ಖಾನಾಪುರದ 15 ಗ್ರಾಮಗಳ ಜನರ ಸ್ಥಳಾಂತರಕ್ಕೆ ಸಿದ್ಧ; ಸಚಿವ ಸತೀಶ ಜಾರಕಿಹೊಳಿ

| Published : Jul 27 2024, 12:50 AM IST / Updated: Jul 27 2024, 12:51 AM IST

ಖಾನಾಪುರದ 15 ಗ್ರಾಮಗಳ ಜನರ ಸ್ಥಳಾಂತರಕ್ಕೆ ಸಿದ್ಧ; ಸಚಿವ ಸತೀಶ ಜಾರಕಿಹೊಳಿ
Share this Article
  • FB
  • TW
  • Linkdin
  • Email

ಸಾರಾಂಶ

ಖಾನಾಪುರ ತಾಲೂಕಿನ ಕಾಡಂಚಿನ 15 ಗ್ರಾಮಗಳನ್ನು ಪಟ್ಟಿ ಮಾಡಲಾಗಿದ್ದು, ಶೇ.80ರಷ್ಟು ಜನರು ಒಪ್ಪಿದರೆ ಅವರನ್ನು ಬೇರೆಡೆ ಸ್ಥಳಾಂತರಕ್ಕೆ ಚಿಂತನೆ ನಡೆಸಲಾಗುವುದು ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಖಾನಾಪುರ

ತಾಲೂಕಿನ ಕಾಡಂಚಿನ 15 ಗ್ರಾಮಗಳನ್ನು ಪಟ್ಟಿ ಮಾಡಲಾಗಿದ್ದು, ಅವರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಇಲ್ಲವೇ ಅಲ್ಲಿನ ಜನರನ್ನು ಸ್ಥಳಾಂತರಿಸಬೇಕು. ಶೇ.80ರಷ್ಟು ಜನರು ಒಪ್ಪಿದರೆ ಅವರನ್ನು ಬೇರೆಡೆ ಸ್ಥಳಾಂತರಕ್ಕೆ ಚಿಂತನೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಶುಕ್ರವಾರ ಖಾನಾಪುರ ತಾಲೂಕಿನ ಪ್ರವಾಹ ಪೀಡಿತ, ಮಳೆಯಿಂದ ತೊಂದರೆಗೊಳಗಾದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಖಾನಾಪುರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ರಸ್ತೆ ನಿರ್ಮಿಸಲು ಅರಣ್ಯ ಇಲಾಖೆಯಿಂದ ಅನುಮತಿಯಿಲ್ಲ. ನೂರಾರು ವರ್ಷಗಳಿಂದ ಜನರು ಅಂತಹ ಪ್ರದೇಶದಲ್ಲಿ ವಾಸವಿದ್ದಾರೆ. ಈ ಕುರಿತು ಈಗಾಗಲೇ ಅರಣ್ಯ ಸಚಿವರು ಹಾಗೂ ಸ್ಥಳೀಯ ಶಾಸಕರೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿದೆ. ಅರಣ್ಯ ಸಚಿವರಿಗೆ ಇಲ್ಲಿನ ಸ್ಥಿತಿಗತಿಗಳನ್ನು ವಿವರಿಸಲಾಗುವುದು ಎಂದು ಹೇಳಿದರು.

ಇತ್ತೀಚೆಗೆ ಕಾಡಂಚಿನ ಅಮಗಾಂವ ಗ್ರಾಮದ ಮಹಿಳೆ ಆರೋಗ್ಯ ಸಮಸ್ಯೆಯಿಂದ ಸಾವಿಗೀಡಾದ ಪ್ರಕರಣ ಬಗ್ಗೆ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆಯಲಾಗಿದೆ. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸಲು ವಾಹನ ವ್ಯವಸ್ಥೆ, ಆಂಬ್ಯುಲೆನ್ಸ್ ಹೋಗಲು ಸರಿಯಾದ ರಸ್ತೆ ಇಲ್ಲ, ನೆಟವರ್ಕ್ ಸಮಸ್ಯೆ ಇದೆ ಎಂಬುದು ತಿಳಿದುಬಂದಿದೆ.

ರೇಶನ್ ಪಡೆಯಲು ಕಾಡಂಚಿನ ಗ್ರಾಮಸ್ಥರು ಪರದಾಡುವಂತಾಗಿದೆ ಎಂಬ ಮಾಹಿತಿ ಇದೆ. ಖಾನಾಪುರದ ಹಲವು ಹಳೆಯ ಸೇತುವೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಇನ್ನೂ ಖಾನಾಪುರದಿಂದ ಗೋವಾ ರಾಜ್ಯದ ಗಡಿಯವರೆಗೂ ರಾಷ್ಟ್ರೀಯ ಹೆದ್ದಾರಿ ರಸ್ತೆ ದುರಸ್ಥಿ ಮತ್ತು ಸೇತುವೆಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಮಳೆಗಾಲ ಮುಗಿದ ಬಳಿಕ ಹೊಸ ಸೇತುವೆ ನಿರ್ಮಾಣಕ್ಕೆ ಸೂಚಿಸಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಪ್ರವಾಹ ಅಷ್ಟೊಂದು ಅಪಾಯಕಾರಿ ಮಟ್ಟದಲ್ಲಿಲ್ಲ. ಸದ್ಯದ ಪ್ರವಾಹ ಪರಿಸ್ಥಿತಿ ನಿಯಂತ್ರಣದಲ್ಲಿದೆ. ನಿನ್ನೆ ಚಿಕ್ಕೋಡಿ ಭಾಗದ ವಿವಿಧೆಡೆ ಭೇಟಿ ಪರಿಶೀಲನೆ ನಡೆಸಲಾಗಿದೆ. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು‌.

ಈ ಸಂದರ್ಭದಲ್ಲಿ ಖಾನಾಪುರ ಶಾಸಕರಾದ‌ ವಿಠ್ಠಲ ಹಲಗೇಕರ, ಮಾಜಿ ಶಾಸಕರಾದ ಅಂಜಲಿ ನಿಂಬಾಳ್ಕರ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಪಂ ಸಿಇಒ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಕುಸಮಳ್ಳಿ ಸೇತುವೆ ಪರಿಶೀಲನೆ:

ಇದಕ್ಕೂ ಮುಂಚೆ ಸಚಿವರು ತಾಲೂಕಿನ ಪ್ರವಾಹ ಪೀಡಿತ, ಮಳೆ ಹಾನಿಗೊಳಗಾದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಾಂಬೋಟಿ ರಸ್ತೆಯ ಕುಸುಮಳ್ಳಿ‌ ಸೇತುವೆ ವೀಕ್ಷಿಸಿ, ಬಳಿಕ ಖಾನಾಪುರದಿಂದ ಜಾಂಬೋಟಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯೆ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯ ಸ್ಥಿತಿಗತಿಯನ್ನು ಪರಿಶೀಲಿಸಿದರು. ಬಳಿಕ ಖಾನಾಪುರ ಪ್ರವಾಸಿಮಂದಿರದಲ್ಲಿ ವಿವಿಧ ಗ್ರಾಮಗಳ ಜನರ ಅಹವಾಲು ಆಲಿಸಿದರು.

ಶಾಶ್ವತ ಪರಿಹಾರ ಕಲ್ಪಿಸಿ: ಹಿರೇಹಟ್ಟಿಹೊಳಿ ಗ್ರಾಮಸ್ಥರ ಮನವಿ

ಸಚಿವ ಸತೀಶ ಜಾರಕಿಹೊಳಿ ಅವರುನ್ನು ಭೇಟಿ ಮಾಡಿದ ಮಲಪ್ರಭಾ ನದಿತೀರದ ಹಿರೇಹಟ್ಟಿಹೊಳಿ ಗ್ರಾಮದ ಜನರು, ಸಂಪೂರ್ಣ ಗ್ರಾಮವೇ ಜಲಾವೃತಗೊಳ್ಳುವುದರಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿಕೊಂಡರು. ಪ್ರತಿವರ್ಷ ಮಳೆಗಾಲದಲ್ಲಿ ಹಿರೇಹಟ್ಟಿಹೊಳಿ ಮುಳುಗಡೆಯಾಗುವುದರಿಂದ ವೈದ್ಯಕೀಯ ಸೌಲಭ್ಯ, ಶಿಕ್ಷಣ ಮತ್ತಿತರ ಮೂಲಸೌಕರ್ಯಗಳು ಗ್ರಾಮಸ್ಥರಿಗೆ ಸಿಗುತ್ತಿಲ್ಲ, ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸಚಿವರಿಗೆ ಒತ್ತಾಯಿಸಿದರು.ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಅಧಿಕಾರಿಗಳಿಗೆ ಸೂಚನೆ ನೀಡಿದರು.