14 ಕ್ಷೇತ್ರದ ಮತ ಪೆಟ್ಟಿಗೆಗಳುಈಗ ಸ್ಟ್ರಾಂಗ್‌ರೂಂನಲ್ಲಿ ಭದ್ರ

| Published : Apr 28 2024, 01:21 AM IST

ಸಾರಾಂಶ

ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಮತದಾರರು ಬರೆದಿರುವ 247 ಅಭ್ಯರ್ಥಿಗಳ ರಾಜಕೀಯ ಭವಿಷ್ಯದ ಮತಪೆಟ್ಟಿಗೆಗಳು ಸ್ಟ್ರಾಂಗ್‌ ರೂಮ್‌ನಲ್ಲಿ ಭದ್ರವಾಗಿಡಲಾಗಿದೆ.

- ದಿನದ 24 ಗಂಟೆಯೂ ಸಿಸಿಟೀವಿ ಕಣ್ಗಾವಲು । ಜೂ.4ರ ರಿಸಲ್ಟ್‌ ದಿನದವರೆಗೂ ಬಿಗಿ ಪಹರೆಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಮತದಾರರು ಬರೆದಿರುವ 247 ಅಭ್ಯರ್ಥಿಗಳ ರಾಜಕೀಯ ಭವಿಷ್ಯದ ಮತಪೆಟ್ಟಿಗೆಗಳು ಸ್ಟ್ರಾಂಗ್‌ ರೂಮ್‌ನಲ್ಲಿ ಭದ್ರವಾಗಿಡಲಾಗಿದೆ.

ಆಯಾ ಕ್ಷೇತ್ರದ ಸಂಬಂಧಪಟ್ಟ ಕಾಲೇಜುಗಳಲ್ಲಿ ಸಿಸಿ ಟಿವಿ ಮತ್ತು ಬಿಗಿ ಪೊಲೀಸ್‌ ಭದ್ರತೆಯ ಕಣ್ಗಾವಲಿನಲ್ಲಿ ಸುರಕ್ಷಿತವಾಗಿಡಲಾಗಿದೆ. ಜೆಡಿಎಸ್‌ನ ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿಯ ಶೋಭಾ ಕರಂದ್ಲಾಜೆ, ಡಾ.ಸಿ.ಎನ್‌.ಮಂಜುನಾಥ್‌, ವಿ.ಸೋಮಣ್ಣ, ಗೋವಿಂದ ಕಾರಜೋಳ, ಕಾಂಗ್ರೆಸ್‌ನ ಡಿ.ಕೆ.ಸುರೇಶ್‌, ಜಯಪ್ರಕಾಶ್ ಶೆಟ್ಟಿ ಸೇರಿದಂತೆ 247 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಪೆಟ್ಟಿಗೆ ಸೇರಿದ್ದು, ಜೂ.4ರ ಫಲಿತಾಂಶದ ದಿನದಂದು ಹೊರಬೀಳಲಿದೆ. ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಈ ಎಲ್ಲಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ ಕಾಲೇಜುಗಳಲ್ಲಿ ಭದ್ರವಾಗಿ ಮತಪೆಟ್ಟಿಗೆಗಳನ್ನು ಇಡಲಾಗಿದೆ.

ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಮತಪೆಟ್ಟಿಗೆಗಳಿಗೆ ಸೀಲ್‌ ಮಾಡಲಾಗಿದೆ. ಸ್ಟ್ರಾಂಗ್‌ ರೂಮ್‌ಗಳಿಗೆ ಸ್ಥಳೀಯ ಪೊಲೀಸರ ಜತೆ ಕೇಂದ್ರ ಮತ್ತು ರಾಜ್ಯ ಮೀಸಲು ಪಡೆಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ದಿನ 24 ಗಂಟೆಯೂ ಸ್ಟ್ರಾಂಗ್‌ ರೂಮ್‌ಗಳ ಮೇಲೆ ನಿಗಾವಹಿಸಲಾಗಿರುತ್ತದೆ. ಪ್ರತಿಯೊಬ್ಬರ ಚಲನವಲನವನ್ನು ಗಮನಿಸಲಾಗುತ್ತದೆ. ಮುಂದಿನ ಒಂದು ತಿಂಗಳ ಕಾಲ ಸ್ಟ್ರಾಂಗ್‌ ರೂಮ್‌ಗಳ ಸುತ್ತಲೂ ಬಿಗಿ ಭದ್ರತೆ ಕಲ್ಪಿಸಲಾಗಿರುತ್ತದೆ. ಜೂ.4ರ ಫಲಿತಾಂಶ ದಿನದಂದು ಸ್ಟ್ರಾಂಗ್‌ ರೂಮ್‌ನಿಂದ ಮತಪೆಟ್ಟಿಗೆಗಳನ್ನು ಹೊರತಂದು ಮತ ಎಣಿಕೆ ಮಾಡಲಾಗುತ್ತದೆ.