ಹಾವೇರಿ ತಾಲೂಕಿನ ಗುತ್ತಲ ಹೋಬಳಿ ವ್ಯಾಪ್ತಿಯ ಹರಳಹಳ್ಳಿ ಗ್ರಾಮದ ಸಮೀಪ ತುಂಗಭದ್ರಾ ನದಿ ತೀರದಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಸುಮಾರು 146 ಮೆಟ್ರಿಕ್ ಟನ್ ಮರಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಹಾವೇರಿ: ತಾಲೂಕಿನ ಗುತ್ತಲ ಹೋಬಳಿ ವ್ಯಾಪ್ತಿಯ ಹರಳಹಳ್ಳಿ ಗ್ರಾಮದ ಸಮೀಪ ತುಂಗಭದ್ರಾ ನದಿ ತೀರದಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಸುಮಾರು 146 ಮೆಟ್ರಿಕ್ ಟನ್ ಮರಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ನದಿತೀರದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿರುವ ಕುರಿತು ಮಾಹಿತಿ ಪಡೆದ ಅಧಿಕಾರಿಗಳು ಅ.9ರಂದು ಬೆಳಗ್ಗೆ ಕಾರ್ಯಾಚರಣೆ ಆರಂಭಿಸಿದರು. ಈ ವೇಳೆ ಅಧಿಕಾರಿಗಳು ಸ್ಥಳಕ್ಕೆ ತೆರಳುತ್ತಿದ್ದಂತೆ ಮರಳು ಸಂಗ್ರಹಿಸಿದ್ದ ಆರೋಪಿಗಳು ಪರಾರಿಯಾಗಿದ್ದಾರೆ. ಹೀಗಾಗಿ ಮರಳು ಸಂಗ್ರಹಿಸಿದವರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.ಹಾವೇರಿ ತಹಸೀಲ್ದಾರ್ ಕೆ.ಶರಣಮ್ಮ ಅವರ ನೇತೃತ್ವದಲ್ಲಿ ಗುತ್ತಲ ಹೋಬಳಿಯ ಕಂದಾಯ ನಿರೀಕ್ಷಕ ರವೀಂದ್ರ ಮಲ್ಲಾಡದ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳಾದ ಪ್ರಕಾಶ್ ಉಜ್ಜಿನಿ, ಹೊನ್ನಪ್ಪ, ಪ್ರಶಾಂತ್, ವೀರೇಶ್, ಲಿಂಗರಾಜ ಮತ್ತು ವಿನಾಯಕ ಅವರ ತಂಡ ಅ.9ರ ಬೆಳಗ್ಗೆ 7 ಗಂಟೆಯಿಂದ ಕಾರ್ಯಾಚರಣೆ ನಡೆಸಿತು.
ಜಪ್ತಿ ಮಾಡಿದ ಮರಳನ್ನು ಸಾಗಿಸಲು ತಕ್ಷಣ ಟಿಪ್ಪರ್, ಲಾರಿ ಹಾಗೂ ಜೆಸಿಬಿ ಯಂತ್ರಗಳು ಲಭ್ಯವಾಗದ ಕಾರಣ ಅಧಿಕಾರಿಗಳು ರಾತ್ರಿಯಿಡೀ ನದಿತೀರದಲ್ಲೇ ಬೀಡುಬಿಟ್ಟು ಮರಳಿನ ಮೇಲೆ ನಿಗಾ ವಹಿಸಿದರು. ಬಳಿಕ ಅ.10ರಂದು ಬೆಳಗಿನ ಜಾವ ಸುಮಾರು 3 ಗಂಟೆಗೆ ಎರಡು ಜೆಸಿಬಿ ಯಂತ್ರಗಳು ಹಾಗೂ ಎರಡು ಲಾರಿಗಳ ನೆರವಿನಿಂದ ಮರಳನ್ನು ಸಾಗಿಸಿ ಪೊಲೀಸ್ ಸುಪರ್ದಿಗೆ ಒಪ್ಪಿಸಲಾಯಿತು.ಮರಳು ಸಾಗಣೆ ತಡೆಯಲು ರಸ್ತೆಗಳಿಗೆ ಕಂದಕ: ನದಿತೀರದಿಂದ ಮತ್ತೆ ಅಕ್ರಮವಾಗಿ ಮರಳು ಸಾಗಣೆ ನಡೆಯದಂತೆ ತಡೆಯುವ ಉದ್ದೇಶದಿಂದ ಮರಳು ಸಾಗಿಸುವ ರಸ್ತೆಗಳಲ್ಲಿ ಕಂದಕಗಳನ್ನು ನಿರ್ಮಿಸಲಾಗಿದೆ. ಈ ಮೂಲಕ ಅಕ್ರಮ ಮರಳು ಸಾಗಣೆಗೆ ಕಡಿವಾಣ ಹಾಕಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಹಕರಿಸಿದರೆಂದು ತಹಸೀಲ್ದಾರರು ತಿಳಿಸಿದ್ದಾರೆ.