ದೀಪಾವಳಿ ಸಂಭ್ರಮದ ನಡುವೆ ಬೆಂಗಳೂರಿನಲ್ಲಿ 150 ಮಂದಿ ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿ

| Published : Nov 04 2024, 12:32 AM IST / Updated: Nov 04 2024, 10:19 AM IST

ದೀಪಾವಳಿ ಸಂಭ್ರಮದ ನಡುವೆ ಬೆಂಗಳೂರಿನಲ್ಲಿ 150 ಮಂದಿ ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಎಷ್ಟೇ ಎಚ್ಚರಿಕೆ ನೀಡಿದರೂ ಜನರು, ಮಕ್ಕಳು ಪಟಾಕಿ ಸಿಡಿತದ ಅಪಾಯದಿಂದ ಪಾರಾಗಿಲ್ಲ.ಬೆಂಗಳೂರಿನಲ್ಲಿ 150 ಮಂದಿ ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾರೆ.

  ಬೆಂಗಳೂರು : ದೀಪಾವಳಿ ಸಂಭ್ರಮದ ನಡುವೆ ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯಗೊಂಡವರ ಸಂಖ್ಯೆಯಲ್ಲಿ ಈ ವರ್ಷ ಗಣನೀಯ ಏರಿಕೆಯಾಗಿದ್ದು, ಸುಮಾರು 150 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇದರಲ್ಲಿ ಸುಮಾರು 30 ಜನರ ಕಣ್ಣಿಗೆ ಗಂಭೀರ ಗಾಯಗಳಾಗಿದ್ದು, 9 ಜನರಿಗೆ ದೃಷ್ಟಿ ಕಳೆದುಕೊಳ್ಳುವ ಸಂಭವವಿದೆ.

ದೀಪಾವಳಿ ಹಬ್ಬ ಆರಂಭದಿಂದ ಭಾನುವಾರ ಸಂಜೆವರೆಗೆ ನಾರಾಯಣ ನೇತ್ರಾಲಯದ ವಿವಿಧ ಆಸ್ಪತ್ರೆಗಳಲ್ಲಿ 73 ಜನ ಪಟಾಕಿ ಸಂಬಂಧಿಸಿದ ಗಾಯಗಳಿಗೆ ಚಿಕಿತ್ಸೆ ಪಡೆದಿದ್ದಾರೆ. ಅದರಲ್ಲಿ 35 ಮಕ್ಕಳಿದ್ದಾರೆ. 73 ಜನರಲ್ಲಿ ಅರ್ಧದಷ್ಟು ಜನ ಪಟಾಕಿ ಸಿಡಿಯುವುದನ್ನು ನೋಡುತ್ತಾ ನಿಂತವರು ಅಥವಾ ದಾರಿಹೋಕರಾಗಿದ್ದಾರೆ. ಉಳಿದವರು ಪಟಾಕಿ ಸಿಡಿಸುವಾಗ ಗಾಯ ಮಾಡಿಕೊಂಡವರಾಗಿದ್ದಾರೆ. ಇದರಲ್ಲಿ 19 ಜನರಿಗೆ ಗಂಭೀರ ಗಾಯಗಳಾಗಿವೆ. ಕಳೆದ ವರ್ಷ ದೀಪಾವಳಿ ವೇಳೆ 54 ಜನರಿಗೆ ಚಿಕಿತ್ಸೆ ನೀಡಲಾಗಿತ್ತು. ಈ ಬಾರಿ 73 ಜನ ಚಿಕಿತ್ಸೆ ಪಡೆದಿದ್ದಾರೆ ಎಂದು ನಾರಾಯಣ ನೇತ್ರಾಲಯದ ಅಧಿಕಾರಿ ತಿಳಿಸಿದರು.

ಸರ್ಕಾರ ಆಸ್ಪತ್ರೆ ಮಿಂಟೋದಲ್ಲಿ 54 ಜನರಿಗೆ ಚಿಕಿತ್ಸೆ ನೀಡಲಾಗಿದ್ದು, ಇದರಲ್ಲಿ ನಾಲ್ವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಗಾಯಗೊಂಡವರಲ್ಲಿ 33 ಜನ ಮಕ್ಕಳಿದ್ದಾರೆ. ಶಂಕರ ಕಣ್ಣಾಸ್ಪತ್ರೆಯಲ್ಲಿ 18, ಅಗರ್ವಾಲ್ ಕಣ್ಣಾಸ್ಪತ್ರೆಯಲ್ಲಿ 15 ಜನ ಪಟಾಕಿ ಸಂಬಂಧಿಸಿದ ಗಾಯಗಳಿಗೆ ಚಿಕಿತ್ಸೆ ಪಡೆದಿದ್ದಾರೆ.

ನಾರಾಯಣ ನೇತ್ರಾಲಯಕ್ಕೆ ದಾಖಲಾಗಿರುವ ಮಹಾಲಕ್ಷ್ಮೀ ಲೇಔಟ್‌ ವಾಸಿಯಾಗಿರುವ 12 ವರ್ಷದ ಬಾಲಕಿ ಬುಲೆಟ್ ಪಟಾಕಿ ಹಚ್ಚುವಾಗ ಸಿಡಿದು ಎಡಗಣ್ಣಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ಬಾಲಕಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಸಿಡಿಯದ ಪಟಾಕಿಯನ್ನು ನೋಡಲು ಹೋದ 6 ವರ್ಷದ ಬಾಲಕನ ಕಣ್ಣಿಗೆ ಆ ಪಟಾಕಿ ಸಿಡಿದು ಗಂಭೀರ ಗಾಯವಾಗಿದೆ.

ಕಣ್ಣಿನ ಪ್ರಮುಖ ಭಾಗಗಳಾದ ಕಾರ್ನಿಯಾ, ರೆಟಿನಾಗಳಿಗೆ ತೀವ್ರ ಸ್ವರೂಪದ ಹಾನಿಯಾಗಿರುವ ಪ್ರಕರಣಗಳು ಒಟ್ಟು ಒಂಬತ್ತು ಇವೆ. ಇವರಲ್ಲಿ ದೃಷ್ಟಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.