ಸಾರಾಂಶ
ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ಹೂವಿನಹಡಗಲಿ ಹಾಗೂ ಹರಪನಹಳ್ಳಿ ತಾಲೂಕಿನ ವ್ಯಾಪ್ತಿಯ ತುಂಗಭದ್ರಾ ನದಿಯಲ್ಲಿ ಮರಳು ಎತ್ತುವುದಕ್ಕೆ ಟೆಂಡರ್ ನೀಡಿಕೆಯಲ್ಲಿ ವಿಳಂಬದಿಂದ ಮರಳು ಲೂಟಿಗೆ ಸರ್ಕಾರವೇ ದಾರಿ ಮಾಡಿಕೊಟ್ಟಂತಾಗಿದೆ.ಕರ್ನಾಟಕ ಸ್ಟೇಟ್ ಮಿನಿರಲ್ ಕಾರ್ಪೋರೇಷನ್ ಲಿ.ಗೆ 8 ಬ್ಲಾಕ್‌ಗಳನ್ನು ನೀಡಲಾಗಿದೆ. ಉಳಿದಂತೆ ಇತರೆ 7 ಬ್ಲಾಕ್‌ಗಳು ಸೇರಿ ಒಟ್ಟು 15 ಮರಳಿನ ಬ್ಲಾಕ್‌ಗಳನ್ನು ಗುರುತಿಸಲಾಗಿದ್ದು, ಎಲ್ಲಿಯೂ ಮರಳಿನ ಟೆಂಡರ್ ನಡೆಯುತ್ತಿಲ್ಲ.
ಸರಿಯಾಗಿ ಮಳೆ ಇಲ್ಲದೇ ತುಂಗಭದ್ರಾ ನದಿಯಲ್ಲಿ ಈಗ ದಿನದಿಂದ ದಿನಕ್ಕೆ ನೀರು ಕಡಿಮೆಯಾಗುತ್ತಿದೆ. ಎಲ್ಲ ಕಡೆಗೂ ಮರಳು ತೆರೆದುಕೊಳ್ಳುತ್ತಿದೆ. ಹೀಗಾಗಿ ಈ ಮರಳನ್ನು ಯಾರು ಎಷ್ಟು ಬೇಕಾದರೂ ಲೂಟಿಗೆ ಅವಕಾಶ ನೀಡಿದಂತಾಗಿದೆ. ಕೆಎಸ್ಎಂಸಿಎಲ್‌ಗೆ ನೀಡಿರುವ 8 ಮರಳಿನ ಬ್ಲಾಕ್‌ಗಳಲ್ಲಿ 9 ಲಕ್ಷ ಟನ್ ಮರಳು ಲಭ್ಯವಿದೆ. ಆದರೆ ಮರಳು ಅಕ್ರಮ ದಂಧೆಕೋರರು ನದಿಯನ್ನೇ ಬಗೆದು ಮರಳು ಲೂಟಿಗೆ ನಿಂತಿದ್ದಾರೆ.ಹೂವಿನಹಡಗಲಿ ತಾಲೂಕಿನ ನವಲಿ, ಹೊನ್ನೂರು, ಹರವಿ ಹಾಗೂ ಹರಪನಹಳ್ಳಿ ತಾಲೂಕಿನ ತಾವರಗುಂದಿ ಸೇರಿದಂತೆ ಒಟ್ಟು 8 ಮರಳಿನ ಬ್ಲಾಕ್‌ಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಸರ್ವೇ ಮಾಡಿ, ನಿರಪೇಕ್ಷಣಾ ಪತ್ರ ನೀಡುವ ಜತೆಗೆ ಅನುಮೋದನೆ ನೀಡಿ ಕರ್ನಾಟಕ ಸ್ಟೇಟ್ ಮಿನಿರಲ್ ಕಾರ್ಪೋರೇಷನ್ ಲಿ. (ಕೆಎಸ್‌ಎಂಸಿಎಲ್)ಗೆ ನೀಡಿ ಎರಡು ವರ್ಷ ಕಳೆದಿವೆ. ಈವರೆಗೂ ಬೆಂಗಳೂರಿನಿಂದ ಪರಿಸರ ವಿಮೋಚನಾ ಪತ್ರ ಪಡೆದು ಮರಳು ಟೆಂಡರ್ ಮಾಡಿ ಜನರಿಗೆ ಮರಳು ವಿತರಿಸುತ್ತಿಲ್ಲ.
ಉಳಿದಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಹೂವಿನಹಡಗಲಿ ತಾಲೂಕಿನ ಹರವಿ, ಕೊಂಬಳಿ, ನವಲಿಯ 5 ಬ್ಲಾಕ್ ಹಾಗೂ ಹರಪನಹಳ್ಳಿ ತಾಲೂಕಿನ ನಿಟ್ಟೂರು ಮತ್ತು ಕಡತಿಯಲ್ಲಿ 2 ಬ್ಲಾಕ್‌ಗಳ ಟೆಂಡರ್ ಕರೆದಿಲ್ಲ. ಇದರಿಂದ ಜನರಿಗೆ ಮರಳು ಸಿಗುತ್ತಿಲ್ಲ.ಬಹುತೇಕ ಮರಳಿನ ಬ್ಲಾಕ್‌ಗಳು ಟೆಂಡರ್ ಅವಧಿ ಮುಗಿದ 4- 5 ತಿಂಗಳು ಕಳೆಯುತ್ತಾ ಬಂದರೂ ಟೆಂಡರ್ ಕರೆದಿಲ್ಲ. ಸಾರ್ವಜನಿಕರು ಮತ್ತು ಸರ್ಕಾರಿ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರು ಮರಳಿಗಾಗಿ ಪರದಾಡುತ್ತಿದ್ದಾರೆ.
ಹಳ್ಳಿಗಳಲ್ಲಿ ಸಣ್ಣಪುಟ್ಟ ಮನೆ ಹಾಗೂ ದನದ ಕೊಟ್ಟಿಗೆ, ಶೌಚಾಲಯ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ಮರಳು ಬೇಡಿಕೆ ಹೆಚ್ಚಾಗಿದೆ. ಬೇಡಿಕೆಗೆ ತಕ್ಕಂತೆ ಮರಳು ಮಾತ್ರ ಎಲ್ಲಿಯೂ ಸಿಗುತ್ತಿಲ್ಲ. ಸದ್ಯ ಗದಗ, ಹಾವೇರಿ ಜಿಲ್ಲೆಯಿಂದ ದುಬಾರಿ ಬೆಲೆಗೆ ಮರಳು ಖರೀದಿ ಮಾಡುವ ಪರಿಸ್ಥಿತಿ ಇದೆ.ತಾಲೂಕಿನ ಹರವಿ, ಮೈಲಾರ, ಕುರುವತ್ತಿ, ಹೊನ್ನೂರು, ನವಲಿ, ಮದಲಗಟ್ಟಿ, ಸೋವೇನಹಳ್ಳಿ, ಹಕ್ಕಂಡಿಯಲ್ಲಿ ನಿತ್ಯ ರಾತ್ರಿ ವೇಳೆ ಟ್ರ್ಯಾಕ್ಟರ್ ಹಾಗೂ ಲಾರಿಗಳಲ್ಲಿ ಮರಳು ಲೂಟಿಯಾಗುತ್ತಿದೆ. ಇನ್ನು ಕೆಲವೆಡೆ ಹಗಲು ಹೊತ್ತು ಚಕ್ಕಡಿಯಲ್ಲಿ ಮರಳು ತಂದು ಕಣಗಳಲ್ಲಿ ಸಂಗ್ರಹಿಸಿ, ರಾತ್ರಿ ವೇಳೆ ಲಾರಿಯಲ್ಲಿ ಮರಳು ಮಾರಾಟ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ.
