಹಾ ಮಂಗಳಾರತಿ ನಡೆಸಿ, ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಿದರು. ದೇಗುಲದ ಆವರಣದಲ್ಲಿ ಹಮ್ಮಿಕೊಂಡ ಲಕ್ಷ್ಮೀ ನಾರಾಯಣ ಹೃದಯ ಹೋಮ ಹಾಗೂ ಆಂಜನೇಯ ಮೂಲಮಂತ್ರ ಹೋಮಕ್ಕೆ ದೇಗುಲ ಸಮಿತಿ ಸದಸ್ಯರು ಪೂರ್ಣಾಹುತಿ ಅರ್ಪಿಸಿದರು.ಈ ವೇಳೆ ಮಾತನಾಡಿದ ಶಾಸಕ ಹುಲ್ಲಳ್ಳಿ ಸುರೇಶ್, ಬೇಲೂರಿನಲ್ಲಿ ೧೨ನೇ ವರ್ಷದ ಹನುಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಭಗವಾನ್ ಹನುಮಂತ ನಮ್ಮೆಲ್ಲರನ್ನು ಕಾಪಾಡಲಿ. ಈ ನಾಡಿನ ಜನರು ಸುಖ, ಸಂತೋಷದಿಂದ ಬಾಳಲು ಆಶೀರ್ವದಿಸಲಿ ಎಂದು ಹೇಳಿದರು.
ಹನುಮ ಜಯಂತಿಗೆ ಸಹಕರಿಸಿದ ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ದೇಗುಲ ಸಮಿತಿ, ಪುರಸಭೆಯವರಿಗೆ ಅಭಿನಂದನೆ ಸಲ್ಲಿಸಿದರು.ದೇಗುಲ ಸಮಿತಿ ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, ಹನುಮ ಜಯಂತಿಗೆ ಭಕ್ತರು ಸಹಕಾರ ನೀಡಿದ್ದಾರೆ. ಅದರಂತೆ ಎಲ್ಲರೂ ಧನ ಸಹಾಯ ಮಾಡಿದ್ದು ಅದನ್ನು ಸದ್ಬಳಸಿಕೊಂಡು ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ನಡೆಸುತ್ತೇವೆ. ಬಂದಂತಹ ಭಕ್ತರಿಗೆ ಪ್ರಸಾದ ವಿನಿಯೋಗ ಏರ್ಪಡಿಸಿದ್ದೇವೆ ಎಂದರು.
ತಹಸೀಲ್ದಾರ್ ಎಂ. ಮಮತಾ ಮಾತನಾಡಿ, ೧೨ನೇ ವರ್ಷದ ಹನುಮ ಜಯಂತಿಯಂದು ಪ್ರತಿ ಮನೆಯಲ್ಲಿಯೂ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಮೆರವಣಿಗೆ ನಡೆಯುವವರೆಗೂ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಮಿತಿಯವರೊಂದಿಗೆ ಇದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸುತ್ತೇವೆ ಎಂದರು.ಪುರಸಭೆ ಅಧ್ಯಕ್ಷ ಎ.ಆರ್. ಅಶೋಕ್, ಸದಸ್ಯ ಜಗದೀಶ್,ತೀರ್ಥಂಕರ್ ಹಾಗೂ ಸಮಿತಿ ಸದಸ್ಯರು ಇತರರು ಇದ್ದರು.