ಎಸ್‌ಬಿಐ ಸಿಎಸ್‌ಪಿ ಸಿಬ್ಬಂದಿಯಿಂದ ₹ 15 ಲಕ್ಷ ವಂಚನೆ?

| Published : Dec 14 2024, 12:46 AM IST

ಸಾರಾಂಶ

ಮೋಸಕ್ಕೆ ಒಳಗಾದ 50ಕ್ಕೂ ಹೆಚ್ಚಿನ ಗ್ರಾಹಕರಿಂದ ಅಂದಾಜು ₹ 14.50 ಲಕ್ಷ ವಂಚನೆಯಾಗಿದೆ ಎಂದು ಸಂತ್ರಸ್ತರು ಅರ್ಜಿ ಮೂಲಕ ಬ್ಯಾಂಕ್ ಗೆ ದೂರು ಸಲ್ಲಿಸಿದ್ದಾರೆ.

ಕಲಘಟಗಿ:

ಪಟ್ಟಣದ ಎಸ್‌ಬಿಐ ಗ್ರಾಹಕರ ಸೇವಾ (ಸಿಎಸ್‌ಪಿ) ಕೇಂದ್ರದ ಸಿಬ್ಬಂದಿ ಶಿವಲಿಂಗ ಜಂಗಿನ ಆಧಾರ್‌ ಕಾರ್ಡ್ ಮೂಲಕ ಹೆಬ್ಬೆರಳು ಪಡೆದು ಅಂದಾಜು ₹ 15 ಲಕ್ಷ ಡ್ರಾ ಮಾಡಿ ಮೋಸ ಮಾಡಿದ್ದಾನೆಂದು ಆರೋಪಿಸಿರುವ ಗ್ರಾಹಕರು ಬ್ಯಾಂಕ್‌ ವ್ಯವಸ್ಥಾಪಕ ಪ್ರಶಾಂತ ಹಳ್ಳೂರ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಹಕ ಸೇವಾ ಕೇಂದ್ರಕ್ಕೆ ನಿತ್ಯ ಮಹಿಳಾ ಸಂಘ, ಇಎಂಐ, ವಿಧವಾ ವೇತನ, ವಯೋ ಪಿಂಚಣಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಹಣ ವರ್ಗಾವಣೆ, ಮರುಪಾವತಿ ಹೀಗೆ ಹತ್ತು ಹಲವು ಮೂಲಗಳಿಂದ ಬಂದ ಹಣವನ್ನು ಎಸ್‌ಬಿಐನಲ್ಲಿ ಉಳಿತಾಯ ಖಾತೆಗೆ ಜಮೆಯಾಗುತ್ತಿತ್ತು. ಗ್ರಾಹಕರು ತಮ್ಮ ಖಾತೆಯಲ್ಲಿನ ಹಣ ಜಮಾ ಹಾಗೂ ಪಾವತಿಸಲು ಬಂದಾಗ ಬ್ಯಾಂಕ್‌ನವರು ಗ್ರಾಹಕ ಸೇವಾ ಕೇಂದ್ರಕ್ಕೆ ಕಳಿಸಿ ಕೊಡುತ್ತಿದ್ದರು. ಆದರೆ, ಕೇಂದ್ರದ ಪ್ರತಿನಿಧಿ ಹಲವು ತಿಂಗಳಿಂದ ಜನರ ಹೆಬ್ಬೆರಳು ಒತ್ತಿಸಿಕೊಂಡು ಅವರ ಖಾತೆಯಿಂದ ಮನಸಿಗೆ ತೋಚಿದಷ್ಟು ಹಣ ತೆಗೆದುಕೊಂಡು ಗ್ರಾಹಕರಿಗೆ ವಂಚಿಸಿದ ದೂರುಗಳು ಕೇಳಿ ಬಂದಿವೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಪತ್ತೆಗಾಗಿ ಪೊಲೀಸರು ತನಿಖೆಕೈಗೊಂಡಿದ್ದಾರೆ.

