ಸಾರಾಂಶ
ಹೊಸಪೇಟೆ: ರಾಜ್ಯದಲ್ಲಿ ವಿಶ್ವವಿದ್ಯಾಲಯಗಳ ಕುಲಪತಿಗಳು ಅನುದಾನಕ್ಕಾಗಿ ವಿಧಾನಸೌಧ ಹಾಗೂ ವಿಕಾಸಸೌಧ ಸುತ್ತುವ ಸ್ಥಿತಿ ಇದೆ. ಶೈಕ್ಷಣಿಕ ಚಟುವಟಿಕೆ ಬಿಟ್ಟು ಬೆನ್ನು ಹತ್ತಿ ಕೆಲಸ ಮಾಡಿಸಬೇಕಿದೆ. ಇದೇ ಸ್ಥಿತಿ ಮುಂದುವರಿದರೆ ಮುಂದಿನ ಐದಾರು ವರ್ಷಗಳಲ್ಲಿ ರಾಜ್ಯದ 15ರಿಂದ 16 ವಿಶ್ವವಿದ್ಯಾಲಯಗಳು ಬಾಗಿಲು ಹಾಕಲಿವೆ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ವಿಷಾದಿಸಿದರು.
ಕನ್ನಡ ವಿವಿ 32ನೇ ನುಡಿಹಬ್ಬದ ನಿಮಿತ್ತ ವಿವಿಯ ಪ್ರಸಾರಾಂಗ ಮಂಟಪ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ 51 ಪುಸ್ತಕ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಂದು ವಿವಿ ಸ್ಥಾಪನೆಗೆ ₹350ರಿಂದ ₹400 ಕೋಟಿ ವೆಚ್ಚ ತಗುಲಲಿದೆ. ಆದರೆ, ರಾಜ್ಯದಲ್ಲಿ ಹೊಸದಾಗಿ ಏಳು ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗಿದೆ. ಒಂದೊಂದು ವಿವಿಗೆ ತಲಾ ₹2 ಕೋಟಿ ಅನುದಾನ ಮಂಜೂರು ಮಾಡಲಾಗಿದೆ.
ಕುಲಪತಿಗಳ ಸಂಬಳ ಕೂಡ ಸರಿಯಾಗಿ ಆಗಿಲ್ಲ. ಕೊಪ್ಪಳ ವಿವಿ ಕುಲಪತಿ ಡಾ. ಬಿ.ಕೆ. ರವಿ ಅವರು ಬಾಡಿಗೆ ಕಾರಿನಲ್ಲೇ ಓಡಾಡುತ್ತಿದ್ದಾರೆ. ಸರ್ಕಾರ ಬಿಡುಗಡೆ ಮಾಡಿರುವ ₹2 ಕೋಟಿ ಕುಲಪತಿಗಳ ಸಂಬಳಕ್ಕೆ ಸಾಲುವುದಿಲ್ಲ ಎಂದರು. ಈ ಏಳು ವಿವಿಗಳಿಗೆ ಕನಿಷ್ಠ ಕಟ್ಟಡ ಇಲ್ಲ. ಉನ್ನತ ಶಿಕ್ಷಣದ ಬಗ್ಗೆ ಗಂಭೀರ ಚರ್ಚೆಯಾಗಬೇಕಿದೆ. ಇಂತಹ ನಿರ್ಲಕ್ಷ್ಯ ಸಲ್ಲದು ಎಂದರು.
ಸರ್ಕಾರದ ರೀತಿ, ನೀತಿಯಿಂದ ಕುಲಪತಿಗಳ ಸ್ಥಿತಿ ಭಿನ್ನವಾಗಿದೆ. ಶೈಕ್ಷಣಿಕ ಚಿಂತನೆಗೆ ಸಮಯವೇ ಇಲ್ಲದಾಗಿದೆ. ಮಿಕ್ಕ ಚಟುವಟಿಕೆಗೆ ಸಮಯ ಮೀಸಲಿಡುವ ಸ್ಥಿತಿ ಬಂದಿದೆ. ಸಂಶೋಧನೆ, ಶೈಕ್ಷಣಿಕ ಚಟುವಟಿಕೆ, ಅಧ್ಯಾಪಕರೊಂದಿಗೆ ಚರ್ಚೆಗೆ ಸಮಯವೇ ಹೊಂದಿಸಲು ಆಗುತ್ತಿಲ್ಲ ಎಂದು ದೂರಿದರು.
ವಿಶ್ವವಿದ್ಯಾಲಯಗಳ ಸ್ಥಿತಿ ಕುರಿತು ಬರೀ ರಾಜಕೀಯ ವ್ಯಕ್ತಿ, ಪಕ್ಷ, ಮಂತ್ರಿಗಳ ಜವಾಬ್ದಾರಿ ಇಲ್ಲ. ಇಡೀ ಸಮಾಜದ ಜವಾಬ್ದಾರಿಯಾಗಿದೆ. ಈ ಬಗ್ಗೆ ಇಡೀ ಸಮಾಜ ಧ್ವನಿ ಎತ್ತಬೇಕಿದೆ ಎಂದರು.
ಹಂಪಿ ಕನ್ನಡ ವಿವಿಗೆ ಈ ಹಿಂದಿನ ಕುಲಪತಿಗಳ ಶ್ರಮದ ಫಲವಾಗಿ ಶೈಕ್ಷಣಿಕ ಚಟುವಟಿಕೆಗೆ ಧಕ್ಕೆಯಾಗಿಲ್ಲ. ಎಂತಹ ಕಷ್ಟ ಎದುರಾದರೂ ಶೈಕ್ಷಣಿಕ ಚಟುವಟಿಕೆ ನಿಂತಿಲ್ಲ. ಈಗ 51 ಪುಸ್ತಕಗಳನ್ನು ಪ್ರಸಾರಾಂಗದಿಂದ ಬಿಡುಗಡೆ ಮಾಡಲಾಗಿದೆ.
ಕನ್ನಡ ವಿವಿಯ ಮೇಲೆ ಭರವಸೆ ಇಟ್ಟು ಮುದ್ರಣಾಲಯದವರು ₹25ರಿಂದ ₹30 ಲಕ್ಷ ಬಾಕಿ ಇದ್ದರೂ ಪುಸ್ತಕಗಳನ್ನು ಮುದ್ರಣ ಮಾಡಿಕೊಟ್ಟಿದ್ದಾರೆ. ಸರ್ಕಾರದಿಂದ ಅನುದಾನ ಬಂದಾಗ ಅವರಿಗೆ ಬಾಕಿ ಹಣ ಪಾವತಿಸಲಾಗುವುದು ಎಂದರು.
ಕೊಪ್ಪಳ ವಿವಿ ಕುಲಪತಿ ಡಾ. ಬಿ.ಕೆ. ರವಿ, ಹಿರಿಯ ಇತಿಹಾಸ ತಜ್ಞ ಪ್ರೊ. ಲಕ್ಷ್ಮಣ್ ತೆಲಗಾವಿ, ವಿವಿ ಪ್ರಸಾರಾಂಗದ ನಿರ್ದೇಶಕಿ ಡಾ. ಶೈಲಜಾ ಹಿರೇಮಠ, ಸರ್ಕಾರಿ ಪದವಿ ಕಾಲೇಜುಗಳ ಅಧ್ಯಾಪಕರಾದ ಡಾ. ಜಾಜಿ ದೇವೇಂದ್ರಪ್ಪ, ಡಾ. ಜೆ. ಕೃಷ್ಣ ಮತ್ತಿತರರಿದ್ದರು.