ಕೆಎಂಸಿಆರ್‌ಐನಲ್ಲಿ ಪ್ರತ್ಯೇಕ 15 ಓಪಿಡಿ ನೋಂದಣಿ ಕೌಂಟರ್

| Published : Sep 06 2025, 01:01 AM IST

ಕೆಎಂಸಿಆರ್‌ಐನಲ್ಲಿ ಪ್ರತ್ಯೇಕ 15 ಓಪಿಡಿ ನೋಂದಣಿ ಕೌಂಟರ್
Share this Article
  • FB
  • TW
  • Linkdin
  • Email

ಸಾರಾಂಶ

ಕೆಎಂಸಿಆರ್‌ಐ ಮೂಲಗಳ ಪ್ರಕಾರ ಪ್ರತಿದಿನ ಸುಮಾರು 2,000-2,500 ರೋಗಿಗಳು ಹೊರರೋಗಿ ವಿಭಾಗಕ್ಕೆ ಭೇಟಿ

ಮಹಮ್ಮದ ರಫೀಕ್ ಬೀಳಗಿ ಹುಬ್ಬಳ್ಳಿ

ಕರ್ನಾಟಕ ವೈದ್ಯಕೀಯ ಕಾಲೇಜು - ಸಂಶೋಧನಾ ಸಂಸ್ಥೆ (ಕೆಎಂಸಿಆರ್‌ಐ) ಹೊರರೋಗಿ ನೋಂದಣಿ ಸುಗಮಗೊಳಿಸಲು ಮತ್ತು ಜನದಟ್ಟಣೆ ಕಡಿಮೆ ಮಾಡಲು ಪ್ರತ್ಯೇಕ ಬ್ಲಾಕ್‌ನಲ್ಲಿ 15 ಕೌಂಟರ್‌ ಸ್ಥಾಪಿಸಿದೆ. ಪ್ರತಿದಿನ ಬರುವ ಸುಮಾರು 2,500 ರೋಗಿಗಳಿಗೆ ಆಸನ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಹಿಂದೆ ಹೊರರೋಗಿ ಕಟ್ಟಡದಲ್ಲಿದ್ದ ಕೌಂಟರ್‌ಗಳನ್ನು ಸ್ಥಳಾಂತರಿಸಲಾಗಿದೆ.

ಉತ್ತರ ಕರ್ನಾಟಕದ ಜನ ಕೆಎಂಸಿಆರ್‌ಐ ಅನ್ನು ಜೀವನಾಡಿ ಎಂದು ಪರಿಗಣಿಸಿದ್ದಾರೆ. ವಿವಿಧ ಜಿಲ್ಲೆಯಿಂದ ಬರುವ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಈ ಹಿಂದೆ ಆಸ್ಪತ್ರೆಯಲ್ಲಿ ಕಡಿಮೆ ಕೌಂಟರ್‌ಗಳಿದ್ದವು. ಹೆಚ್ಚಿನ ಸಂಖ್ಯೆಯಲ್ಲಿ ಬರುವ ರೋಗಿಗಳಿಗೆ 8 ಕೌಂಟರ್‌ಗಳು ಸಾಕಾಗುತ್ತಿರಲಿಲ್ಲ. ರೋಗಿಗಳು ದೀರ್ಘ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರು. ಅಲ್ಲಿ ರೋಗಿಗಳಿಗೆ ಸಮರ್ಪಕ ಆಸನ ಸೌಲಭ್ಯಗಳಿರಲಿಲ್ಲ. ಇದರಿಂದಾಗಿ ತೊಂದರೆ ಅನುಭವಿಸುವಂತಾಗುತ್ತಿತ್ತು. ಕಡಿಮೆ ಕೌಂಟರ್‌ಗಳಿಂದ ಹೊರರೋಗಿಗಳ ನೋಂದಣಿ ಪ್ರಕ್ರಿಯೆ ತುಂಬಾ ವಿಳಂಬವಾಗುತ್ತಿತ್ತು. ಇದೀಗ ಹೊರ ರೋಗಿಗಳ ವಿಭಾಗ ಕಟ್ಟಡದ ಪಕ್ಕದ ಸ್ಥಳದಲ್ಲಿ ಶೆಡ್ ನಿರ್ಮಾಣ ಮಾಡಿ 15 ಕೌಂಟರ್‌ಗಳನ್ನು ತೆರೆಯಲಾಗಿದೆ. ಇದರಿಂದ ನೋಂದಣಿ ಪ್ರಕ್ರಿಯೆಯೂ ವೇಗವಾಗಿ ಆಗುತ್ತಿದೆ.

