ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯದ ಏಕೈಕ ಸಂಗೀತ, ನೃತ್ಯ, ಪ್ರದರ್ಶಕ ಕಲೆಗಳ ಮೈಸೂರಿನ ಡಾ। ಗಂಗೂಬಾಯಿ ಹಾನಗಲ್‌ ವಿಶ್ವವಿದ್ಯಾಲಯದಲ್ಲಿ ಈ ಬಾರಿ ಸಂಗೀತ, ನೃತ್ಯ, ತಾಳವಾದ್ಯ ವಾರ್ಷಿಕ ವಿಶೇಷ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆ 14 ಸಾವಿರ ದಾಟಿದೆ.

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ ಈ ವಿವಿಗೆ ಹಸ್ತಾಂತರಗೊಂಡ ಬಳಿಕ ಇದು ಮೂರನೇ ವರ್ಷ ನಡೆಯುವ ಪರೀಕ್ಷೆಯಾಗಿದೆ. ಈ ಬಾರಿ ಮೇ 10ರಿಂದ 25ರವರೆಗೆ ರಾಜ್ಯಾದ್ಯಂತ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗಳು ನಡೆಯಲಿವೆ. ರಾಜ್ಯದ 30 ಕೇಂದ್ರಗಳಲ್ಲಿ 14,400ಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿರುವುದು ಗಮನಾರ್ಹ. ಅಂದರೆ, ಕಳೆದ ಬಾರಿ 22 ಕೇಂದ್ರಗಳಲ್ಲಿ 12,500 ಮಂದಿ ಪರೀಕ್ಷೆಗೆ ಹಾಜರಾಗಿದ್ದರು.

ಬೆಂಗಳೂರಲ್ಲಿ ಗರಿಷ್ಠ ಸಂಖ್ಯೆ:

ಬೆಂಗಳೂರು ವಿಭಾಗದಲ್ಲೇ ಗರಿಷ್ಠ 6,500 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಅಲ್ಲಿ 8-10 ದಿನಗಳ ಕಾಲ ಪರೀಕ್ಷೆ ನಡೆಯಲಿದೆ. ಬಳಿಕ ಮೈಸೂರು ಹಾಗೂ ಮಂಗಳೂರು ವಿಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಮೈಸೂರಿನಲ್ಲಿ ಮಾತ್ರ ಮೇ 20 ರಿಂದ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿವೆ.


ಮೇ 10ರಂದು ಏಕಕಾಲದಲ್ಲಿ ಸಂಗೀತ, ನೃತ್ಯ, ತಾಳವಾದ್ಯಗಳ ಪೈಕಿ ಜೂನಿಯರ್‌, ಸೀನಿಯರ್‌, ವಿದ್ವತ್‌ ಪೂರ್ವ ಹಾಗೂ ವಿದ್ವತ್‌ ಅಂತಿಮ ಥಿಯರಿ ಪರೀಕ್ಷೆಗಳು ರಾಜ್ಯಾದ್ಯಂತ ಒಂದೇ ದಿನ ನಡೆಯಲಿವೆ.