ಶಿಲ್ಪ ಭಾಗದಲ್ಲಿ ಅಶ್ವ, ತ್ರಿಶೂಲವಿರುವ ಶಿಬಾರಗಟ್ಟೆ, ಖಡ್ಗ ಮತ್ತು ಚಾಮರಗಳ ಕೊರೆದ ಚಿತ್ರಗಳಿವೆ

ಕುಕನೂರು: ತಾಲೂಕಿನ ತಳಕಲ್ ಗ್ರಾಮದ ಉಡಚಲಮ್ಮದೇವಿ ದೇವಾಲಯದ ಬಳಿ 13ನೇ ಶತಮಾನದ ಶಾಸನ ಪತ್ತೆಯಾಗಿದೆ ಎಂದು ಗಂಗಾವತಿಯ ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್ ತಿಳಿಸಿದ್ದಾರೆ.

ಶಾಸನವು ಕಪ್ಪು ಶಿಲೆಯಲ್ಲಿ ಇದ್ದು, 20 ಸಾಲುಗಳಲ್ಲಿ ಬರೆಯಲಾಗಿದೆ. ಶಿಲ್ಪ ಭಾಗದಲ್ಲಿ ಅಶ್ವ, ತ್ರಿಶೂಲವಿರುವ ಶಿಬಾರಗಟ್ಟೆ, ಖಡ್ಗ ಮತ್ತು ಚಾಮರಗಳ ಕೊರೆದ ಚಿತ್ರಗಳಿವೆ. ಹಾಗಾಗಿ ಇದು ಮೈಲಾರಲಿಂಗೇಶ್ವರ ಪರಂಪರೆಗೆ ಸಂಬಂಧಿಸಿದ ಶಾಸನವಾಗಿದೆ.

ಗಣೇಶ, ಸರಸ್ವತಿ ಹಾಗೂ ಶಿವಸ್ತುತಿಯೊಂದಿಗೆ ಪ್ರಾರಂಭವಾಗುವ ಶಾಸನವು ಸ್ವಸ್ತಿ ಶ್ರೀ ಶಕ ವರ್ಷದ 1201 ಪ್ರಮಾದಿ ಸಂವತ್ಸರದ ಚೈತ್ರ ಬಹುಳ ಶುದ್ಧ 15ರ ಗ್ರಹಣ ಕಾಲ ಉಲ್ಲೇಖಿಸುತ್ತದೆ. ಇದು ಪ್ರಸಕ್ತ ಶಕೆ 1279ಕ್ಕೆ ಸರಿ ಹೊಂದುತ್ತದೆ. ಶಾಸನವು ಪ್ರಧಾನವಾಗಿ ಪಂಡಿತರಿಗೆ ಮತ್ತು ಕೆಲವು ಗಣ್ಯ ವ್ಯಕ್ತಿಗಳಿಗೆ ದಾನ ನೀಡಿದ ವಿಷಯ ಒಳಗೊಂಡಿದೆ. ಆದರೆ ದಾನಿಯ ಹೆಸರು ಅಸ್ಪಷ್ಟವಾಗಿದೆ. ಶಾಸನವಿರುವ ತಳಕಲ್ ಗ್ರಾಮವನ್ನು ತಳ್ಕಲ್ಲು ಉಲ್ಲೇಖಿಸಿದೆ. ಅದು ಒಂದು ಅಗ್ರಹಾರವಾಗಿತ್ತು. ಅಲ್ಲಿ ಮಹಾಜನಗಳೆಂಬ ಪಂಡಿತರಿದ್ದ ಬಗ್ಗೆ ಶಾಸನ ತಿಳಿಸುತ್ತದೆ. ಅವರಿಗೂ ಮತ್ತು ಕೆಲ ಸಂಗೀತಗಾರರಿಗೆ ದಾನ ನೀಡಿದ ವಿಷಯ ಹೇಳಲಾಗಿದೆ. ಅವರ ಪೈಕಿ ಮಹೇಶ್ವರಿ ಎಂಬ ಗಾಯಕಿಯ ಗಾನಕ್ಕೆ 12 ಪಣ, ಜೋಗಮ ಎಂಬ ಗಾಯಕನ ಗಾನಕ್ಕೆ 12 ಪಣ, ಖೇಮಣ್ಣನಿಗೆ ಎರಡು ಪಣ ಮತ್ತು 12 ಹೊನ್ನು ದಾನವಾಗಿ ನೀಡಿದ ಬಗ್ಗೆ ತಿಳಿಸಲಾಗಿದೆ ಮತ್ತು ಹೊಂನಕಹಾಳ ಎಂಬ ಗ್ರಾಮದಲ್ಲಿ ಭೂಮಿ ಕೊಟ್ಟ ಬಗ್ಗೆ ವಿವರಿಸಲಾಗಿದೆ. ಪ್ರಾಸಂಗಿಕವಾಗಿ ದಾನದ ಜಮೀನುಗಳ ಮೇರೆಗಳು ಮತ್ತು ದಿಕ್ಕುಗಳ ವಿವರಗಳನ್ನು ನೀಡಲಾಗಿದೆ ಎಂಬ ಮಾಹಿತಿ ದೊರಕಿದೆ.

ಗ್ರಾಮದ ಉದಯ ಎಸ್ ರಾಯರೆಡ್ಡಿ, ಸಂಶೋಧಕ ಡಾ.ಚನ್ನಬಸಪ್ಪ ಮಲ್ಕಂದಿನ್ನಿ, ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್, ರಮೇಶ್ ಗಬ್ಬೂರ್, ಡಾ. ಜಾಜಿ ದೇವೇಂದ್ರಪ್ಪ, ಡಾ.ಬದ್ರಿ ಪ್ರಸಾದ ಗ್ರಾಮಸ್ಥರ ಸಹಕಾರದಿಂದ ದೇವಾಲಯದ ಗೋಡೆಗೆ ಶಾಸಕ ಹೊಂದಿಕೊಂಡಂತೆ ಒಂದು ಕಟ್ಟೆ ನಿರ್ಮಿಸಿ ಸಂರಕ್ಷಿಸಿದ್ದಾರೆ.