ಒಂದೇ ದಿನ 133 ಬೈಕ್‌, ಟ್ಯಾಕ್ಸಿ ಸಾರಿಗೆ ಇಲಾಖೆಯಿಂದ ವಶ

| Published : Jul 06 2024, 01:19 AM IST / Updated: Jul 06 2024, 08:51 AM IST

ಒಂದೇ ದಿನ 133 ಬೈಕ್‌, ಟ್ಯಾಕ್ಸಿ ಸಾರಿಗೆ ಇಲಾಖೆಯಿಂದ ವಶ
Share this Article
  • FB
  • TW
  • Linkdin
  • Email

ಸಾರಾಂಶ

ಸಾರಿಗೆ ಸಂಘಟನೆಗಳ ಆಗ್ರಹಕ್ಕೆ ಮಣಿದು ಶುಕ್ರವಾರ ಎಲೆಕ್ಟ್ರಿಕ್‌ ಬೈಕ್ ಟ್ಯಾಕ್ಸಿ ಹಾಗೂ ವೈಟ್‌ಬೋರ್ಡ್‌ ಬೈಕ್‌ ಟ್ಯಾಕ್ಸಿ ವಿರುದ್ಧ ಕಾರ್ಯಾಚರಣೆ ನಡೆಸಿದ ಸಾರಿಗೆ ಇಲಾಖೆ ಅಧಿಕಾರಿಗಳು 133 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

 ಬೆಂಗಳೂರು :  ಸಾರಿಗೆ ಸಂಘಟನೆಗಳ ಆಗ್ರಹಕ್ಕೆ ಮಣಿದು ಶುಕ್ರವಾರ ಎಲೆಕ್ಟ್ರಿಕ್‌ ಬೈಕ್ ಟ್ಯಾಕ್ಸಿ ಹಾಗೂ ವೈಟ್‌ಬೋರ್ಡ್‌ ಬೈಕ್‌ ಟ್ಯಾಕ್ಸಿ ವಿರುದ್ಧ ಕಾರ್ಯಾಚರಣೆ ನಡೆಸಿದ ಸಾರಿಗೆ ಇಲಾಖೆ ಅಧಿಕಾರಿಗಳು 133 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಎಲೆಕ್ಟ್ರಿಕ್‌ ಹಾಗೂ ವೈಟ್‌ಬೋರ್ಡ್‌ ಬೈಕ್‌ ಟ್ಯಾಕ್ಸಿಗಳ ಮೇಲೆ ಕಡಿವಾಣ ಹಾಕುವಂತೆ ನೂರಾರು ಚಾಲಕರು ಗುರುವಾರ ಶಾಂತಿನಗರದ ಸಾರಿಗೆ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಎಲೆಕ್ಟ್ರಿಕ್‌ ಹಾಗೂ ವೈಟ್‌ಬೋರ್ಡ್‌ ಬೈಕ್‌ ಟ್ಯಾಕ್ಸಿಗಳ ವಿರುದ್ಧ ಕಾರ್ಯಾಚರಣೆ ನಡೆಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು.

ಶುಕ್ರವಾರ ಬೆಳಗ್ಗೆಯಿಂದಲೇ ನಗರದ 11 ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿದ ಸಾರಿಗೆ ಇಲಾಖೆ ಅಧಿಕಾರಿಗಳು, 133 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ವಾಹನಗಳಲ್ಲಿ 29 ಎಲೆಕ್ಟ್ರಿಕ್‌ ಬೈಕ್‌ಗಳಾಗಿವೆ. ಈ ಕಾರ್ಯಾಚರಣೆಯನ್ನು ಮುಂದುವರಿಸಲಾಗುತ್ತಿದ್ದು, ಎಲೆಕ್ಟ್ರಿಕ್‌ ಬೈಕ್‌ ಟ್ಯಾಕ್ಸಿಗಳು ತಮ್ಮ ಸೇವೆ ಸ್ಥಗಿತಗೊಳಿಸುವವರೆಗೆ ಕಾರ್ಯಾಚರಣೆ ನಡೆಸಲು ಸಾರಿಗೆ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಕಾರ್ಯಾಚರಣೆ ಸಂದರ್ಭದಲ್ಲಿ ಬೈಕ್‌ ಟ್ಯಾಕ್ಸಿಗಳ ವಿರುದ್ಧವಷ್ಟೇ ಅಲ್ಲದೆ, ಅನುಮತಿ ಪಡೆಯದೇ ವಾಹನಗಳ ಹೊರಭಾಗ ಜಾಹೀರಾತು ಅಂಟಿಸಿಕೊಂಡ ವಾಹನಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಸುಮಾರು 10ಕ್ಕೂ ಹೆಚ್ಚಿನ ಕಾರುಗಳನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳಲಾಗಿದೆ.