ಗವಿಮಠ ಹಾಸ್ಟೆಲ್ ಪ್ರವೇಶಕ್ಕಾಗಿ ಪರೀಕ್ಷೆ ಬರೆದ 1427 ವಿದ್ಯಾರ್ಥಿಗಳು

| Published : May 13 2024, 12:00 AM IST

ಸಾರಾಂಶ

ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಉಚಿತ ಪ್ರಸಾದ ಮತ್ತು ವಸತಿ ಇರುವ ಹಾಸ್ಟೆಲ್‌ನಲ್ಲಿ ಪ್ರಸಕ್ತ ವರ್ಷ ಪ್ರವೇಶ ಬಯಸಿ 1427 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ! 5, 6 ಮತ್ತು 7ನೇ ತರಗತಿ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆ ನಡೆದಿದೆ. ಈಗಾಗಲೇ ಶ್ರೀ ಗವಿಸಿದ್ಧೇಶ್ವರ ಹಾಸ್ಟೆಲ್‌ನಲ್ಲಿ 3500 ವಿದ್ಯಾರ್ಥಿಗಳು ಇದ್ದಾರೆ.

ಕೊಪ್ಪಳ: ಶ್ರೀ ಗವಿಸಿದ್ಧೇಶ್ವರ ಉಚಿತ ಪ್ರಸಾದ ಮತ್ತು ವಸತಿ ಇರುವ ಹಾಸ್ಟೆಲ್‌ನಲ್ಲಿ ಪ್ರಸಕ್ತ ವರ್ಷ ಪ್ರವೇಶ ಬಯಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ ಬರೋಬ್ಬರಿ 1427.

5, 6 ಮತ್ತು 7ನೇ ತರಗತಿ ಪ್ರವೇಶಕ್ಕಾಗಿ ನಡೆಯುವ ಪ್ರವೇಶ ಪರೀಕ್ಷೆ ಇಷ್ಟೊಂದು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಶಾಲೆಯಲ್ಲಿ ದಾಖಲಾದ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನಲ್ಲಿ ನೇರವಾಗಿ ಪ್ರವೇಶ ನೀಡಲಾಗುತ್ತದೆ.

ಇದು ಕೇವಲ ಹಿರಿಯ ಪ್ರಾಥಮಿಕ ಶಾಲೆಯ ಪ್ರವೇಶಕ್ಕಾಗಿ ನಡೆದಿರುವ ಪ್ರವೇಶ ಪರೀಕ್ಷೆಯಾಗಿದೆ. ಇದಕ್ಕೆ 1500 ವಿದ್ಯಾರ್ಥಿಗಳು ಹಾಜರಾಗಿದ್ದು, ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಹಾಸ್ಟೆಲ್‌ಗೆ ಸೇರಿಕೊಳ್ಳುತ್ತಾರೆ.

ಈಗಾಗಲೇ ಶ್ರೀ ಗವಿಸಿದ್ಧೇಶ್ವರ ಹಾಸ್ಟೆಲ್‌ನಲ್ಲಿ 3500 ವಿದ್ಯಾರ್ಥಿಗಳು ಇದ್ದು, ಅದರಲ್ಲಿ ಪಿಯುಸಿ ದ್ವಿತೀಯ ವರ್ಷದಲ್ಲಿ ತೇರ್ಗಡೆಯಾದ, ಎಸ್‌ಎಸ್‌ಎಲ್‌ಸಿಯಲ್ಲಿ ತೇರ್ಗಡೆಯಾದ ಮತ್ತು ಪದವಿ ಅಂತಿಮ ವರ್ಷದಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಹಾಸ್ಟೆಲ್‌ನಿಂದ ಹೊರಹೋಗುತ್ತಾರೆ. ಹೀಗೆ ಹೊರಹೋಗುವ ವಿದ್ಯಾರ್ಥಿಗಳ ಸಂಖ್ಯೆ 500-600 ಮಾತ್ರ. ಅಂದರೆ, ಮೂರು ಸಾವಿರ ವಿದ್ಯಾರ್ಥಿಗಳು ಈಗಾಗಲೇ ಹಾಸ್ಟೆಲ್‌ನಲ್ಲಿ ಇದ್ದಾರೆ. ಈಗ ಕೇವಲ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಸ್ಟೆಲ್ ಪ್ರವೇಶ ಬಯಸಿ ಪರೀಕ್ಷೆ ಬರೆದಿದ್ದಾರೆ.

ಇವರಲ್ಲದೆ ಪದವಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಹಾಸ್ಟೆಲ್ ಸೇರಿಕೊಳ್ಳುವುದರಿಂದ ಈ ಬಾರಿ ಗವಿಮಠ ಹಾಸ್ಟೆಲ್‌ನಲ್ಲಿ 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.

35,000 ಭಕ್ತರು ಮಠದಲ್ಲಿ: ಭಾನುವಾರ ತಮ್ಮ ಮಕ್ಕಳನ್ನು ಪರೀಕ್ಷೆ ಬರೆಯಿಸಲು ಕರೆದುಕೊಂಡು ಬಂದಿದ್ದ 2500 ಪಾಲಕರು ಮತ್ತು ಪರೀಕ್ಷೆ ಬರೆಯಲು ಬಂದಿದ್ದ 1427 ವಿದ್ಯಾರ್ಥಿಗಳು ಸೇರಿಕೊಂಡು ಸುಮಾರು 3500 ಭಕ್ತರು ಮಠದ ಆವರಣದಲ್ಲಿ ಇದ್ದರು. ಅವರೆಲ್ಲರಿಗೂ ಅಚ್ಚುಕಟ್ಟಾದ ಪ್ರಸಾದ ವ್ಯವಸ್ಥೆ ಸಹ ಮಾಡಲಾಯಿತು.

ಗವಿಮಠ ಹಾಸ್ಟೆಲ್ ಸೇರಲು ಪೈಪೋಟಿ: ಶ್ರೀ ಗವಿಸಿದ್ಧೇಶ್ವರ ಹಾಸ್ಟೆಲ್‌ನಲ್ಲಿದ್ದುಕೊಂಡು ಕಲಿಯುವುದಕ್ಕಾಗಿ ಈಗ ಪೈಪೋಟಿ ಏರ್ಪಟ್ಟಂತೆ ಕಾಣುತ್ತಿದೆ. ಕೊಪ್ಪಳ ಅಷ್ಟೇ ಅಲ್ಲ, ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಯಿಂದಲೂ ವಿದ್ಯಾರ್ಥಿಗಳು ಆಗಮಿಸಿದ್ದರು. ಬೆರಳೆಣಿಕೆಯಷ್ಟು ರಾಜ್ಯದ ಮೂಲೆ ಮೂಲೆಯಿಂದಲೂ ಆಗಮಿಸಿದ್ದು ವಿಶೇಷ.

ಇದುವರೆಗೂ ಕೊಪ್ಪಳ ಗವಿಮಠಕ್ಕೆ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಮಕ್ಕಳು ಆಗಮಿಸುತ್ತಿರುವುದು ಸಾಮಾನ್ಯವಾಗಿತ್ತು. ಆದರೆ, ಇದೇ ಮೊದಲ ಬಾರಿಗೆ ರಾಜ್ಯದ ಬಹುತೇಕ ಜಿಲ್ಲೆಯಿಂದ ಪ್ರವೇಶ ಬಯಸಿ ವಿದ್ಯಾರ್ಥಿಗಳು ಬಂದಿರುವುದು ವಿಶೇಷ.