ಬ್ಯಾಂಕಿಗೆ ದೂರು:

ಮೋಸಕ್ಕೆ ಒಳಗಾದ 50ಕ್ಕೂ ಹೆಚ್ಚಿನ ಗ್ರಾಹಕರಿಂದ ಅಂದಾಜು ₹ 14.50 ಲಕ್ಷ ವಂಚನೆಯಾಗಿದೆ ಎಂದು ಸಂತ್ರಸ್ತರು ಅರ್ಜಿ ಮೂಲಕ ಬ್ಯಾಂಕ್ ಗೆ ದೂರು ಸಲ್ಲಿಸಿದ್ದಾರೆ. 8 ದಿನಗಳಲ್ಲಿ ನಮ್ಮ ಹಣ ಮರಳಿ ಖಾತೆಗೆ ಜಮೆ ಮಾಡದಿದ್ದರೆ ಬ್ಯಾಂಕ್‌ ಎದುರು ಉಗ್ರ ಹೋರಾಟ ಮಾಡಲಾಗುವುದು ಎಂದು ಗ್ರಾಹಕರು ಎಚ್ಚರಿಸಿದ್ದಾರೆ.

ನನ್ನ ಮಗಳ ಖಾತೆಯಿಂದ ₹ 73 ಸಾವಿರ ತೆಗೆದಿದ್ದಾರೆ. ಈ ಕುರಿತು ಬ್ಯಾಂಕಿನವರನ್ನು ಕೇಳಿದರೆ ನಾಳೆ, ನಾಡಿದ್ದು ಬಾ ಎಂದು ಹೇಳುತ್ತಿದ್ದಾರೆ ಎಂದು ತಬಕದಹೊನ್ನಿಹಳ್ಳಿಯ ಸಹದೇವಪ್ಪ ಹರಿಜನ ಪತ್ರಿಕೆ ಎದುರು ಅಳಲು ತೋಡಿಕೊಂಡರು. ನಮ್ಮ ಸಂಘದ ವತಿಯಿಂದ ಸೆಪ್ಟಂಬರ್‌ನಲ್ಲಿ ₹ 27,975 ಜಮೆ ಮಾಡಲಾಗಿತ್ತು. ಆದರೆ, ಪಾವತಿ ನೀಡಿಲ್ಲ, ನಮ್ಮ ಖಾತೆಗೂ ಹಣ ಜಮೆಯಾಗದೆ ಸಂಘದ ವ್ಯವಹಾರಕ್ಕೆ ತೊಂದರೆಯಾಗಿದೆ ಎಂದು ಪಟ್ಟಣದ ಸಾಯಿ ಮಹಿಳಾ ಸಂಘದ ಸದಸ್ಯರು ಸಂಕಷ್ಟ ಹೇಳಿಕೊಂಡರು.

ಮನವಿ ಸಲ್ಲಿಸುವ ವೇಳೆ ವಿ.ಎನ್. ಮುರಕುಂಬಿ, ಫಕೀರೇಶ ವಾಲಿಕಾರ, ಬಸವರಾಜ ಹಟಗಾರ, ರತ್ನವ್ವ ಶಿವಳ್ಳಿ, ಎಂ.ಬಿ. ಅಂಗಡಿ, ಆರ್.ವಿ. ಪತಂಗಿ, ಕೆ.ಎ. ಮುತ್ತಗಿ, ಚನ್ನಬಸಪ್ಪ ದೊಡ್ಡಮನಿ, ಸಹದೇವಪ್ಪ ಹರಿಜನ, ಆಣಂದ ಗೌಳಿ, ರಾಜು ಲಮಾಣಿ, ಶಿವವು ಕೆ, ಇಸ್ಮಾಯಿಲ್, ರವಿ, ಸೇರಿದಂತೆ ವಿವಿಧ ಗ್ರಾಮದ ಗ್ರಾಹಕರು ಇದ್ದರು.ಹಣ ಕಳೆದುಕೊಂಡ ಗ್ರಾಹಕರು ದೂರು ಸಲ್ಲಿಸಿದ್ದಾರೆ. ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು 90 ದಿನದೊಳಗೆ ಸಮಸ್ಯೆ ಬಗೆಹರಿಸಲಾಗುವುದು ಎಂದು ಎಸ್‌ಬಿಐ ಬ್ಯಾಂಕ್‌ ವ್ಯವಸ್ಥಾಪಕ ಪ್ರಶಾಂತ್ ಹಳ್ಳೂರ ಹೇಳಿದರು.