ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅತಿ ಉದ್ದದ, ಭಾರೀ ಗಾತ್ರದ ಕಾಳಿಂಗ ಸರ್ಪವೊಂದನ್ನು ಆಗುಂಬೆಯ ದಟ್ಟಾರಣ್ಯದಲ್ಲಿ ಕಾಳಿಂಗ ಸರ್ಪದ ಕುರಿತು ಕಳೆದ 20 ವರ್ಷಗಳಿಂದ ಸಂಶೋಧನೆ ನಡೆಸುತ್ತಿರುವ ಡಾ. ಗೌರಿಶಂಕರ್ ಹೆಬ್ರಿಯ ಮನೆಯೊಂದರ ಬಳಿ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.ಹೆಬ್ರಿಯ ಸೀತಾನದಿ ತೀರದಲ್ಲಿನ ಭಾಸ್ಕರ್ ಶೆಟ್ಟಿ ಎಂಬುವವರ ಮನೆಯ ಸಮೀಪ ಕಾಳಿಂಗ ಸರ್ಪ ಕಾಣಿಸಿದ ವಿಷಯ ತಿಳಿದ ಡಾ.ಗೌರಿಶಂಕರ್ ಮಾ. 31 ರಂದು ತಮ್ಮ ಸಹಾಯಕರೊಂದಿಗೆ ಸ್ಥಳಕ್ಕೆ ತೆರಳಿದ್ದರು. ಗುಂಡಿಯಲ್ಲಿ ಅಳವಡಿಸಲಾದ ಪೈಪ್ ಒಂದರಲ್ಲಿ ಅಡಗಿದ್ದ ಈ ಹಾವನ್ನು ಹೊರಗೆ ಎಳೆದು ತೆಗೆದಾಗ ಆಶ್ಚರ್ಯ ಚಕಿತರಾದರು, ಕಾರಣ ಅವರ ಜೀವನದಲ್ಲಿ ಹಿಡಿದ ಅತಿ ಉದ್ದದ ಮತ್ತು ಅತಿ ತೂಕದ ಕಾಳಿಂಗ ಸರ್ಪ ಇದಾಗಿತ್ತು. ಸುಮಾರು 15 ಅಡಿ ಉದ್ದದ, 12.5 ಕೆ. ಜಿ. ತೂಕದ ಹಾವು ಇದಾಗಿದೆ. ಸಾಮಾನ್ಯವಾಗಿ 10 ಅಡಿ ಉದ್ದದ ಕಾಳಿಂಗ ಸರ್ಪ ಕಾಣ ಸಿಗುತ್ತದೆ. ಸರಿಸುಮಾರು ಇಷ್ಟೇ ತೂಕದ್ದೂ ಆಗಿರುತ್ತದೆ. ಇದುವರೆಗೆ ಥೈಲ್ಯಾಂಡ್ ನಲ್ಲಿ ಕಾಣಿಸಿದ 18 ಅಡಿ ಉದ್ದದ ಕಾಳಿಂಗ ಸರ್ಪವೇ ಇದುವರೆಗಿನ ಅತಿ ಉದ್ದದ ಕಾಳಿಂಗ ಸರ್ಪ ಎನ್ನಲಾಗಿದೆ. ತಮ್ಮ ಜೀವನದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಉದ್ದದ ಮತ್ತು ತೂಕದ ಹಾವನ್ನು ನೋಡಿದ್ದೇನೆ ಎನ್ನುತ್ತಾರೆ ಸಂಶೋಧಕ ಡಾ.ಗೌರಿಶಂಕರ್.ಸಾಮಾನ್ಯವಾಗಿ ಫೆಬ್ರವರಿಯಿಂದ ಮೇ ವರೆಗೆ ಇವುಗಳ ಸಂತಾನೋತ್ಪತ್ತಿಯ ಸಮಯ. ಈ ಅವಧಿಯಲ್ಲಿ ಗಂಡು ಹಾವುಗಳು ಹೆಣ್ಣು ಹಾವನ್ನು ಹುಡುಕಿಕೊಂಡು ಅಲೆಯುತ್ತವೆ ಎಂದು ಮಾಹಿತಿ ನೀಡಿದ್ದಾರೆ.