ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನ.14ರಿಂದ 7 ದಿನಗಳ ಕಾಲ ರಾಜ್ಯಾದ್ಯಂತ 70ನೇ ಅಖಿಲ ಭಾರತ ಸಹಕಾರಿ ಸಪ್ತಾಹ ನಡೆಯಲಿದ್ದು, ಶಿವಮೊಗ್ಗದಲ್ಲಿ ಅದರ ಉದ್ಘಾಟನೆ ನಡೆಯಲಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಹೇಳಿದರು.ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರು ಜನ್ಮದಿನದಂತೆ ಈ ಸಪ್ತಾಹ ಉದ್ಘಾಟನೆ ಸಹ ನಡೆಯುತ್ತದೆ. ಈ ಬಾರಿ ಶಿವಮೊಗ್ಗದಲ್ಲಿ ಉದ್ಘಾಟನೆ ನಡೆಯುವುದು ವಿಶೇಷ. ಕುವೆಂಪು ರಂಗಮಂದಿರದಲ್ಲಿ ಬೆಳಗ್ಗೆ 11 ಗಂಟೆಗೆ ರಾಜ್ಯ ಸಹಕಾರಿ ಸಚಿವ ರಾಜಣ್ಣ ಸಪ್ತಾಹ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮತ್ತು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭಾಗಿಯಾಗಲಿದ್ದಾರೆ. ಅಧ್ಯಕ್ಷತೆಯನ್ನು ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಡಿ.ಟಿ. ದೇವೇಗೌಡ ವಹಿಸಲಿದ್ದಾರೆ ಎಂದು ಹೇಳಿದರು.
ಜಿಲ್ಲಾ ಸಹಕಾರ ಯೂನಿಯನ್ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮದ ಸಹಭಾಗಿತ್ವವನ್ನು ಡಿಸಿಸಿ ಬ್ಯಾಂಕ್, ಹಾಲು ಉತ್ಪಾದಕರ ಒಕ್ಕೂಟ ಸೇರಿದಂತೆ ಜಿಲ್ಲೆಯ ಎಲ್ಲ ಸಹಕಾರಿ ಸಂಘಗಳು ಜೊತೆಯಾಗಿ ವಹಿಸಲಿವೆ. ಉದ್ಘಾಟನೆಯ ದಿನ ಬೆಳಗ್ಗೆ 9.30ಕ್ಕೆ ಸಹಕಾರಿ ಸಂಘಗಳು ಮತ್ತು ಇತ್ತೀಚಿನ ಬೆಳವಣಿಗೆಳು ವಿಷಯದ ಮೇಲೆ ವಿಚಾರ ಸಂಕಿರಣ ನಡೆಯಲಿದೆ ಎಂದು ವಿವರಿಸಿದರು.ಒಂದೊಂದು ಜಿಲ್ಲೆಯಲ್ಲಿ ಸಪ್ತಾಹ ಕಾರ್ಯಕ್ರಮ:
ಶಿವಮೊಗ್ಗದಲ್ಲಿ ಸಪ್ತಾಹದ ಉದ್ಘಾಟನೆಯಾದರೆ, ಉಳಿದ ದಿನಗಳಲ್ಲಿ ಪ್ರತಿದಿನ ಒಂದೊಂದು ಜಿಲ್ಲೆಯಲ್ಲಿ ಸಹಕಾರಿ ಸಪ್ತಾಹದ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ಸಹಕಾರಿ ಮಂಡಳ ತಿಳಿಸಿದಂತೆ ಪ್ರತಿದಿನವೂ ಒಂದೊಂದು ವಿಷಯದ ಮೇಲೆ ಸಹಕಾರಿಗಳ ಮಂಥನ ನಡೆಯಲಿದೆ. ಈ ಮೂಲಕ ಸಹಕಾರಿ ಕ್ಷೇತ್ರದ ಸಮಸ್ಯೆ, ವಿವಿಧ ಕಾಯ್ದೆಗಳ ಸಾಧಕ ಬಾಧಕಗಳ ಕುರಿತು ಅವಲೋಕನ ನಡೆಯಲಿದೆ. ಉಳಿದ 6 ದಿನಗಳ ಕಾಲ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕೂಡ ಸಹಕಾರಿ ಸಪ್ತಾಹದ ಅಂಗವಾಗಿ ಚಿಂತನ ಮಂಥನ ನಡೆಯಲಿದೆ. ಜಿಲ್ಲೆಯ ಸುಮಾರು ಆರೇಳು ಲಕ್ಷ ಸಹಕಾರಿಗಳು ಈ ಸಪ್ತಾಹದಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಭಾಗಿಯಾಗಲಿದ್ದಾರೆ ಎಂದರು.ಕುವೆಂಪು ರಂಗಮಂದಿರದಲ್ಲಿ ಉದ್ಘಾಟನೆಯ ದಿನದಂದು ಸ್ವಸಹಾಯ ಸಂಘಗಳ ಸದಸ್ಯರು ತಯಾರಿಸಿದ ಉತ್ಪಾದಕ ವಸ್ತುಗಳ ವಸ್ತು ಪ್ರದರ್ಶನ ಕೂಡ ನಡೆಯಲಿದೆ. ಜೊತೆಗೆ ಇನ್ನಿತರ ಸಂಸ್ಥೆಗಳ ಸ್ಟಾಲ್ ಗಳು ಇರಲಿದೆ. ನ.20ರಂದು ವಿಜಯಪುರದಲ್ಲಿ ಸಮಾರೋಪ ನಡೆಯಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕೆ.ರತ್ನಾಕರ್, ಶಿಮುಲ್ ಅಧ್ಯಕ್ಷ ಎನ್.ಎಚ್. ಶ್ರೀಪಾದ ರಾವ್ ಹೆಗಡೆ ನಿಸರಾಣಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಷಡಾಕ್ಷರಿ, ಯೋಗೀಶ್, ಜಗದೀಶ್ವರ್ ಕೆ.ಎಲ್., ಎಸ್.ಕೆ. ಮರಿಯಪ್ಪ ಮತ್ತಿತರರು ಇದ್ದರು.- - - -ಫೋಟೋ:
ಶಿವಮೊಗ್ಗದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್. ಎಂ. ಮಂಜುನಾಥ ಗೌಡ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.