ಮರಳಿನ ಬ್ಲಾಕ್‌ಗಳ ಟೆಂಡರ್ ವಿಳಂಬ ನೀತಿಯನ್ನೇ ಬಂಡವಾಳ ಮಾಡಿಕೊಂಡಿರುವ, ಮರಳು ಅಕ್ರಮ ದಂಧೆಕೋರರು ನದಿಯಲ್ಲಿ ನೀರು ಇರುವ ಕಡೆ ಕಬ್ಬಿಣದ ತೆಪ್ಪಗಳನ್ನು ಬಳಸಿ ಮರಳು ಎತ್ತುತ್ತಿದ್ದಾರೆ. ಈ ಭಾಗದಲ್ಲಿ ಅನೇಕ ಬಾರಿ ಅಧಿಕಾರಿಗಳು ದಾಳಿ ಮಾಡಿ ಪ್ರಕರಣ ದಾಖಲಿಸಿದ್ದಾರೆ. ಆದರೆ ಆರೋಪಿಗಳು ಮಾತ್ರ ನದಿಯಲ್ಲಿ ಈಜಿಕೊಂಡು ಪರಾರಿಯಾಗುತ್ತಿದ್ದಾರೆ. ವಿಜಯನಗರ, ಗದಗ ಮತ್ತು ಹಾವೇರಿ ಮೂರು ಜಿಲ್ಲೆಗಳ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜಂಟಿ ದಾಳಿ ಮಾಡಿದರೆ ತಕ್ಕ ಮಟ್ಟಿಗೆ ಆದರೂ ಮರಳು ಲೂಟಿಯನ್ನು ತಡೆಯಲು ಸಾಧ್ಯವಿದೆ. ಇಲ್ಲದಿದ್ದರೆ ಸರ್ಕಾರದ ಬೊಕ್ಕಸಕ್ಕೆ ಸೇರಬೇಕಿದ್ದ ರಾಜಸ್ವಧನ ಮರಳು ಅಕ್ರಮ ದಂಧೆಕೋರರ ಪಾಲಾಗುತ್ತದೆ. ಟೆಂಡರ್ ಪ್ರಕ್ರಿಯೆ: ಹೂವಿನಹಡಗಲಿ, ಹರಪನಹಳ್ಳಿಯಲ್ಲಿ ಕೆಎಸ್‌ಎಂಸಿಎಲ್‌ಗೆ ನೀಡಿರುವ ಮರಳಿನ ಬ್ಲಾಕ್‌ಗಳನ್ನು ಬಿಟ್ಟು ಉಳಿದ ಮರಳಿನ ಬ್ಲಾಕ್‌ಗಳಲ್ಲಿ ಸಂಗ್ರಹವಾಗಿದ್ದ ಮರಳು ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಈಗಾಗಲೇ ಎಲ್ಲ ಮರಳು ಮಾರಾಟವಾಗಿದೆ. ಇನ್ನು ಮರಳಿನ ಬ್ಲಾಕ್ ಟೆಂಡರ್ ಕರೆಯಲು ಎಲ್ಲ ಸಿದ್ಧತೆ ನಡೆದಿವೆ. ಸರ್ಕಾರ ಸೂಚನೆ ನೀಡಿದ ಕೂಡಲೇ ಮರಳಿನ ಬ್ಲಾಕ್‌ಗಳನ್ನು ಟೆಂಡರ್ ಪ್ರಕ್ರಿಯೆ ಆರಂಭಿಸುತ್ತೇವೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಕೋದಂಡರಾಮಯ್ಯ ತಿಳಿಸಿದರು.ಮರಳು ಸಿಗುತ್ತಿಲ: ನದಿಯಲ್ಲಿ ನೀರು ಇಲ್ಲದ ಸಂದರ್ಭದಲ್ಲಿ ಮರಳಿನ ಟೆಂಡರ್ ಕರೆದರೆ ಸಾಕಷ್ಟು ಮರಳು ಸಂಗ್ರಹವಾಗುತ್ತದೆ. ಯಾವ ಕಡೆಗೂ ಲೂಟಿ ಆಗುವುದಿಲ್ಲ. ಹೀಗೆ ವಿಳಂಬವಾದರೆ ಸರ್ಕಾರದ ಬೊಕ್ಕಸಕ್ಕೂ ನಷ್ಟ, ಜನರಿಗೆ ಮರಳು ಕೂಡಾ ಸಿಗುವುದಿಲ್ಲ ಎಂದರು ನದಿ ತೀರದ ಗ್ರಾಮಸ್ಥರು.