ಕೆಎಂಸಿಆರ್‌ಐ ಮೂಲಗಳ ಪ್ರಕಾರ ಪ್ರತಿದಿನ ಸುಮಾರು 2,000-2,500 ರೋಗಿಗಳು ಹೊರರೋಗಿ ವಿಭಾಗಕ್ಕೆ ಭೇಟಿ ನೀಡುತ್ತಾರೆ. ಅವರಲ್ಲಿ ಹೆಚ್ಚಿನವರು ಅವಳಿ ನಗರಗಳ ಸುತ್ತಮುತ್ತಲಿನ ಹಳ್ಳಿಗಳು ಮತ್ತು ಜಿಲ್ಲೆಗಳಿಂದ ಬಂದವರಿರುತ್ತಾರೆ. ಓಪಿಡಿ ಕಟ್ಟಡದ ನೆಲ ಮಹಡಿಯಲ್ಲಿ ಪ್ರತಿ ಬಾರಿಯೂ ಜನರಿಂದ ಬ್ಲಾಕ್ ಕಿಕ್ಕಿರಿದು ತುಂಬಿರುತ್ತಿತ್ತು. ರೋಗಿಗಳ ನೋಂದಣಿಗಾಗಿ ಸರತಿ ಸಾಲು ಉದ್ದವಾಗಿತ್ತು. ಇದನ್ನು ತಪ್ಪಿಸಲು ಮತ್ತು ರೋಗಿಗಳಿಗೆ ಸೌಲಭ್ಯಗಳನ್ನು ಒದಗಿಸಲು, ಪ್ರತ್ಯೇಕ ಬ್ಲಾಕ್ ಅನ್ನು ಸ್ಥಾಪಿಸಲಾಗಿದೆ. ಓಪಿಡಿ ಎದುರಿಗೆ ಇದ್ದ ಖಾಲಿ ಸ್ಥಳದಲ್ಲಿ ಹೊಸ ಬ್ಲಾಕ್ ಅನ್ನು ಸ್ಥಾಪಿಸುವ ಮೂಲಕ ಅದನ್ನು ಬಳಸಿಕೊಳ್ಳಲಾಗಿದೆ. ಆಗಸ್ಟ್‌ 15ರಂದು ಓಪಿಡಿ ಉದ್ಘಾಟಿಸಲಾಗಿದೆ. ರೋಗಿಗಳ ಅನುನುಕೂಲಕ್ಕಾಗಿ 15 ಕೌಂಟರ್‌ಗಳನ್ನು ತೆರೆಯಲಾಗಿದೆ. ಈಗ ನೋಂದಣಿ ಪ್ರಕ್ರಿಯೆಯು ತ್ವರಿತವಾಗಿ ಪೂರ್ಣಗೊಳ್ಳುತ್ತಿದೆ ಎಂದು ಕೆಎಂಸಿಆರ್‌ಐ ಅಧೀಕ್ಷಕ ಈಶ್ವರ್ ಹಸಬಿ ತಿಳಿಸಿದರು.

ಕೌಂಟರ್‌ಗಳು ಕಡಿಮೆ ಇರುವುದರಿಂದ ರೋಗಿಗಳು ತುಂಬಾ ತೊಂದರೆ ಅನುಭವಿಸುವಂತಾಗುತ್ತಿತ್ತು. ನೋಂದಣಿಗೆ ಒಂದು ತಾಸು ಮತ್ತು ಸಮಾಲೋಚನೆಗಾಗಿ ಸರದಿ ಬರುವ ವರೆಗೆ ಕಾಯುವ ಸ್ಥಿತಿ ಇತ್ತು. ಇದೀಗ ನೋಂದಣಿ ತ್ವರಿತಗತಿಯಲ್ಲಿ ಆಗುತ್ತಿರುವುದರಿಂದ ರೋಗಿಗಳಿಗೆ ಅನುಕೂಲವಾಗಿದೆ ಎಂದು ಚಿಕಿತ್ಸೆಗಾಗಿ ತಂದೆಯನ್ನು ಕರೆತಂದಿದ್ದ ಸವದತ್ತಿಯ ದುರ್ಗಪ್ಪ ಹೇಳುತ್ತಾರೆ.

ಈ ಹಿಂದೆ ಓಪಿಡಿಯಲ್ಲಿ ಬೆಳಗ್ಗೆ ಉದ್ದುದ್ದ ಸಾಲಿನಲ್ಲಿ ಜನ ನಿಂತಿರುತ್ತಿದ್ದರು. ಕುಳಿತುಕೊಳ್ಳಲು ಆಸನ ವ್ಯವಸ್ಥೆಯೂ ಸರಿಯಾಗಿರಲಿಲ್ಲ. ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲುವುದು ರೋಗಿಗಳಿಗೆ ತ್ರಾಸದಾಯಕವಾಗಿತ್ತು. ಈಗ ಕೆಎಂಸಿ-ಆರ್‌ಐ ರೋಗಿಗಳ ಅನುಕೂಲಕ್ಕಾಗಿ ಪ್ರತ್ಯೇಕ ಬ್ಲಾಕ್ ಅನ್ನು ಒದಗಿಸಿದೆ. ಆಸನ ಮತ್ತು ಫ್ಯಾನ್ ಸೌಲಭ್ಯಗಳನ್ನು ಒದಗಿಸಿದ್ದು ಉತ್ತಮ ಕಾರ್ಯ ಮಾಡಿದೆ ಎಂದು ರೋಗಿಗಳು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ಕೌಂಟರ್‌ಗಳನ್ನು ಹೆಚ್ಚಿಸಲಾಗಿದೆ ಮತ್ತು ರೋಗಿಗಳಿಗೆ ಸೌಲಭ್ಯಗಳನ್ನು ಒದಗಿಸಲಾಗಿದೆ. ಈಗ ಒಪಿಡಿಗೆ ಉದ್ದವಾದ ಸರತಿ ಸಾಲು ಕಡಿಮೆಯಾಗಿದೆ ಮತ್ತು ರೋಗಿಗಳು ಸಕಾಲಿಕವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಧಾರವಾಡದಿಂದ ಆಗಮಿಸಿದ್ದ ರೋಗಿ ಭಾರತಿ ತಿಳಿಸಿದ್ದಾರೆ.