ಸಾರಾಂಶ
ಹನೂರು: ಜೋಳದ ಬೆಳೆಯನ್ನು ತಿಂದಿದೆ ಎಂದು 15 ಜಾನುವಾರಗಳಿಗೆ ಮಚ್ಚಿನೇಟು ಕೊಟ್ಟಿರುವ ಅಮಾನವೀಯ ಘಟನೆ ಹನೂರು ತಾಲೂಕಿನ ಒಡೆಯರ ಪಾಳ್ಯ ಸಮೀಪದ ಟಿಬೆಟಿಯನ್ ಕ್ಯಾಂಪ್‌ನ ಡಿ ವಿಲೇಜ್ ನಲ್ಲಿ ಬುಧವಾರ ಸಂಜೆ ನಡೆದಿದೆ. ಒಡೆಯರಪಾಳ್ಯ ಸಮೀಪದ ಹಿರಿಯಂಬಲ ಗ್ರಾಮದ ರಘು, ಸಿದ್ದಪ್ಪ, ಬಸವರಾಜು ಎಂಬುವವರು ಎತ್ತುಗಳನ್ನು ಮೇಯಲು ಬಿಟ್ಟಿದ್ದರು. ಈ ಸಂದರ್ಭದಲ್ಲಿ ಎತ್ತುಗಳು ಖಾಸಗಿ ಜಮೀನಿಗೆ ನುಗ್ಗಿ ಜೋಳದ ಫಸಲನ್ನು ತಿಂದಿವೆ. ಇದರಿಂದ ಕುಪಿತರಾದ ನಾಲ್ವರು ಟಿಬೇಟಿಯನ್ ವ್ಯಕ್ತಿಗಳು ಹದಿನೈದಕ್ಕೂ ಹೆಚ್ಚು ಎತ್ತುಗಳ ಕಾಲು, ಬಾಲ ಹಾಗೂ ಕೊಂಬುಗಳಿಗೆ ಮಚ್ಚಿನಿಂದ ಹಲ್ಲೆ ಮಾಡಿ ಓಡಿಸಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿದ್ದ ಎತ್ತುಗಳು ಮನೆಗಳಿಗೆ ತೆರಳಿದರೆ ತೀವ್ರ ಗಾಯಗೊಂಡಿದ್ದ ಮೂರು ಎತ್ತುಗಳು ನಡೆಯಲು ಆಗದೆ ಜಮೀನಿನಲ್ಲೇ ಅಸ್ವಸ್ಥಗೊಂಡು ಬಿದ್ದಿವೆ. ವಿಚಾರ ತಿಳಿಯುತ್ತಿದ್ದಂತೆ ಜಾನುವಾರ ಮಾಲೀಕರ ಆಕ್ರಂದನ ಮುಗಿಲು ಮುಟ್ಟಿ ಗೋಳಾಡಿದ್ದಾರೆ. ಹೊಲಗಳಲ್ಲಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆವು, ಲಕ್ಷಾಂತರ ಬೆಲೆ ಬಾಳುವ ಎತ್ತಿನ ಕಾಲನ್ನು ಕತ್ತರಿಸಿದ್ದಾನೆ ಎಂದು ರೈತರು ಗೋಳಾಡಿರುವುದು ಮನ ಕಲಕುವಂತಿತ್ತು. ಈ ಅಮಾನವೀಯ ಘಟನೆ ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.