ಚಂದಗಾಲು ಗ್ರಾಪಂ ವ್ಯಾಪ್ತಿಯಲ್ಲಿ ೩೦ ಕೋಟಿ ರು. ಕೆಲಸ ನಡೆದಿದೆ. ದೊಡ್ಡ ಕೊತ್ತಗೆರೆ ರಸ್ತೆಗೆ ೨೦ ಲಕ್ಷ ರು. ಚಿಕ್ಕಕೊತ್ತಗೆರೆಗೆ ೧೫ ಲಕ್ಷ ರು. ಮಾಚೇನಹಳ್ಳಿಗೆ ಹೋಗುವ ರಸ್ತೆ ಅಭಿವೃದ್ಧಿಗೆ ೬೫ ಲಕ್ಷ ರು. ನೀಡಿದ್ದು, ಕೆಲಸ ಪ್ರಗತಿಯಲ್ಲಿ ಇದೆ. ಚಲ್ಲನಾಯಕನಹಳ್ಳಿ ಸಮುದಾಯ ಭವನಕ್ಕೆ ೨೫ ಲಕ್ಷ ರು., ೨೦ ಕೋಟಿ ರು. ವೆಚ್ಚದಲ್ಲಿ ಗದ್ದೆ ಬಯಲಿನ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ೧೩೦೦ ಕೋಟಿ ರು. ವೆಚ್ಚದ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.

ತಾಲೂಕಿನ ಚಂದಗಾಲು ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಜನಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿ, ಇದುವರೆಗೂ ಮಂಡ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ೧೨೦೦ ಕೋಟಿ ರು. ಹಣ ತಂದಿದ್ದೇನೆ. ಇನ್ನೂ ೧೩೦೦ ಕೋಟಿ ರು. ಕಾಮಗಾರಿಗೆ ಹಣಕಾಸಿನ ಮಂಜೂರಾತಿ ದೊರಕಿದ್ದು, ಮುಖ್ಯಮಂತ್ರಿಗಳಿಂದ ದಿನಾಂಕ ನಿಗದಿಪಡಿಸಿಕೊಂಡು ಚಾಲನೆ ನೀಡುವುದಾಗಿ ತಿಳಿಸಿದರು.

ಚಂದಗಾಲು ಗ್ರಾಪಂ ವ್ಯಾಪ್ತಿಯಲ್ಲಿ ೩೦ ಕೋಟಿ ರು. ಕೆಲಸ ನಡೆದಿದೆ. ದೊಡ್ಡ ಕೊತ್ತಗೆರೆ ರಸ್ತೆಗೆ ೨೦ ಲಕ್ಷ ರು. ಚಿಕ್ಕಕೊತ್ತಗೆರೆಗೆ ೧೫ ಲಕ್ಷ ರು. ಮಾಚೇನಹಳ್ಳಿಗೆ ಹೋಗುವ ರಸ್ತೆ ಅಭಿವೃದ್ಧಿಗೆ ೬೫ ಲಕ್ಷ ರು. ನೀಡಿದ್ದು, ಕೆಲಸ ಪ್ರಗತಿಯಲ್ಲಿ ಇದೆ. ಚಲ್ಲನಾಯಕನಹಳ್ಳಿ ಸಮುದಾಯ ಭವನಕ್ಕೆ ೨೫ ಲಕ್ಷ ರು., ೨೦ ಕೋಟಿ ರು. ವೆಚ್ಚದಲ್ಲಿ ಗದ್ದೆ ಬಯಲಿನ ರಸ್ತೆಯನ್ನು ಅಭಿವೃದ್ಧಿಪಡಿಸಿರುವುದಾಗಿ ಹೇಳಿದರು.

