ಸಾರಾಂಶ
ಹೊರಜಿಲ್ಲೆ - ರಾಜ್ಯಗಳ ಪ್ರವಾಸಿಗರು ಇಲ್ಲಿಗೆ ಆಗಮಿಸುವುದಕ್ಕೆ ಅನುಕೂವಾಗುವಂತೆ, ‘ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿಗಾಗಿ ನೆರವು’ ಯೋಜನೆಯಡಿ ಮೂಕಾಂಬಿಕಾ ರೈಲ್ವೇ ನಿಲ್ದಾಣ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡುವಂತೆ ಸಂಸದರು ಕೋರಿದರು.
ಕನ್ನಡಪ್ರಭ ವಾರ್ತೆ ಕುಂದಾಪುರ
ಇಲ್ಲಿನ ಕೊಲ್ಲೂರು ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ 14 ಕೋಟಿ ರು. ಅನುದಾನ ನೀಡುವಂತೆ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.ಬೈಂದೂರು ವಿಧಾನಸಭಾ ಕ್ಷೇತ್ರದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ ಮತ್ತು ಕೊಡಚಾದ್ರಿ, ಸೋಮೇಶ್ವರ ಬೀಚ್, ತ್ರಾಸಿ-ಮರವಂತೆಗಳಂತಹ ಸಾಕಷ್ಟು ಪ್ರವಾಸೋದ್ಯಮ ಸ್ಥಳಗಳಿಂದ ಸುತ್ತುವರಿದಿದೆ. ಆದ್ದರಿಂದ ಹೊರಜಿಲ್ಲೆ - ರಾಜ್ಯಗಳ ಪ್ರವಾಸಿಗರು ಇಲ್ಲಿಗೆ ಆಗಮಿಸುವುದಕ್ಕೆ ಅನುಕೂವಾಗುವಂತೆ, ‘ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿಗಾಗಿ ನೆರವು’ ಯೋಜನೆಯಡಿ ಮೂಕಾಂಬಿಕಾ ರೈಲ್ವೇ ನಿಲ್ದಾಣ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡುವಂತೆ ಸಂಸದರು ಕೋರಿದರು.
ಈ ಮನವಿಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ, ಶೀಘ್ರವೇ ಯೋಜನೆಗಳನ್ನು ಕಾರ್ಯಗತಗೊಳಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.