136 ಟವರ್‌ ನಿರ್ಮಾಣ ಕಾರ್ಯದ ಪಟ್ಟಿ ಅಂತಿಮ: ಸಂಸದ ಬಿ.ವೈ.ರಾಘವೇಂದ್ರ

| Published : Sep 17 2025, 01:05 AM IST

ಸಾರಾಂಶ

ಜಿಲ್ಲೆಯಲ್ಲಿ 4 ಶ್ರೇಣಿಯೊಳಗಿನ 287 ಟವರ್‌ಗಳ ನಿರ್ಮಾಣದ ಪೈಕಿ 136 ಟವರ್‌ಗಳ ನಿರ್ಮಾಣ ಕಾರ್ಯದ ಪಟ್ಟಿ ಅಂತಿಮವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿ 4 ಶ್ರೇಣಿಯೊಳಗಿನ 287 ಟವರ್‌ಗಳ ನಿರ್ಮಾಣದ ಪೈಕಿ 136 ಟವರ್‌ಗಳ ನಿರ್ಮಾಣ ಕಾರ್ಯದ ಪಟ್ಟಿ ಅಂತಿಮವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ನಗರದ ಬಿಎಸ್ಎನ್ಎಲ್‌ ಭವನದಲ್ಲಿ ಮಂಗಳವಾರ ದೂರಸಂಚಾರ ಕ್ಷೇತ್ರದಲ್ಲಿ ಆಗಿರುವ ಸಾಧನೆಗಳ ಕುರಿತು ಏರ್ಪಡಿಸಿದ್ದ ದೂರಸಂಪರ್ಕ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ಮುಂದಿನ ಸಭೆಯ ವೇಳೆಗೆ ಬಾಕಿ ಇರುವ ಟವರ್‌ಗಳ ನಿರ್ಮಾಣಕ್ಕೆ ಅವಶ್ಯಕವಾಗಿರುವ, ವಿವಿಧ ಕಾರಣಗಳಿಂದಾಗಿ ಅನುಷ್ಟಾನಕ್ಕೆ ತೊಡಕಾಗಿರುವ ಸ್ಥಳಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಂಡು ಭೂಸ್ವಾದೀನ ಪೂರ್ಣಗೊಳಿಸಿ, ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲು ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.

ಕೇಂದ್ರ ಸರ್ಕಾರವು ನಾಗಾಲೋಟದಲ್ಲಿ ಬೆಳೆಯುತ್ತಿರುವ ದೇಶದ ಅಭಿವೃದ್ಧಿಗೆ ಪೂರಕವಾಗಿ ಸೌಲಭ್ಯ-ಸಹಕಾರಗಳನ್ನು ಒದಗಿಸುವುದರ ಜೊತೆಗೆ ಎದುರಾಗುವ ಎಲ್ಲ ರೀತಿಯ ಸಮಸ್ಯೆ ಸವಾಲುಗಳನ್ನು ಎದುರಿಸಿ ಮುನ್ನುಗ್ಗುತ್ತಿದೆ. ಸ್ವಚ್ಚ ಭಾರತದಿಂದ ಇಂದಿನ ಡಿಜಿಟಲ್‌ಯುಗದವರೆಗೆ ಎಲ್ಲಾ ಕ್ಷೇತ್ರಗಳಲ್ಲೂ ಡಿಜಿಟಲೀಕರಣದ ಕಾರ್ಯ ಭರದಿಂದ ಸಾಗಿದೆ. ಬಹುಸಂಖ್ಯೆಯನ್ನು ಹೊಂದಿರುವ ರಾಷ್ಟ್ರಕ್ಕೆ ಅಗತ್ಯ ಸೌಲತ್ತುಗಳನ್ನು ಒದಗಿಸುವ ದೊಡ್ಡ ಹೊಣೆಗಾರಿಕೆ ಹೊಂದಿದೆ ಎಂದರು.

ಒಂದು ಕಾಲದಲ್ಲಿ ನಷ್ಟದಲ್ಲಿ ಸಾಗುತ್ತಿದ್ದ ದೂರಸಂಚಾರ ನಿಗಮವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಲು ಕೇಂದ್ರ ಸರ್ಕಾರವು ಅಗತ್ಯ ಆರ್ಥಿಕ ನೆರವನ್ನು ಒದಗಿಸಿದೆ. ಖಾಸಗಿ ವಲಯಗಳ ತೀವ್ರ ಸ್ಪರ್ಧೆಗಳ ನಡುವೆಯೂ ನಿಗಮ ಇನ್ನಷ್ಟು ಬಂಡವಾಳ ತೊಡಗಿಸಿ ಮುನ್ನುಗ್ಗುತ್ತಿದೆ. ಸಾಧಿಸಲು ಗುರಿ ಇರುವಂತೆಯೇ ಸವಾಲುಗಳೂ ಕೂಡ ಇವೆ ಎಂದು ಹೇಳಿದರು.

