ಸಾರಾಂಶ
ಏಕನಿವೇಶನ ನಕ್ಷೆ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆ
ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಏಕವಿನ್ಯಾಸ ನಕ್ಷೆಯ ಸಮಸ್ಯೆಗಳ ಬಗ್ಗೆ ಜನರು ದಿನೇದಿನೆ ದೂರುತಿದ್ದಾರೆ. ಜನರಿಗೆ ಈ ನಕ್ಷೆ ಸಿಗದೇ ಮನೆ- ಕಟ್ಟಡ ನಿರ್ಮಾಣಕ್ಕೆ ತೀವ್ರ ತೊಂದರೆಯಾಗುತ್ತಿದೆ. ಈ ಸಮಸ್ಯೆಯನ್ನು 15 ದಿನಗಳಲ್ಲಿ ಬಗೆಹರಿಸಲು ಎಲ್ಲ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಅವರು ಶನಿವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಏಕನಿವೇಶನ ನಕ್ಷೆ ಹಾಗೂ ನಮೂನೆ 9/11ರಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಹಿಂದೆ ಗ್ರಾಮ ಪಂಚಾಯಿತಿಯಲ್ಲಿ ವಿತರಿಸುತ್ತಿದ್ದ 9/11 ದಾಖಲೆಯನ್ನು ಪ್ರಾಧಿಕಾರಕ್ಕೆ ಪ್ರತ್ಯಾಯೋಜಿಸಿದ ನಂತರ ಕಾರಣವಿಲ್ಲದೆ ವಿಳಂಬವಾಗುತ್ತಿದೆ. ಇದರಿಂದ ಅರ್ಜಿದಾರರು ಬೇಸತ್ತು ಹೋಗಿದ್ದಾರೆ. ರಸ್ತೆ ಅಂಚಿನ 6 ಮೀಟರ್ ಬಿಟ್ಟು ಏಕ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡುವಂತೆ ಸರ್ಕಾರದ ಸುತ್ತೋಲೆ ಇದ್ದರೂ ಸಹ ಪ್ರಾಧಿಕಾರದ ನಿರ್ಲಕ್ಷ್ಯತನದಿಂದಾಗಿ ಸಾವಿರಾರು ಕಡತಗಳು ವಿಲೇವಾರಿಯಾಗದೇ ಬಾಕಿಯಾಗಿವೆ. ಪ್ರಾಧಿಕಾರದ ಅಧಿಕಾರಿಗಳು 15 ದಿನಗಳ ಒಳಗೆ ಎಲ್ಲ ಕಡತಗಳನ್ನು ವಿಲೇವಾರಿ ಮಾಡಬೇಕು ಎಂದರು.ಸುತ್ತೋಲೆಯಲ್ಲಿ ಇರುವಂತೆ ನಗರ ಸ್ಥಳೀಯಾಡಳಿತ ಸಂಸ್ಥೆಗಳು ಇರುವ ರಸ್ತೆಗಳು ಅಗಲೀಕರಣಗೊಳ್ಳಲು ಸಾಧ್ಯವಿಲ್ಲವೆಂದು ಪ್ರಸ್ತಾಪನೆ ಕಳುಹಿಸಿದರೆ ಕೇವಲ 3.5 ಮೀಟರ್‌ಗೆ ಅನುಮತಿ ನೀಡುವ ಸರ್ಕಾರದ ಆದೇಶವನ್ನು ಪಾಲಿಸಬೇಕು. ಪ್ರಾಧಿಕಾರದಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಕ್ಷಣ ನಿಲ್ಲಿಸಿ ಜನಸಾಮಾನ್ಯರಿಗೆ ಆಗುವ ತೊಂದರೆಗಳನ್ನು ನಿವಾರಿಸಬೇಕು ಎಂದು ಸಂಸದರು ಸೂಚಿಸಿದರು.ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಜಿಲ್ಲೆಯಲ್ಲಿ ಏಕ ವಿನ್ಯಾಸ ನಕ್ಷೆ ಅನುಮೋದನೆಗೆ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 11,000 ಹೆಚ್ಚು ಅರ್ಜಿಗಳು ಅನುಮೋದನೆಗಾಗಿ ಕಾಯುತ್ತಿದ್ದು, ಇವುಗಳ ತುರ್ತು ವಿಲೇವಾರಿಗೆ ಕೂಡಲೇ ಕ್ರಮ ವಹಿಸುವಂತೆ ತಿಳಿಸಿದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ದೂರದೂರುಗಳಾದ ಕುಂದಾಪುರ ಹಾಗೂ ಬೈಂದೂರಿನಿಂದ ಅರ್ಜಿದಾರರು ನಿತ್ಯ ಪ್ರಾಧಿಕಾರಕ್ಕೆ ಬರುವ ದುಸ್ಥಿತಿ ಬಂದಿದೆ. ಜನಸಾಮಾನ್ಯರ ಸಮಸ್ಯೆಯನ್ನು ಅರಿತು ಅಧಿಕಾರಿಗಳು ತುರ್ತಾಗಿ ಸ್ಪಂದಿಸುವ ಕೆಲಸವಾಗಬೇಕು ಎಂದರು.ಸುದೀರ್ಘ ಚರ್ಚೆಯ ನಂತರ ರಸ್ತೆಯ ಅಂಚಿನ 6 ಮೀ. ನಿಗದಿಗೊಳಿಸಿ, ಲೋಕೋಪಯೋಗಿ ಇಲಾಖೆ ಅನುಮತಿ ಪಡೆದು ಕಡತಗಳನ್ನು 15 ದಿನಗಳೊಳಗಾಗಿ ವಿಲೇವಾರಿ ಮಾಡುವುದಾಗಿ ಪ್ರಾಧಿಕಾರದ ಸಹಾಯಕ ನಿರ್ದೇಶಕಿ ತಿಳಿಸಿದರು.ಸಭೆಯಲ್ಲಿ ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ನಗರಸಭೆ ಆಯುಕ್ತ ಮಹೇಶ್, ಕುಂದಾಪುರ ಹಾಗೂ ಕಾಪು ನಗರ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನವೀನ್, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಕಿರಣ್, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಜ್ಞಾನಮೂರ್ತಿ ಹಾಗೂ ಇತರೆ ಅಧಿಕಾರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))