ಕಾವೇರಿ ನೀರಾವರಿ ನಿಗಮದಿಂದ ೩೦೦ ಕೋಟಿ ರು. ಮಂಜೂರಾಗಿದ್ದು, ಕ್ಷೇತ್ರ ವ್ಯಾಪ್ತಿಯಲ್ಲಿ ೧೨೦ ಕೋಟಿ ರು.ಗೆ ಕಾಮಗಾರಿ ನಡೆಯುತ್ತಿದೆ. ಇನ್ನು ಶ್ರೀರಂಗಪಟ್ಟಣದ ಬಳಿಯ ಕಾವೇರಿ ನದಿಯಿಂದ ಬಸರಾಳು, ದೇವಲಾಪುರ ಹೋಬಳಿ ವ್ಯಾಪ್ತಿಯ ಕೆರೆಗಳಿಗೆ ೧ ಸಾವಿರ ಕೋಟಿ ರು. ವೆಚ್ಚದಲ್ಲಿ ನೀರನ್ನು ಹರಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ನಿಮ್ಮ ಶಾಸಕ ನಿಮ್ಮ ಊರಿಗೆ ಎಂಬ ಹೆಸರಿನಲ್ಲಿ ಅಧಿಕಾರಿಗಳನ್ನು ನಿಮ್ಮ ಮನೆ ಬಾಗಿಲಿಗೆ ಕರೆತರುತ್ತಿದ್ದೇನೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲಾ ಶಾಸಕರಿಗೆ ೫೦ ಕೋಟಿ ರು.ಗಳನ್ನು ನೀಡಿದ್ದಾರೆ. ಕೆರಗೋಡು ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವಾಲಯ ಅಭಿವೃದ್ಧಿಗೆ ೩ ಕೋಟಿ ರು., ಶ್ರೀಮಹದೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೊಸಗಾವಿ, ಚಂದಗಾಲು ಗ್ರಾಮಸ್ಥರ ಸಭೆ ಕರೆದು ಚರ್ಚಿಸಿ ನೀಲಿನಕ್ಷೆ ತಯಾರು ಮಾಡಲಾಗುವುದು ಎಂದರು.

ಟೆಂಡರ್ ಹಾಕಿ ಕೆಲಸ ಮಾಡುತ್ತಿಲ್ಲ:

ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಮುಖವಾಗಿ ಜೆಡಿಎಸ್‌ನವರು ಅಡ್ಡಗಾಲಾಗಿದ್ದಾರೆ. ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಮಾಡಲಿಲ್ಲ. ಈಗ ಅಭಿವೃದ್ಧಿ ಮಾಡುವವರಿಗೂ ಅವಕಾಶ ನೀಡುತ್ತಿಲ್ಲ. ೨ ಲಕ್ಷ ರು., ೫ ಲಕ್ಷ ರು. ಸೇರಿದಂತೆ ಕೋಟಿಗಟ್ಟಲೆ ಕಾಮಗಾರಿಗೂ ಟೆಂಡರ್ ಹಾಕುತ್ತಿದ್ದಾರೆ. ಆದರೆ, ಕೆಲಸ ಮಾತ್ರ ಮಾಡುತ್ತಿಲ್ಲ ಎಂದು ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರು ಹೆಸರೇಳದೆ ವಾಗ್ದಾಳಿ ನಡೆಸಿದರು.

ಮಂಡ್ಯ ಕ್ಷೇತ್ರದಲ್ಲಿ ನಿಮ್ಮ ದಬ್ಬಾಳಿಕೆ, ದೌರ್ಜನ್ಯ ನಡೆಯುವುದಿಲ್ಲ. ಜನರು ಅದನ್ನು ಸಹಿಸುವುದೂ ಇಲ್ಲ. ಹೀಗೆ ಮಾಡುತ್ತಿದ್ದರೆ ನಿಮ್ಮ ಮನೆ ಎದುರು ಜನರು ಧರಣಿ ಕೂರುವ ದಿನಗಳು ದೂರವಿಲ್ಲ. ನೀವು ಗುತ್ತಿಗೆ ಕೆಲಸ ಮಾಡಿ, ಇಲ್ಲವೇ ರಾಜಕಾರಣ ಮಾಡಿ. ಎರಡನ್ನೂ ಮಾಡುತ್ತಿರುವುದರಿಂದಲೇ ಜನ ನಿಮ್ಮನ್ನು ಮನೆಯಲ್ಲಿ ಕೂರಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಳೆದ ಚುನಾವಣೆಯಲ್ಲಿ ನಾನು ಸೋತರೂ ಶಾಸಕರಾಗಿದ್ದ ಎಂ.ಶ್ರೀನಿವಾಸ್ ಅವರಿಗೆ ತೊಂದರೆ ಕೊಡಲಿಲ್ಲ. ಅಭಿವೃದ್ಧಿಗೆ ಅಡ್ಡಿಯಾಗಲಿಲ್ಲ. ನಮ್ಮ ಸರ್ಕಾರ ಅಭಿವೃದ್ಧಿಯ ಪರವಾಗಿದೆ. ಅದಕ್ಕೆ ಅಡಚಣೆ ಉಂಟುಮಾಡದೆ ಟೆಂಡರ್ ಪಡೆದಿರುವ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸುವಂತೆ ತಿಳಿಸಿದರು.

