ಜನಸ್ಪಂದನ ಕಾರ್ಯಕ್ರಮದಲ್ಲಿ 137 ಅರ್ಜಿಗಳು ಸ್ವೀಕೃತ

| Published : Jun 22 2024, 12:50 AM IST

ಜನಸ್ಪಂದನ ಕಾರ್ಯಕ್ರಮದಲ್ಲಿ 137 ಅರ್ಜಿಗಳು ಸ್ವೀಕೃತ
Share this Article
  • FB
  • TW
  • Linkdin
  • Email

ಸಾರಾಂಶ

ಬಾದಾಮಿ ನಗರದ ತಾಪಂ ಸಭಾಭವನದಲ್ಲಿ ಹಮ್ಮಿಕೊಂಡ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ 37 ಅರ್ಜಿಗಳು ಸ್ವೀಕೃತಗೊಂಡವು, ಅಹವಾಲುಗಳ ತುರ್ತು ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬಾದಾಮಿ

ಸಾರ್ವಜನಿಕರಿಂದ ಬಂದ ಅಹವಾಲುಗಳ ತುರ್ತು ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅಧಿಕಾರಿಗಳಿಗೆ ಸೂಚಿಸಿದರು.

ಶುಕ್ರವಾರ ನಗರದ ತಾಪಂ ಸಭಾಭವನದಲ್ಲಿ ಹಮ್ಮಿಕೊಂಡ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಸಾರ್ವಜನಿಕರು ಹೊತ್ತು ತಂದ ಕುಂದು-ಕೊರತೆ ಹಾಗೂ ಅಹವಾಲುಗಳಿಗೆ ಸ್ಪಂದಿಸುವ ಕೆಲಸವಾಗಬೇಕು. ಸಾಧ್ಯವಾದಷ್ಟು ಬೇಗ ಇತ್ಯರ್ಥಗೊಳಿಸಿ, ಅಧಿಕಾರಿ ಹಾಗೂ ಇಲಾಖೆಯ ಮೇಲೆ ವಿಶ್ವಾಸ ಮೂಡಿಸುವ ಕಾರ್ಯವಾಗಬೇಕು. ಈಗಾಗಲೇ ಮೊದಲ ಹಂತದಲ್ಲಿ ಜನಸ್ಪಂದನ ಕಾರ್ಯಕ್ರಮ ಯಶಸ್ವಿಯಾಗಿದ್ದು, ಈಗಲೂ ಸಹ ಸಮಸ್ಯೆಗೆ ಸ್ಪಂದಿಸಬೇಕು ಎಂದರು.

ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಮಾತನಾಡಿ, ಜನಸ್ಪಂದನ ಸರ್ಕಾರದ ಮಹತ್ವದ ಕಾರ್ಯಕ್ರಮವಾಗಿದ್ದು, ತಾಲೂಕು ಹಂತದಲ್ಲಿ ಬಂದ ಅರ್ಜಿಗಳನ್ನು ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿಗಳ ಕಾರ್ಯಾಲಯದಿಂದ ನಿಯಂತ್ರಣ ಮಾಡಲಾಗುತ್ತಿದ್ದು, ಅರ್ಜಿಗಳನ್ನು ತುರ್ತಾಗಿ ಇತ್ಯರ್ಥಗೊಳಿಸಲು ಹೇಳಿದರು.

ನಂತರ ನಡೆದ ಸಾರ್ವಜನಿರ ಅಹವಾಲು ಸ್ವೀಕಾರದಲ್ಲಿ ಒಟ್ಟು 137 ಅರ್ಜಿಗಳು ಸ್ವೀಕೃತಗೊಂಡಿದ್ದು, ಪ್ರಮುಖವಾಗಿ ಕಂದಾಯ, ಶಿಕ್ಷಣ, ಕೆಇಬಿ, ಗ್ರಾಪಂ, ಕುಡಿಯುವ ನೀರಿನ ಸಮಸ್ಯೆ, ವಸತಿ, ಶಾಲಾ ಕಟ್ಟಡ, ಹೆಸ್ಕಾಂ, ಸಹಕಾರ, ಗ್ರಾಪಂ, ಶಿಕ್ಷಣ ಇಲಾಖೆ, ಸಣ್ಣ ನೀರಾವರಿ, ಲೋಕೋಪಯೋಗಿ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿವೆ.ಬಾಗಲಕೋಟೆ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಬಾದಾಮಿ ತಹಸೀಲ್ದಾರ್ ಜೆ.ಬಿ. ಮಜ್ಜಗಿ, ಗುಳೇದಗುಡ್ಡ ತಹಸೀಲ್ದಾರ್‌ ಮಂಗಳಾ ಎಂ, ತಾಪಂ ಇಒ ಮಲ್ಲಿಕಾರ್ಜುನ ಬಡಿಗೇರ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಯಪ್ಪಾ ನನಗ ಮನಿ ಹಕ್ಕುಪತ್ರ ಕೊಡಿಸ್ರಿ:

ಯಪ್ಪಾ ನಾನು ಎರಡು ವರ್ಷಗಳಿಂದ ಅರ್ಜಿ ಕೊಟ್ಟೀನಿ. ಡಿಸಿ, ತಹಶೀಲ್ದಾರ್‌, ಗ್ರಾಪಂಗೆ ಸಾಕಷ್ಟು ಬಾರಿ ಮನವಿ ಕೊಟ್ರೂ ಹಕ್ಕುಪತ್ರ ಕೊಟ್ಟಿಲ್ಲ ಎಂದು ತಾಲೂಕಿನ ನೆಲವಿಗಿ ಗ್ರಾಮದ ಯಲ್ಲವ್ವ ಹನುಮಪ್ಪ ಗಾರವಾಡ ಎಂಬ ಮಹಿಳೆ ಜನಸ್ಪಂದನ ಕಾರ್ಯಕ್ರಮದಲ್ಲಿ ಅಧಿಕಾರಿಗಳ ಮುಂದೆ ಅಳಲನ್ನು ತೋಡಿಕೊಂಡಳು.

ಯರಗೊಪ್ಪ ಎಸ್.ಬಿ. ಗ್ರಾಮದ ಮಾರುತಿ ವಾಲೀಕಾರ ಎಂಬುವವರು ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯರು ಹೆರಿಗೆಗೆ ಬಂದರೆ ಖಾಸಗಿ ಆಸ್ಪತ್ರೆಗೆ ಕಳಿಸಿ ಹಣ ಪಡೆಯುತ್ತಾರೆ. ಇದರಿಂದ ಬಡವರಿಗೆ ತೊಂದರೆಯಾಗುತ್ತಿದೆ. ಸರಿಪಡಿಸಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.

ಇದಕ್ಕೆ ಶಾಸಕರು ಸ್ಪಂದಿಸಿ ಸಮಸ್ಯೆ ಬಗೆಹರಿಸಲು ತಾಲೂಕು ಆರೋಗ್ಯಾಧಿಕಾರಿಗೆ ಸೂಚಿಸಿದರು. ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಿದರು. ಕೆಲವು ಕಾನೂನಾತ್ಮಕ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಇತ್ಯರ್ಥಪಡಿಸಲು ಶಾಸಕರು ಸೂಚಿಸಿದರು.