ಎರಡು ಕುಟುಂಬಗಳ ಮಧ್ಯೆ ಆಸ್ತಿ ವಿಷಯವಾಗಿ ದಾಖಲಾಗಿದ್ದ 145 ವರ್ಷದ ವ್ಯಾಜ್ಯ ರಾಜಿ ಮೂಲಕ ಇತ್ಯರ್ಥ

| N/A | Published : Feb 16 2025, 01:48 AM IST / Updated: Feb 16 2025, 12:36 PM IST

ಎರಡು ಕುಟುಂಬಗಳ ಮಧ್ಯೆ ಆಸ್ತಿ ವಿಷಯವಾಗಿ ದಾಖಲಾಗಿದ್ದ 145 ವರ್ಷದ ವ್ಯಾಜ್ಯ ರಾಜಿ ಮೂಲಕ ಇತ್ಯರ್ಥ
Share this Article
  • FB
  • TW
  • Linkdin
  • Email

ಸಾರಾಂಶ

  ಎರಡು ಕುಟುಂಬಗಳ ಮಧ್ಯೆ ಆಸ್ತಿ ವಿಷಯವಾಗಿ ದಾಖಲಾಗಿದ್ದ ಪ್ರಕರಣವಿದು. 1991ರಲ್ಲಿ ವಾದಿಯು ಪ್ರತಿವಾದಿಯ ವಿರುದ್ಧ ಅಥಣಿಯ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು. ಆದರೆ, ಪ್ರತಿವಾದಿಯು ತಮ್ಮ ಕುಟುಂಬದಲ್ಲಿ 1880ರಲ್ಲೇ ಆಸ್ತಿ ವಿಭಾಗವಾಗಿದೆ ಎಂದು ತಿಳಿಸಿದ್ದರು.

ಧಾರವಾಡ:  ಆಸ್ತಿ ವಿಷಯವಾಗಿ 145 ವರ್ಷಗಳ ಹಳೆ ಹಾಗೂ 3 ತಲೆಮಾರುಗಳಿಂದ ಇದ್ದ ವ್ಯಾಜ್ಯವನ್ನು ಧಾರವಾಡ ಹೈಕೋರ್ಟ್‌ ಪೀಠವು ರಾಜಿ ಸಂಧಾನದ ಮೂಲಕ ಬಗೆಹರಿಸಿದೆ. ಈ ಮೂಲಕ ದಾಖಲೆ ನಿರ್ಮಿಸಿದಂತಾಗಿದೆ.

ಆಗಿದ್ದೇನು?:

ಬೆಳಗಾವಿ ಜಿಲ್ಲೆಯ ಅಥಣಿ ಮೂಲದ ಎರಡು ಕುಟುಂಬಗಳ ಮಧ್ಯೆ ಆಸ್ತಿ ವಿಷಯವಾಗಿ ದಾಖಲಾಗಿದ್ದ ಪ್ರಕರಣವಿದು. 1991ರಲ್ಲಿ ವಾದಿಯು ಪ್ರತಿವಾದಿಯ ವಿರುದ್ಧ ಅಥಣಿಯ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು. ಆದರೆ, ಪ್ರತಿವಾದಿಯು ತಮ್ಮ ಕುಟುಂಬದಲ್ಲಿ 1880ರಲ್ಲೇ ಆಸ್ತಿ ವಿಭಾಗವಾಗಿದೆ ಎಂದು ತಿಳಿಸಿದ್ದರು. ಅಲ್ಲದೇ, ಇದೇ ಕುಟುಂಬದ ಆಸ್ತಿಗಳ ಬಗ್ಗೆ ಪ್ರತಿವಾದಿಯ ಅಜ್ಜ, ವಾದಿಯ ಮಾವನ ವಿರುದ್ಧ 1898ರಲ್ಲಿ ಅಥಣಿ ಸಿವಿಲ್‌ ಜಡ್ಜ್‌ ಜ್ಯೂನಿಯರ್‌ ಡಿವಿಜನ್‌ ನ್ಯಾಯಾಲಯದಲ್ಲಿ ಸಹ ಕೆಲವು ಜಮೀನುಗಳ ಬಗ್ಗೆ ದಾವೆಯು ದಾಖಲಾಗಿ ಪ್ರತಿವಾದಿಯ ಅಜ್ಜನ ಪರವಾಗಿ ಆಗಿತ್ತು ಎಂದು ವಾದ ಮಂಡಿಸಿದ್ದರು.

ವಾದಿ -ಪ್ರತಿವಾದಿ ಅವರ ಹೇಳಿಕೆ ಮತ್ತು ದಾಖಲಾತಿ ಪರಮಾರ್ಶಿಸಿ ಅಥಣಿಯ ಹಿರಿಯ ದಿವಾಣಿ ನ್ಯಾಯಾಲಯವು ಪ್ರತಿವಾದಿಯ ವಾದವನ್ನು ತಿರಸ್ಕರಿಸಿ ಅಸಲು ದಾವೆ 1991ರಲ್ಲಿ ದಾಖಲಾಗಿದ್ದ ಕೇಸ್‌ನ್ನು 2004ರಲ್ಲಿ ವಾದಿಯ ಪರವಾಗಿ ತೀರ್ಪು ನೀಡಿ ಇತ್ಯರ್ಥಪಡಿಸಿತ್ತು. 2004ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ 2005ರಲ್ಲಿ ಪ್ರತಿವಾದಿಯು ವಾದಿಯ ವಿರುದ್ಧ ಹೈಕೋರ್ಟ್‌ನಲ್ಲಿ ಮತ್ತೆ ಮೇಲ್ಮನವಿ ಸಲ್ಲಿಸಿ ದಾಖಲಿಸಿದ್ದರು.

ಮೂರು ತಲೆಮಾರುಗಳಿಂದ ಬಗೆಹರಿಯದೆ ಇರುವುದನ್ನು ಗಮನಿಸಿದ ವಿಭಾಗೀಯ ಪೀಠದ ನ್ಯಾಯಮೂರ್ತಿ ಅಶೋಕ ಎಸ್. ಕಿಣಗಿ ಮತ್ತು ಉಮೇಶ ಎಂ. ಅಡಿಗ ಅವರು ಉಭಯ ಪಕ್ಷಗಾರರಿಗೆ ವಕೀಲರ ಸಮಕ್ಷಮದಲ್ಲಿ ತಿಳಿವಳಿಕೆ ನೀಡಲಾಯಿತು. ಬಳಿಕ ಜ. 25ರಂದು ವಿಭಾಗೀಯ ಪೀಠದ ಮುಂದೆ ಉಭಯ ಪಕ್ಷಗಾರರು ತಮ್ಮ ವಕೀಲರ ಮೂಲಕ ರಾಜಿ ಸಂಧಾನಕ್ಕೆ ಒಪ್ಪಿಕೊಂಡ ಮೇಲೆ ಪ್ರಕರಣವನ್ನು ಇತ್ಯರ್ಥಗೊಳಿಸಲಾಯಿತು.

ಈ ಮೂಲಕ 145 ವರ್ಷಗಳ ವ್ಯಾಜ್ಯವನ್ನು ಇತ್ಯರ್ಥಪಡಿಸಿದಂತಾಯಿತು. ಪ್ರಕರಣದಲ್ಲಿ ವಾದಿಗಳ ನ್ಯಾಯವಾದಿ ಜಿ. ಬಾಲಕೃಷ್ಣ ಶಾಸ್ತ್ರಿ ಅವರ ಪರವಾಗಿ ವಕೀಲ ಚೇತನ ಮುನವಳ್ಳಿ, ಪ್ರತಿವಾದಿಗಳ ನ್ಯಾಯವಾದಿಗಳಾದ ಆನಂದ ಆರ್‌. ಕೊಳ್ಳಿ ಹಾಗೂ ಸೌರಭ ಎ. ಸಂಡೂರ ಹಾಜರಾಗಿದ್ದರು.

ಎಷ್ಟೇ ಹಳೆಯದಾದ ವಿವಾದಗಳಿದ್ದರೂ ಕಾನೂನು ಅಡಿ ರಾಜಿ ಮಾಡಿಕೊಳ್ಳಬಹುದಾದ ಪ್ರಕರಣ ಇತ್ಯರ್ಥಗೊಳಿಸಿಕೊಂಡರೆ ವ್ಯಾಜ್ಯಗಳಿಂದ ಮುಕ್ತವಾದ ಜೀವನ ನಡೆಸಬಹುದು ಎಂಬುದಕ್ಕೆ ಈ ಪ್ರಕರಣ ಒಂದು ನಿದರ್ಶನವಾಗಿದೆ. ರಾಷ್ಟ್ರೀಯ ಲೋಕ ಅದಾಲತ್‌ ಮಾ. 8ರಂದು ಎಲ್ಲ ನ್ಯಾಯಾಲಯಗಳಲ್ಲಿ ನಡೆಯಲಿದೆ. ಇದರ ಸದುಪಯೋಗವನ್ನು ಕಕ್ಷಿಗಾರರು ಪಡೆದುಕೊಳ್ಳಬೇಕು ಎಂದು ಹೈಕೋರ್ಟ್‌ ಧಾರವಾಡ ಪೀಠದ ಕಾನೂನು ಸೇವಾ ಸಮಿತಿ ಕಾರ್ಯದರ್ಶಿಗಳು ಮತ್ತು ನ್ಯಾಯಾಂಗ ಅಧೀಕ್ಷಕ ವಿಲೇಖನಾಧಿಕಾರಿ ಜೆರಾಲ್ಡ್‌ ರುಡಾಲ್ಫ್‌ ಮೆಂಡೋನ್ಸಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.