ಹೆಚ್ಚಿನ ಜನಸಂಖ್ಯೆಯಿರುವ, ಅದರಲ್ಲೂ ವಿಶೇಷವಾಗಿ ಮಲೆನಾಡಿನ ಗುಡ್ಡಗಾಡು ಪ್ರದೇಶ ಹೊಂದಿರುವ ಸ್ಥಳಗಳಿಗೆ ಆದ್ಯತೆಯ ಮೇರೆಗೆ ಟವರ್‌ಗಳನ್ನು ಒದಗಿಸಿಕೊಡಬೇಕು. ತಾಂತ್ರಿಕ ಸಮಸ್ಯೆ, ವಿದ್ಯುತ್‌ಸಮಸ್ಯೆ, ಮತ್ತಿತರ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವಲ್ಲಿ ನಿಗಮದ ಅಧೀನ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಸಕಾಲದಲ್ಲಿ ತಿಳಿಸಿ, ನಿಯಮಾನುಸಾರ ಟವರ್‌ಗಳ ಅನುಷ್ಟಾನ ಮತ್ತು ಕಾರ್ಯಾರಂಭಗೊಳಿಸಲು ಶ್ರಮಿಸುವಂತೆ ಸೂಚಿಸಿದರು.

ಮಲೆನಾಡಿನ ಪ್ರದೇಶವಾಗಿರುವ ಬಸವಾನಿ ಎಂಬ ಗ್ರಾಮದಲ್ಲಿ ಟವರ್‌ಅಳವಡಿಸಿದ ಕೇಂದ್ರದಲ್ಲಿ ಬ್ಯಾಟರಿ ಕಳುವಾಗಿದ್ದು, ಅದು ನಿಗಮದ ಸಿಬ್ಬಂಧಿಗಳ ಸಹಕಾರಿದಂದಲೇ ಆಗಿರಬಹುದಾದ ಮಾಹಿತಿ ಇದೆ. ಕೂಡಲೇ ನಿಗಮದ ಮಹಾಪ್ರಬಂಧಕರು ಗಮನಹರಿಸುವಂತೆ ಸೂಚಿಸಿದ ಅವರು, ಆಡುಗೋಡಿಯಲ್ಲಿ ಅರಣ್ಯಭೂಮಿಯಲ್ಲಿ ಟವರ್‌ಅಳವಡಿಸಲು ಅರಣ್ಯ ಭೂಮಿಯನ್ನು ಗುರುತಿಸಲಾಗಿದ್ದು, ತ್ವರಿತವಾಗಿ ಸಂಪರ್ಕ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಸೂಚಿಸಿದರು.

ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನೂರಾರು ಕೋಟಿ ರು.ಗಳ ವೆಚ್ಚದ ಬಹುಸಂಖ್ಯೆಯ ಟವರ್‌ಗಳ ನಿರ್ಮಾಣ ಕಾರ್ಯಕ್ಕೆ ಕೇಂದ್ರದಿಂದ ಹಣ ಖರ್ಚು ಮಾಡಲಾಗಿದೆ. ಅಂತಿಮ ಹಂತದಲ್ಲಿರುವ ಟವರ್‌ಗಳ ನಿರ್ಮಾಣ ಕಾರ್ಯವನ್ನು ಮುಂದಿನ ಒಂದೆರೆಡು ತಿಂಗಳೊಳಗಾಗಿ ಪೂರ್ಣಗೊಳಿಸಬೇಕು. ಈವರೆಗೆ ಪೂರ್ಣಗೊಂಡ ಕಾಮಗಾರಿಗಳನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲು ಅನುಕೂಲವಾಗುವಂತೆ ಕೇಂದ್ರ ಸಚಿವರ ಉಪಸ್ಥಿತಿಯಲ್ಲಿ ಉದ್ಘಾಟನಾ ಕಾರ್ಯ ನೆರವೇರಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ದೂರಸಂಚಾರ ನಿಗಮದ ಹಿರಿಯ ಮಹಾಪ್ರಬಂಧಕ ವಿನಯ್‌ಕುಮಾರ್‌ ಸಿನ್ಹ, ಶ್ರೀಮತಿ ಸಮಿತಾ ಸರ್ಕಾರ್‌, ಶ್ರೀಮತಿ ಶ್ರೀದೇವಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್‌ಕುಮಾರ್‌, ದೂರಸಂಪರ್ಕ ಸಲಹಾ ಸಮಿತಿಯ ಸದಸ್ಯರಾದ ಸುಧೀಂದ್ರ ಕಟ್ಟೆ, ಅಶೋಕಮೂರ್ತಿ, ನಾಗರಾಜ್‌ ಬೊಬ್ಬಿಗೆ, ಟಿ.ಪಿ.ನಿರಂಜನ್‌, ರವಿ ಕೈತೋಟ, ಪಿ.ಶಿವಪ್ಪ , ಗಣಪತಿ ಬಿ., ಡಿ.ಶಿವಯೋಗಿ , ಪ್ರಸನ್ನ ಕೆರೆಕೈ ಸೇರಿದಂತೆ ದೂರಸಂಪರ್ಕ ಇಲಾಖೆಯ ಅಭಿಯಂತರರು, ಅಧಿಕಾರಿ ಸಿಬ್ಬಂದಿ ಉಪಸ್ಥಿತರಿದ್ದರು..