ನ್ಯಾಯಾಲಯದಲ್ಲಿರುವ ವ್ಯಾಜ್ಯಗಳನ್ನು ಹೊರತುಪಡಿಸಿ ಉಳಿದ ಸಮಸ್ಯೆಗಳಿದ್ದರೆ ಅಧಿಕಾರಿಗಳೆದುರು ಇಟ್ಟು ಪರಿಹಾರ ಕಂಡುಕೊಳ್ಳಬಹುದು. ಇಲ್ಲೇ ಪರಿಹಾರವಾಗುವ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ದೊರಕಿಸಲಾಗುವುದು. ಇಲ್ಲದಿದ್ದರೆ ತಿಂಗಳೊಳಗೆ ಸಮಸ್ಯೆಯನ್ನು ಪರಿಹರಿಸಿಕೊಡುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಹಸೀಲ್ದಾರ್ ವಿಶ್ವನಾಥ್, ತಾಪಂ ಇಒ ಲೋಕೇಶ್‌ಮೂರ್ತಿ, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಗ್ರಾಪಂ ಅಧ್ಯಕ್ಷೆ ಇಂದ್ರಮ್ಮ, ಸದಸ್ಯರಾದ ಸುನೀತಾ, ಶ್ರೀನಿವಾಸಚಾರಿ, ಓದುಲಿಂಗೇಗೌಡ, ಚಿಕ್ಕಲಿಂಗಮ್ಮ, ಕೃಷ್ಣೇಗೌಡ, ಭೈರೇಶ್, ಕಾಂಗ್ರೆಸ್ ಮುಖಂಡ ಜಿ.ಸ್ವಾಮಿ, ದ್ಯಾಪಸಂದ್ರ ಗ್ರಾಪಂ ಮಾಜಿ ಅಧ್ಯಕ್ಷ ಉಮೇಶ್ ಇತರರಿದ್ದರು.ಜನತಾ ದರ್ಶನ ಜನಾನುರಾಗಿ: ಸಿ.ತ್ಯಾಗರಾಜು

ಶಾಸಕ ಪಿ.ರವಿಕುಮಾರ್ ನಡೆಸಿಕೊಡುತ್ತಿರುವ ಜನಸಂಪರ್ಕ ಸಭೆ ಜನಾನುರಾಗಿಯಾಗಿದೆ. ಅಧಿಕಾರಿಗಳನ್ನು ಮನೆ ಬಾಗಿಲಿಗೆ ಕರೆತಂದು ಸಮಸ್ಯೆಗಳನ್ನು ಪರಿಹರಿಸಿಕೊಡುವ ಕಾರ್ಯ ಜನಮೆಚ್ಚುಗೆ ಗಳಿಸಿದೆ ಎಂದು ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಬಣ್ಣಿಸಿದರು.

ತಾಲೂಕಿನ ಚಂದಗಾಲು ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಚಂದಗಾಲು ಗ್ರಾಮಕ್ಕೆ ನಾನು ಹೇಳಿದ ಎಲ್ಲ ಕೆಲಸವನ್ನೂ ಮಾಡಿಕೊಡುತ್ತಿದ್ದಾರೆ. ರಸ್ತೆ, ಚರಂಡಿ, ದೇವಸ್ಥಾನ, ಕಾಂಕ್ರೀಟ್ ರಸ್ತೆಗಳನ್ನೂ ನಿರ್ಮಿಸಿದ್ದಾರೆ. ಜನರ ಮನೆ ಬಾಗಿಲಿಗೆ ಬಂದು ಅವರ ಕಷ್ಟಸುಖಗಳಿಗೆ ಸ್ಪಂದಿಸುತ್ತಿದ್ದಾರೆ. ಇಂತಹ ಕಾರ್ಯವನ್ನು ಹಿಂದಿನ ಯಾವ ಶಾಸಕರೂ ಮಾಡಿರಲಿಲ್ಲ ಎಂದು ನುಡಿದರು.

