ಸಾರಾಂಶ
ಹುಲಿಗೆಮ್ಮ ದೇವಸ್ಥಾನಕ್ಕೆ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ವಾರದ (ಮಂಗಳವಾರ, ಶುಕ್ರವಾರ) ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಇರುತ್ತಾರೆ. ಈ ಎರಡು ದಿನಗಳಲ್ಲಿ ಸಾಮಾನ್ಯವಾಗಿ 1ರಿಂದ 1.5 ಲಕ್ಷ ಭಕ್ತರು ಬಂದು ಹೋಗುತ್ತಾರೆ.
ಸೋಮರಡ್ಡಿ ಅಳವಂಡಿ
ಕೊಪ್ಪಳ:ಹುಲಿಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ಪ್ರಸಕ್ತ ವರ್ಷ ಜಾತ್ರೆ ಮತ್ತು ಜಾತ್ರೆಯ ನಂತರ 16 ದಿನಗಳಲ್ಲಿ ಬರೋಬ್ಬರಿ 15,58,609 ಭಕ್ತರು ಆಗಮಿಸಿ, ದರ್ಶನ ಪಡೆದಿದ್ದಾರೆ. ಕಳೆದ 27 ದಿನಗಳಲ್ಲಿ 25 ಲಕ್ಷ ಭಕ್ತರು ದರ್ಶನ ಪಡೆದಿದ್ದಾರೆ. ಅಂದರೆ, ನಿತ್ಯವೂ ಸರಾಸರಿ 1 ಲಕ್ಷ ಭಕ್ತರು ಆಗಮಿಸುತ್ತಿದ್ದಾರೆ.
ಹುಲಿಗೆಮ್ಮ ದೇವಸ್ಥಾನಕ್ಕೆ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ವಾರದ (ಮಂಗಳವಾರ, ಶುಕ್ರವಾರ) ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಇರುತ್ತಾರೆ. ಈ ಎರಡು ದಿನಗಳಲ್ಲಿ ಸಾಮಾನ್ಯವಾಗಿ 1ರಿಂದ 1.5 ಲಕ್ಷ ಭಕ್ತರು ಬಂದು ಹೋಗುತ್ತಾರೆ. ಉತ್ತರ ಕರ್ನಾಟಕದಲ್ಲಿಯೇ ಇಷ್ಟೊಂದು ಭಕ್ತರು ಆಗಮಿಸುವ ವಿಶೇಷ ದೇವಸ್ಥಾನ ಎನ್ನುವ ಖ್ಯಾತಿ ಹುಲಿಗೆಮ್ಮ ದೇವಸ್ಥಾನದ್ದಾಗಿದೆ.ಹುಲಿಗೆಮ್ಮ ದೇವಸ್ಥಾನದಲ್ಲಿ ರಥೋತ್ಸವ ನಡೆದ ಮೇ 21ರಂದು 3ರಿಂದ 4 ಲಕ್ಷ ಭಕ್ತರು ಆಗಮಿಸಿದ್ದರು ಎಂದು ಅಂದಾಜು ಮಾಡಲಾಗಿದೆ. ಆದರೆ, ರಥೋತ್ಸವದ ಮರುದಿನದಿಂದ ತಲೆ ಎಣಿಸುವ ಯಂತ್ರ ಅಳವಡಿಸಲಾಗಿದ್ದು, ಅಲ್ಲಿಂದ ಪಕ್ಕಾ ಲೆಕ್ಕ ಸಿಗುತ್ತದೆ.
ಏನಿದು ಯಂತ್ರ?ತಲೆ ಎಣಿಸುವ ವಿಶೇಷ ಯಂತ್ರವನ್ನು ತಿರುಪತಿಯಲ್ಲಿ ಅಳವಡಿಸಲಾಗಿದೆ. ಈಗ ಶ್ರೀ ಹುಲಿಗೆಮ್ಮ ದೇವಸ್ಥಾನದಲ್ಲಿಯೂ ಅಳವಡಿಸಲಾಗಿದ್ದು, ಪ್ರತಿನಿತ್ಯವೂ ಭಕ್ತರ ಎಣಿಕೆಯಾಗುತ್ತದೆ ಮತ್ತು ದಾಖಲಾಗುತ್ತಿದೆ. ಈಗ ಯಂತ್ರದಲ್ಲಿ ಆಗಿರುವ ಲೆಕ್ಕಾಚಾರದ ಆಧಾರದ ಮೇಲೆ 27 ದಿನಗಳಲ್ಲಿ 25 ಲಕ್ಷ ಭಕ್ತರು ಬಂದಿದ್ದಾರೆ ಎಂದು ಹೇಳಲಾಗಿದೆ.
ಹೀಗೆ ಲಕ್ಷ ಲಕ್ಷ ಭಕ್ತರು ಆಗಮಿಸುವ ಹುಲಿಗೆಮ್ಮ ದೇವಸ್ಥಾನಕ್ಕೆ ನಿರೀಕ್ಷೆಯಷ್ಟು ಸಾರಿಗೆ ಸಂಪರ್ಕವಿಲ್ಲ. ಹೀಗಾಗಿ, ಭಕ್ತರ ಪಾಡು ಹೇಳತೀರದಾಗಿದೆ. ದೇವಸ್ಥಾನದಿಂದ ರಾಷ್ಟ್ರೀಯ ಹೆದ್ದಾರಿಗೆ ಬಂದು, ಡಿವೈಡರ್ ಮೇಲೆ ಮಹಿಳೆಯರು, ಮಕ್ಕಳು ಕುಳಿತು ಹೋಗುವ ಬಸ್ಸಿಗಾಗಿ ಕಾಯುತ್ತಿರುತ್ತಾರೆ. ಹಲವು ಬಸ್‌ಗಳಿಗೆ ಇಲ್ಲಿ ನಿಲುಗಡೆಯಿಲ್ಲ. ಭಕ್ತರು ರಾತ್ರಿಯೂ ಕಾಯಬೇಕಾದ ಅನಿವಾರ್ಯತೆ ಇದೆ. ಇನ್ನಷ್ಟು ಸಾರಿಗೆ ಸೌಲಭ್ಯವಾಗಬೇಕು ಮತ್ತು ಹೆದ್ದಾರಿಯಲ್ಲಿ ತೆರಳುವ ಬಸ್‌ಗಳಿಗೂ ಪ್ರತ್ಯೇಕ ಬಸ್ ನಿಲ್ದಾಣವಾಗಬೇಕು ಎನ್ನುವುದು ಭಕ್ತರ ಆಗ್ರಹವಾಗಿದೆ.ದೇವಸ್ಥಾನದಲ್ಲಿ ತಲೆ ಎಣಿಕೆ ಯಂತ್ರವನ್ನು ಅಳವಡಿಸಲಾಗಿದ್ದು, ಈಗ ಎಷ್ಟು ಭಕ್ತರು ಆಗಮಿಸುತ್ತಾರೆ ಎನ್ನುವ ಪಕ್ಕಾ ಲೆಕ್ಕ ಸಿಗುತ್ತಿದೆ ಎಂದು ಹುಲಿಗೆಮ್ಮ ದೇವಸ್ಥಾನದ ಆಡಳಿತಾಧಿಕಾರಿ ಪ್ರಕಾಶ ಎಂ.ಎಚ್. ತಿಳಿಸಿದರು.