ಸಾರಾಂಶ
ಪ್ರಶಾಂತ್ ಕೆಂಗನಹಳ್ಳಿ
ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿಬೆಂಗಳೂರು ಉತ್ತರ ತಾಲೂಕಿನ ಯಶವಂತಪುರ ಹೋಬಳಿಯ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಚಿಕ್ಕಬಾಣಾವಾರ ಕೆರೆ ಅಭಿವೃದ್ಧಿಗೆ ಬಿಡಿಎ ₹12.60 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆದಿದೆ. ಹಾಗೂ ಪುರಸಭೆಯಿಂದ ₹2 ಕೋಟಿ ಅನುದಾನ ನೀಡಿದೆ.
105 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಕೆರೆಗೆ 2010ರಿಂದ ವಸತಿ ಘಟಕಗಳಿಂದ ಕೊಳಚೆ ನೀರು ಹರಿದು ಬರುತ್ತಿದೆ. ಡಾ। ಶಿವರಾಮ ಕಾರಂತ ಬಡಾವಣೆಯ ಅಭಿವೃದ್ಧಿಯೊಂದಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೊಳಚೆಯಿಂದ ತುಂಬಿರುವ ಚಿಕ್ಕಬಾಣಾವರ ಕೆರೆ ಪುನರುಜ್ಜೀವನಗೊಳಿಸುವ ಕಾಮಗಾರಿಯನ್ನೂ ಆರಂಭಿಸಲಿದೆ.ಪುನರುಜ್ಜೀವನದ ಭಾಗವಾಗಿ ಬಿಡಿಎ ಕೆರೆಯ ತಳದಿಂದ ಹೂಳು ಅಥವಾ ಹೂಳು ಮಿಶ್ರಿತ ಮರಳನ್ನು ತೆಗೆದು ಅದನ್ನು ಸ್ಪಾಯ್ಲ್ ಬ್ಯಾಂಕ್ ಅಥವಾ ನಿಗದಿತ ಡಂಪ್ ಯಾರ್ಡ್‌ಗಳಲ್ಲಿ ಠೇವಣಿ ಮಾಡಲಿದೆ. ಏಜೆನ್ಸಿಯು ಠೇವಣಿ ಮಾಡಿದ ಹೂಳು ಅಥವಾ ಮರಳನ್ನು ವಿಲೇವಾರಿ ಮಾಡಲಿದೆ. ಕೆರೆಯ ಪರಿಧಿಯ ಉದ್ದಕ್ಕೂ ವಾಕ್‌ವೇ, ಮಣ್ಣಿನ ಒಡ್ಡು ನಿರ್ಮಿಸಲು ಬಿಡಿಎ ಯೋಜಿಸಿದೆ. ತ್ಯಾಜ್ಯ ನೀರನ್ನು ತಿರುಗಿಸುವ ಚರಂಡಿಯನ್ನು ನಿರ್ಮಿಸಲಾಗುತ್ತದೆ.
2019ರಲ್ಲಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಲೆಕ್ಕಪರಿಶೋಧನೆಯನ್ನು ನಡೆಸಿತ್ತು. ಕೆರೆಗೆ ಕೊಳಚೆ ನೀರನ್ನು ಬಿಟ್ಟಿದ್ದಕ್ಕಾಗಿ ಪ್ರದೇಶದ ಒಂಬತ್ತು ಅಪಾರ್ಟ್‌ಮೆಂಟ್ ಸಂಕೀರ್ಣಗಳಿಗೆ ನೋಟಿಸ್ ನೀಡಲಾಗಿತ್ತು.ಚಿಕ್ಕಬಾಣಾವರ ಪುರಸಭೆ ಮುಖ್ಯ ಅಧಿಕಾರಿ ಎಚ್.ಎ.ಕುಮಾರ್ ಮಾತನಾಡಿ, ಕೆರೆ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಡಿಪಿಆರ್‌ಗೆ ಜಿಲ್ಲಾಧಿಕಾರಿಗಳ ಅನುಮೋದನೆ ಮತ್ತು ಪೌರಾಡಳಿತ ನಿರ್ದೇಶನಾಲಯದಿಂದ ಟೆಂಡರ್ ಆಗಿದೆ. ಈಗ ಕೆಲಸ ಪ್ರಾರಂಭಿಸಬೇಕಿದೆ. ಮೊದಲನೇ ಹಂತದಲ್ಲಿ ₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಇತ್ತೀಚಿನ ಸರ್ವೆ ಪ್ರಕಾರ ಕೆರೆಯ ವಿಸ್ತೀರ್ಣ 105 ಎಕರೆ. ಅದರಲ್ಲಿ ಎರಡು ಎಕರೆಯಷ್ಟು ಒತ್ತುವರಿಯಾಗಿದೆ. ಒತ್ತುವರಿ ಜಾಗವನ್ನು ಗುರಿಸಲಾಗಿದೆ. ಕೆರೆಗೆ ಕಲುಷಿತ ನೀರು ಎಲ್ಲಿಂದ ಬರುತ್ತದೆ ಎಂದು ಪತ್ತೆ ಹಚ್ಚಿ ಅದನ್ನು ತಡೆಯಲಾಗುತ್ತದೆ. ಕೆರೆ ಮಣ್ಣು, ಕಲುಷಿತ ನೀರು ತೆಗೆದು ಸುತ್ತಲೂ ಸಂರಕ್ಷಣೆ ಮಾಡಿ ಸುಂದರ ಕೆರೆ ನಿರ್ಮಿಸಲಾಗುವುದು ಎಂದರು.
ಶಾಸಕ ಎಸ್.ಮುನಿರಾಜು ಮಾತನಾಡಿ, ಚಿಕ್ಕಬಾಣಾವಾರ ಕೆರೆಯು ಕಾಮಗಾರಿ ಕೆಲಸ ಕೆಲವೇ ದಿನಗಳಲ್ಲಿ ಪ್ರಾರಂಭವಾಗುತ್ತದೆ. ಬಿಡಿಎಯಿಂದ ₹12.60 ಕೋಟಿ ಹಾಗೂ ಪುರಸಭೆಯಿಂದ ₹2 ಕೋಟಿ ಅನುದಾನವನ್ನು ನೀಡಲಾಗುತ್ತಿದೆ. ಅಧಿವೇಶನದಲ್ಲಿ ₹20 ಕೋಟಿ ಅನುದಾನವನ್ನು ಕೇಳಿದ್ದೆವು. ಅದರೆ ಅವರು ಕೊಡಲಿಲ್ಲ. ಇನ್ನು ಕೆಲವು ದಿನಗಳಲ್ಲಿ ಚಿಕ್ಕಬಾಣಾವಾರ ಕೆರೆಗೆ ಕಾಮಗಾರಿ ಕೆಲವು ದಿನಗಳಲ್ಲಿ ಪ್ರಾರಂಬಿಸಲಾಗುತ್ತದೆ ಎಂದರು.ಸ್ಥಳೀಯ ನಿವಾಸಿ ಚಿಕ್ಕಸ್ವಾಮಿ, ಕೆರೆಗಳನ್ನು ಸರ್ಕಾರ ಅಭಿವೃದ್ಧಿಪಡಿಸಿ ಉಳಿಸಬೇಕಿದೆ. ಮಳೆ ಬಂದಾಗ ಕೆರೆ ಸುತ್ತಲಿನ ಮನೆಗಳಿಗೆ ನೀರು ನುಗ್ಗಲು ಕೆರೆ ಹಾಗೂ ರಾಜಕಾಲುವೆಯ ಒತ್ತುವರಿಯೇ ಕಾರಣವಾಗಿದೆ. ತ್ವರಿತಗತಿಯಲ್ಲಿ ಕೆರೆ ಹಾಗೂ ರಾಜಕಾಲುವೆ ಒತ್ತುವರಿ ತೆರವು ಮಾಡಬೇಕಾಗಿದೆ ಎಂದರು.
ಹ್ಯೂಮನ್ ರೈಟ್ಸ್ ಅಂಡ್ ಪ್ರೊಟೆಕ್ಷನ್ ಕಮಿಟಿ ರಾಜ್ಯಾಧ್ಯಕ್ಷ ಬಿ.ಎಂ.ಚಿಕ್ಕಣ್ಣ, ಕೆರೆ ಅಭಿವೃದ್ಧಿಗಾಗಿ ಪುರಸಭೆ ಅಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿದ್ದೆವು. ಕೆರೆ ಸ್ವಚ್ಚವಾಗಿದ್ದರೆ ರಾಸುಗಳು, ಜಲಚರಗಳು, ಪಕ್ಷಿಗಳು, ಸರಿಸೃಪಗಳಿಗೆ ಆಶ್ರಯವಾಗುತ್ತದೆ. ಅಲ್ಲದೇ ಕೆರೆಯ ಸುತ್ತಮುತ್ತ ಉತ್ತಮ ಪರಿಸರ ನಿರ್ಮಾಣವಾಗುವುದರ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಿ ಬತ್ತಿರುವ ಕೊಳವೆ ಬಾವಿಗಳಲ್ಲಿ ಕುಡಿಯಲು ಯೋಗ್ಯವಾದ ನೀರು ಸಿಗುತ್ತದೆ. ಇದರಿಂದಾಗಿ ಬೇಸಿಗೆ ಸಮಯದಲ್ಲಿ ಬೆಂಗಳೂರಿಗೆ ಎದುರಾಗುತ್ತಿರುವ ಕುಡಿಯುವ ನೀರಿನ ಭವಣೆ ತಪ್ಪಿಸಬಹುದಾಗಿದೆ ಎಂದರು.ನವೀನ್ ಕುಮಾರ್ ಪರಿಸರ ಬಳಗ ಚಿಕ್ಕಬಾಣಾವರ
ಚಿಕ್ಕಬಾಣವಾರ ಕೆರೆಯ ಅಭಿವೃದ್ಧಿಗಾಗಿ ಲೋಕಾಯುಕ್ತಕ್ಕೆ ದೂರು ನೀಡಿದ್ದೇವು. ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರೂ ದೂರು ನೀಡಿದ್ದರು. ಡಿಜಿಪಿ ಸಲೀಂ ಮತ್ತು ಮುಖಂಡರು, ಸ್ಥಳೀಯರು ಕೆರೆ ಅಭಿವೃದ್ಧಿಗಾಗಿ ಅನೇಕ ಬಾರಿ ಪ್ರಯತ್ನಪಟ್ಟಿದ್ದೇವೆ. ನಗರ ಬೆಳೆದಂತೆಲ್ಲ ಕಾಲಕ್ರಮೇಣ ಕೆರೆ ಸಂಪೂರ್ಣ ಹಾಳಾಗಿದೆ. ಕೆರೆ ತುಂಬ ಗಿಡಗಂಟೆ ಗಲೀಜು ತುಂಬಿ ಕೆಟ್ಟ ವಾಸನೆ ಬರುತ್ತಿದೆ ಎಂದು ತಿಳಿಸಿದರು.