ಎತ್ತಿನಗಾಡಿ ಮೆರವಣಿಗೆ:

ಜನಸಂಪರ್ಕ ಸಭೆಗೆ ಆಗಮಿಸಿದ ಶಾಸಕ ಪಿ.ರವಿಕುಮಾರ್, ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಅವರನ್ನು ಎತ್ತಿನಗಾಡಿ ಮೆರವಣಿಗೆಯಲ್ಲಿ ಜಾನಪದ ಕಲಾತಂಡ ಮತ್ತು ಪೂರ್ಣಕುಂಭದೊಂದಿಗೆ ಕರೆತರಲಾಯಿತು. ಕಾರ್ಯಕ್ರಮದಲ್ಲಿ ಐದು ಮಂದಿ ಗರ್ಭಿಣಿಯರಿಗೆ ಸೀಮಂತ ನೆರವೇರಿಸಲಾಯಿತು. ಮೃತರ ಹೆಸರಿನಲ್ಲಿವೆ ೪೫ ಸಾವಿರ ಆರ್‌ಟಿಸಿಗಳು: ಎಂ.ಶಿವಮೂರ್ತಿಮಂಡ್ಯ ತಾಲೂಕಿನಲ್ಲಿ ೪೫ ಸಾವಿರ ಆರ್‌ಟಿಸಿಗಳು ಮೃತರ ಹೆಸರಿನಲ್ಲಿವೆ. ಕಂದಾಯಾಧಿಕಾರಿ ಮತ್ತು ಗ್ರಾಮ ಆಡಳಿತಾಧಿಕಾರಿಗಳು ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ. ಆ ಸಮಯದಲ್ಲಿ ದಾಖಲೆಗಳನ್ನು ನೀಡಿ ಸರಿಪಡಿಸಿಕೊಳ್ಳುವಂತೆ ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಹೇಳಿದರು.

ತಾಲೂಕಿನ ಚಂದಗಾಲು ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಭೂ ದಾಖಲೆಗಳೆಲ್ಲವನ್ನು ಸ್ಕ್ಯಾನಿಂಗ್ ಮಾಡಿ ಅಪ್ಲೋಡ್ ಮಾಡಲಾಗುತ್ತಿದೆ. ಇನ್ನು ಮುಂದೆ ಸಾರ್ವಜನಿಕರು ತಮ್ಮ ಜಮೀನಿಗೆ ಸಂಬಂಧಪಟ್ಟ ದಾಖಲೆಗಳನ್ನು ಆನ್‌ಲೈನ್ ಮುಖಾಂತರ ಪಡೆದುಕೊಳ್ಳಬಹುದು. ಮುಂದಿನ ಆರೇಳು ತಿಂಗಳಲ್ಲಿ ಸ್ಕ್ಯಾನಿಂಗ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ನುಡಿದರು.

ಚಂದಗಾಲು ಗ್ರಾಪಂ ವ್ಯಾಪ್ತಿಯಲ್ಲಿ ಪೋಡಿ ಮುಕ್ತ ಅಭಿಯಾನ ನಡೆಸಿ ೪೩೦ ಜನರ ಹೆಸರಿಗೆ ಆರ್‌ಟಿಸಿ ಮಾಡಿಕೊಡಲಾಗಿದೆ. ೧೯೫೦ ರಿಂದ ೧೯೭೦ರವರೆಗೆ ಮಂಜೂರಾಗಿರುವ ಸರ್ಕಾರಿ ಜಮೀನುಗಳು ದುರಸ್ತು ಆಗಿಲ್ಲ. ಈ ಪಂಚಾಯಿತಿ ವ್ಯಾಪ್ತಿಯಲಲ್ಲಿ ೧೮ ಸರ್ವೆ ನಂಬರ್‌ಗಳ ೨೫ ಜನರಿಗೆ ದುರಸ್ತಿ ಮಾಡಿ ಆರ್‌ಟಿಸಿ ಕೊಟ್ಟಿದ್ದೇವೆ. ಉಳಿದ ೮ ಸರ್ವೆ ನಂಬರ್‌ಗಳಿಗೆ ಮುಂದಿನ ಎರಡು-ಮೂರು ತಿಂಗಳಲ್ಲಿ ಆರ್‌ಟಿಸಿಗಳನ್ನು ನೀಡಲಾಗುವುದು ಎಂದರು.