ರಾಜ್ಯದ ಆರ್ಥಿಕತೆ 2047ರ ಅವಧಿಗೆ 1 ಟ್ರಿಲಿಯನ್‌ ಡಾಲರ್‌ ತಲುಪುವ ಗುರಿ ಹೊಂದಲಾಗಿದ್ದು, ಅದಕ್ಕೆ ಪೂರಕವಾಗಿ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ವ್ಯಾಪ್ತಿಯ ಅಭಿವೃದ್ಧಿಗೆ ಮುಂದಿನ 15 ವರ್ಷಗಳ ಸಮಗ್ರ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ಆರ್ಥಿಕತೆ 2047ರ ಅವಧಿಗೆ 1 ಟ್ರಿಲಿಯನ್‌ ಡಾಲರ್‌ ತಲುಪುವ ಗುರಿ ಹೊಂದಲಾಗಿದ್ದು, ಅದಕ್ಕೆ ಪೂರಕವಾಗಿ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ವ್ಯಾಪ್ತಿಯ ಅಭಿವೃದ್ಧಿಗೆ ಮುಂದಿನ 15 ವರ್ಷಗಳ ಸಮಗ್ರ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.ಮುಖ್ಯಮಂತ್ರಿ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಬೆಂಗಳೂರು ಮಹಾನಗರ ಪ್ರದೇಶದ ಆರ್ಥಿಕ ಅಭಿವೃದ್ಧಿ ಕುರಿತ ಸಲಹಾ ಸಮಿತಿ ಸಭೆ ನಡೆಸಿ ಮಾತನಾಡಿದ ಡಿ.ಕೆ. ಶಿವಕುಮಾರ್‌, 2047ಕ್ಕೆ ರಾಜ್ಯದ ಆರ್ಥಿಕತೆ 1 ಟ್ರಿಲಿಯನ್‌ ಡಾಲರ್‌ ತಲುಪುವ ಗುರಿ ಹೊಂದಲಾಗಿದೆ. ಅದಕ್ಕೆ ಪೂರಕವಾಗಿ 2037ರ ಅವಧಿಗೆ ರಾಜ್ಯದ ಆರ್ಥಿಕತೆ 400-420 ಬಿಲಿಯನ್‌ ಡಾಲರ್‌ ತಲುಪುವ ಯೋಜನೆ ರೂಪಿಸಲಾಗಿದೆ. ಅದಕ್ಕೆ ಪೂರಕವಾಗಿ ಬೆಂಗಳೂರು ಮಹಾನಗರ ಪ್ರದೇಶ (ಬಿಎಂಆರ್‌) ವ್ಯಾಪ್ತಿಯಲ್ಲಿ ಸುಗಮ ಸಂಚಾರ ವ್ಯವಸ್ಥೆ, ವಸತಿ, ಕೈಗಾರಿಕಾ ಅಭಿವೃದ್ಧಿಗೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಹಾಗೆಯೇ, ಬಿಎಂಆರ್‌ ವ್ಯಾಪ್ತಿಯಲ್ಲಿ 9 ಹೊಸ ಇಂಟಿಗ್ರೇಟೆಡ್‌ ಕೈಗಾರಿಕಾ ಟೌನ್‌ಶಿಪ್‌ ರೂಪಿಸಲಾಗುವುದು ಎಂದು ವಿವರಿಸಿದರು.ಕೈಗಾರಿಕಾ ಟೌನ್‌ಶಿಪ್‌ಗಳಿಗಾಗಿ 7900 ಎಕರೆ ಭೂಮಿಯನ್ನು ಈಗಾಗಲೇ ಸ್ವಾಧೀನಪಡಿಸಲಾಗಿದ್ದು, 5600 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಸರ್ಕಾರ ಈಗಾಗಲೇ ಎಐ ಸಿಟಿ ನಿರ್ಮಾಣದ ಘೋಷಣೆ ಮಾಡಿದ್ದು, ಸಿಂಗಾಪುರದ ಪುಂಗಾಲ್‌ ಮಾದರಿಯಲ್ಲಿ ಎಐ ಸಿಟಿ ನಿರ್ಮಿಸಬೇಕಿದೆ. ಎಐ ವಿಶ್ವವಿದ್ಯಾಲಯ ಸ್ಥಾಪಿಸಲು ಜಾಗದ ಅಗತ್ಯವಿದ್ದು, ಲಭ್ಯ ಸ್ಥಳಗಳನ್ನು ಗುರುತಿಸುವ ಕಾರ್ಯ ನಡೆಸಬೇಕು ಎಂದು ಸೂಚಿಸಿದರು.ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ಅಂಶಗಳು:

ಬೆಂಗಳೂರು ನಗರ ಹಾಗೂ ಬೆಂಗಳೂರು ಹೊರವಲಯದಲ್ಲಿ ಸುಗವ ವಾಹನ ಸಂಚಾರಕ್ಕಾಗಿ ವಿಸ್ತೃತ ಯೋಜನೆ ಸಿದ್ಧಪಡಿಸಲಾಗಿದೆ. 2037ರ ವೇಳೆಗೆ ಹೆಚ್ಚುವರಿ 312 ಕಿಮೀಗೆ ಮೆಟ್ರೋ ಸಂಪರ್ಕ ವಿಸ್ತರಿಸುವುದು, 72 ಕಿಮೀ ಹೆಚ್ಚುವರಿ ಉಪನಗರ ರೈಲು ಸಂಪರ್ಕ, 210 ಕಿಮೀ ಹೆಚ್ಚುವರಿ 10 ಹಬ್‌ಗಳನ್ನು ಸಂಪರ್ಕಿಸುವ ವರ್ತುಲ ರಸ್ತೆ ನಿರ್ಮಾಣ, ಪೆರಿಫೆರಲ್‌ ರಿಂಗ್‌ ರಸ್ತೆಯ 2ನೇ ಹಂತವನ್ನು ನೈಸ್‌ ರಸ್ತೆಯೊಂದಿಗೆ ಸಂಪರ್ಕಿಸುವ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು.ಅದರ ಜತೆಗೆ ಬೆಂಗಳೂರು-ತುಮಕೂರು, ಬೆಂಗಳೂರು-ಮೈಸೂರು, ಬೆಂಗಳೂರು-ಕೆಜಿಎಫ್‌ 3 ರಸ್ತೆ ಕಾರಿಡಾರ್‌ಗಳನ್ನು ಸಂಪರ್ಕಿಸುವ 270 ಆರ್‌ಆರ್‌ಟಿಎಸ್‌ ರಸ್ತೆ ನಿರ್ಮಾಣ, ಪ್ರಸ್ತಾವಿತ ಮುಂಬೈ-ಬೆಂಗಳೂರು ಹೈಸ್ಪೀಡ್‌ ರೈಲನ್ನು ಮೈಸೂರುವರೆಗೆ ವಿಸ್ತರಿಸುವ ಕುರಿತಂತೆ ಸಚಿವರು ಅಭಿಪ್ರಾಯ ತಿಳಿಸಿದರು.

ಬಿಎಂಆರ್‌ ವ್ಯಾಪ್ತಿಯಲ್ಲಿ 2037ರ ವೇಳೆಗೆ 3600 ಎಂಎಲ್‌ಡಿ ನೀರಿನ ಅಗತ್ಯವಿದೆ ಎಂದು ಅಂದಾಜಿದ್ದು, ಕುಡಿಯಲು ಮತ್ತು ಕೈಗಾರಿಕೆಗೆ ಅಗತ್ಯವಾದ ನೀರನ್ನು ಒದಗಿಸಲು ಸೂಕ್ತ ರೀತಿಯಲ್ಲಿ ಯೋಜನೆ ರೂಪಿಸುವುದು, ಸಂಸ್ಕರಿಸಿದ ನೀರಿನ ಮರುಬಳಕೆ, ಕೆರೆಗಳನ್ನು ತುಂಬಿಸುವುದಕ್ಕೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.ವಸತಿ ರಹಿತರಿಗೆ ಕೈಗೆಟುವ ದರಲ್ಲಿ ವಸತಿ ಸೌಲಭ್ಯ ಕಲ್ಪಿಸುವುದಕ್ಕಾಗಿ ಯೋಜನೆ ರೂಪಿಸಲಾಗಿದೆ. ಆ ನಿಟ್ಟಿನಲ್ಲಿ 6ರಿಂದ 6.5 ಲಕ್ಷ ರು. ವೆಚ್ಚದ ಮನೆ ನಿರ್ಮಾಣ ಯೋಜನೆ ರೂಪಿಸಲಾಗಿದ್ದು, ಕೈಗಾರಿಕೆಗಳಲ್ಲಿ ಕೆಲಸ ಮಾಡುವ 40ರಿಂದ 50 ಸಾವಿರ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸುವ ಬಗ್ಗೆಯೂ ನಿರ್ಧರಿಸಲಾಯಿತು. ಈ ವೇಳೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿದರು.