150 ಟವರ್ ಆರಂಭಕ್ಕೆ ಅನುಮೋದನೆ: ಕೋಟಾ ಶ್ರೀನಿವಾಸ ಪೂಜಾರಿ

| Published : Sep 04 2025, 01:00 AM IST

ಸಾರಾಂಶ

ಚಿಕ್ಕಮಗಳೂರು, ಜಿಲ್ಲೆಯಲ್ಲಿ ನೂತನವಾಗಿ 150 ಟವರ್ ನಿರ್ಮಾಣ ಮಾಡುವಂತೆ ಕೇಂದ್ರ ದೂರಸಂಪರ್ಕ ಇಲಾಖೆ ಸಚಿವ ಜ್ಯೋತಿರಾಧ್ಯ ಸಿಂಧ್ಯ ಅವರಿಗೆ ಮನವಿ ಮಾಡಲಾಗಿತ್ತು. ನಮ್ಮ ಮನವಿ ಪುರಸ್ಕರಿಸಿ ಜಿಲ್ಲೆಯಲ್ಲಿ ನೂತನ ಟವರ್ ಆರಂಭಿಸಲು ಅನುಮೋದನೆ ನೀಡಿದ್ದಾರೆ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.

- ಬಿಎಸ್‌ಎನ್‌ಎಲ್ ಅಧಿಕಾರಿಗಳು ಹಾಗೂ ಬಿಎಸ್‌ಎನ್‌ಎಲ್ ಸಲಹಾ ಸಮಿತಿ ಸದಸ್ಯರ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆಯಲ್ಲಿ ನೂತನವಾಗಿ 150 ಟವರ್ ನಿರ್ಮಾಣ ಮಾಡುವಂತೆ ಕೇಂದ್ರ ದೂರಸಂಪರ್ಕ ಇಲಾಖೆ ಸಚಿವ ಜ್ಯೋತಿರಾಧ್ಯ ಸಿಂಧ್ಯ ಅವರಿಗೆ ಮನವಿ ಮಾಡಲಾಗಿತ್ತು. ನಮ್ಮ ಮನವಿ ಪುರಸ್ಕರಿಸಿ ಜಿಲ್ಲೆಯಲ್ಲಿ ನೂತನ ಟವರ್ ಆರಂಭಿಸಲು ಅನುಮೋದನೆ ನೀಡಿದ್ದಾರೆ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.

ನಗರದ ಬಿಎಸ್‌ಎನ್‌ಎಲ್ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಬಿಎಸ್‌ಎನ್‌ಎಲ್ ಅಧಿಕಾರಿಗಳು ಹಾಗೂ ಬಿಎಸ್‌ಎನ್‌ಎಲ್ ಸಲಹಾ ಸಮಿತಿ ಸದಸ್ಯರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನೂತನ ಟವರ್‌ಗಳು ನಿರ್ಮಾಣವಾದಲ್ಲಿ ಜಿಲ್ಲೆಯಲ್ಲಿ ನೆಟ್‌ವರ್ಕ್‌ ಸಮಸ್ಯೆ ಒಂದು ಹಂತಕ್ಕೆ ಪರಿಹಾರವಾದಂತಾಗುತ್ತದೆ ಎಂದು ಹೇಳಿದರು.

ಕಳೆದ ಒಂದು ವರ್ಷದಲ್ಲಿ ಬಿಎಸ್‌ಎನ್‌ಎಲ್ ಸಾಕಷ್ಟು ಸುಧಾರಿಸಿದೆ. ಆದರೂ ಹಲವು ಸಮಸ್ಯೆ ಇನ್ನೂ ಹಾಗೆಯೇ ಇವೆ. ನಾವು ಎಷ್ಟೇ ಸುಧಾರಿಸಿದ್ದರೂ ಗ್ರಾಹಕರ ನಿರೀಕ್ಷೆ ಇನ್ನೂ ಹೆಚ್ಚಾಗಿದೆ. ಹೀಗಾಗಿ ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಸೇವೆ ಸಲ್ಲಿಸಲು ಎಲ್ಲ ರೀತಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಟವರ್‌ಗಳಿಗೆ ಇನ್ನೂ 25 ಬ್ಯಾಟರಿಗಳು ಬರಬೇಕಾಗಿದೆ. ಇನ್ನು ಟವರ್‌ಗಳಿಗೆ ನಿರಂತರ ವಿದ್ಯುತ್ ಪೂರೈಕೆಗೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಮಲೆನಾಡು ಭಾಗದಲ್ಲಿ ಒಮ್ಮೆ ಕರೆಂಟ್ ಹೋದರೆ ಐದಾರು ದಿನಗಳು ಬರುವುದೇ ಇಲ್ಲ. ಮಲೆನಾಡಿನಲ್ಲಿ ಮಳೆಗಾಲದ ಅವಧಿಯಲ್ಲಿ ಸೋಲಾರ್ ಕೆಲಸ ಮಾಡುವುದಿಲ್ಲ. ಇಂಥ ಸಮಸ್ಯೆ ಪರಿಹರಿಸಲು ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆಯೂ ಚರ್ಚಿಸಲಾಗಿದೆ ಎಂದರು.

500 ಕುಟುಂಬಗಳಿದ್ದರೆ ಅಲ್ಲಿಗೆ ಒಂದು ಟವರ್ ನಿರ್ಮಾಣ ಮಾಡಲು ಅವಕಾಶವಿದೆ. ಆದರೆ, ಮಲೆನಾಡು ಭಾಗದಲ್ಲಿ ಮನೆ ಗಳ ಸಂಖ್ಯೆ ಕಡಿಮೆ ಇರುತ್ತದೆ. ಹೀಗಾಗಿ 300 ಮನೆಗಳು ಇರುವ ಕಡೆಯೂ ಟವರ್ ನಿರ್ಮಾಣ ಮಾಡುವಂತೆ ಅಧಿಕಾರಿ ಗಳಿಗೆ ಸೂಚನೆ ನೀಡಲಾಗಿದೆ. ಹೊಸದಾಗಿ ಟವರ್ ಆರಂಭಿಸುವ ಜೊತೆಗೆ ಇರುವ ಟವರ್‌ಗಳನ್ನು ಮೇಲ್ದರ್ಜೆಗೇರಿಸಿ 4ಜಿ ನೆಟ್‌ವರ್ಕ್‌ ಒದಗಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿರುವ 217 ಬಿಎಸ್‌ಎನ್‌ಎಲ್ ಟವರ್‌ಗಳಲ್ಲಿ ಈಗಾಗಲೇ 190 ಅನ್ನು 4ಜಿಗೆ ಮೇಲ್ದರ್ಜೆಗೇರಿಸಲಾಗಿದೆ. ಇನ್ನುಳಿದ ವುಗಳನ್ನೂ ಕೂಡಲೇ ಮೆಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು. ಇದರೊಂದಿಗೆ ಹೊಸ ಟವರ್ ನಿರ್ಮಾಣ ಮಾಡುವು ದರಿಂದ ಜನರಿಗೆ ಇನ್ನಷ್ಟು ಸೇವೆ ಒದಗಿಸಲು ಸಾಧ್ಯ ಎಂದು ಹೇಳಿದರು.

ಸಭೆಯಲ್ಲಿ ಬಿಎಸ್‌ಎನ್‌ಎಲ್ ಶಿವಮೊಗ್ಗ-ಚಿಕ್ಕಮಗಳೂರು ವಿಭಾಗದ ಮುಖ್ಯಸ್ಥ ವಿನಯ್ ಕುಮಾರ್ ಸಿನ್ಹಾ, ಡಿಜಿಎಂ ಬಾಲಾಜಿ, ಎಜಿಎಂ ಗೋಪಾಲಕೃಷ್ಣ, ಸಲಹಾ ಸಮಿತಿ ಸದಸ್ಯರಾದ ಆಲ್ದೂರು ಶಶಿ, ವಿನೋದ್ ಬೊಗಸೆ, ಸೋಮಶೇಖರ್, ಪ್ರಮುಖರಾದ ಎಚ್.ಸಿ.ಕಲ್ಮರುಡಪ್ಪ, ಹಿರೇಮಗಳೂರು ಪುಟ್ಟಸ್ವಾಮಿ, ದೀಪಕ್ ದೊಡ್ಡಯ್ಯ ಉಪಸ್ಥಿತರಿದ್ದರು.

ಇನ್ನೊಂದು ವಾರದಲ್ಲಿ ಹೆದ್ದಾರಿ ಕಾಮಗಾರಿ ಆರಂಭ

ಚಿಕ್ಕಮಗಳೂರು: ಮೂಗ್ತಿಹಳ್ಳಿಯಿಂದ ಮೂಡಿಗೆರೆ ಹ್ಯಾಂಡ್ ಪೋಸ್ಟ್‌ವರೆಗೆ ಹೆದ್ದಾರಿ ಕಾಮಗಾರಿಯನ್ನು ಇನ್ನೊಂದು ವಾರದ ಒಳಗಾಗಿ ಆರಂಭಿಸುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಡಿಸಿ, ಎಡಿಸಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿ ಸುದ್ದಿಗಾರ ರೊಂದಿಗೆ ಮಾತನಾಡಿ, ಮೂಗ್ತಿಹಳ್ಳಿಯಿಂದ ಮೂಡಿಗೆರೆ ಹ್ಯಾಂಡ್ ಪೋಸ್ಟ್‌ವರೆಗೆ 26.6 ಕಿ.ಮೀ. ಹೆದ್ದಾರಿ ಅಭಿವೃದ್ಧಿ ಮಾಡಲಾ ಗುವುದು. ಇದಕ್ಕಾಗಿ 160 ರೈತರ ಜಮೀನನ್ನು ಭೂ ಸ್ವಾಧೀನ ಮಾಡಿಕೊಳ್ಳಲಾಗುತ್ತದೆ ಹಾಗೂ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಎಲ್ಲ ರೈತರಿಗೆ ನೋಟಿಸ್ ನೀಡುತ್ತೇವೆ ಎಂದರು.

ಮೊದಲ ಹಂತದ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ. 2ನೇ ಹಂತದ ಕಾಮಗಾರಿಗೆ ಅನುಮೋದನೆ ಸಿಕ್ಕಿದ ತಕ್ಷಣ ಆರಂಭ ಗೊಳ್ಳಲಿದೆ. ಮಳೆ ಕಾರಣಕ್ಕೆ ಕಾಮಗಾರಿ ಆರಂಭ ವಿಳಂಬವಾಗಿದೆ. ಈಗಾಗಲೇ ಮಳೆ ಕಡಿಮೆ ಯಾಗಲಾರಂಭಿಸಿದೆ. ಹೀಗಾಗಿ ತುರ್ತು ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.ಶೃಂಗೇರಿ ಹೆದ್ದಾರಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಶೃಂಗೇರಿ ಪಟ್ಟಣದೊಳಗೆ ಹಾದುಹೋದ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಅಲ್ಲದೆ ಈ ಹೆದ್ದಾರಿಯಲ್ಲಿ ಅಲ್ಲಲ್ಲಿ ತಡೆಗೋಡೆ ನಿರ್ಮಾಣ ಅಗತ್ಯ ವಿದ್ದು, ಈ ಬಗ್ಗೆಯೂ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಬೇಲೂರು-ಚಿಕ್ಕಮಗಳೂರು ರಸ್ತೆ ಅಭಿವೃದ್ಧಿಗೆ ಭೂ ಸ್ವಾಧೀನ ಪ್ರಕ್ರಿಯೆ ಆರಂಭಗೊಂಡಿದೆ. ಅಲ್ಲದೆ ಅರಣ್ಯ ಇಲಾಖೆಯಿಂದ ಮರ ಕಡಿತಲೆಗೆ ಎನ್‌ಓಸಿ ಕೇಳಲಾಗಿದೆ. ಇದಲ್ಲದೆ ಬೇಲೂರು-ಮೂಡಿಗೆರೆ ಹ್ಯಾಂಡ್ ಪೋಸ್ಟ್ ವರೆಗಿನ 31 ಕಿ.ಮೀ. ರಸ್ತೆ ಅಭಿವೃದ್ಧಿ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದರು.ಇದಲ್ಲದೆ ಚಿಕ್ಕಮಗಳೂರು ಬೈಪಾಸ್ ರಸ್ತೆ ಅಭಿವೃದ್ಧಿ, ಚಿಕ್ಕಮಗಳೂರು - ಕಡೂರು ರಸ್ತೆ ಹಾಗೂ ತರೀಕೆರೆ ಹೆದ್ದಾರಿಗಳ ಅಭಿವೃದ್ಧಿ ಬಗ್ಗೆಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಕೆಲ ದಿನಗಳಲ್ಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆರ್‌ಒ ಶರ್ಮಾ ರನ್ನು ಭೇಟಿ ಮಾಡಿ ಜಿಲ್ಲೆಯ ಹೆದ್ದಾರಿಗಳ ಬಗ್ಗೆ ಚರ್ಚೆ ನಡೆಸಿ ಸೂಕ್ತ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡುವುದಾಗಿ ತಿಳಿಸಿದರು.

ಸಭೆಯಲ್ಲಿ ಡಿಸಿ ಮೀನಾ ನಾಗರಾಜ್, ಎಡಿಸಿ ನಾರಾಯಣರಡ್ಡಿ ಕನಕರಡ್ಡಿ, ಉಪ ವಿಭಾಗಾಧಿಕಾರಿ ಸುದರ್ಶನ್, ತಹಸೀಲ್ದಾರ್ ರೇಷ್ಮಾ ಶೆಟ್ಟಿ, ದೀಪಕ್ ದೊಡ್ಡಯ್ಯ, ಎಚ್.ಸಿ.ಕಲ್ಮರುಡಪ್ಪ ಇದ್ದರು.3 ಕೆಸಿಕೆಎಂ 4ಚಿಕ್ಕಮಗಳೂರಿನ ಬಿಎಸ್‌ಎನ್‌ಎಲ್ ಕಚೇರಿ ಸಭಾಂಗಣದಲ್ಲಿ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅಧ್ಯಕ್ಷತೆಯಲ್ಲಿ ಬುಧವಾರ ಅಧಿಕಾರಿಗಳ ಹಾಗೂ ಬಿಎಸ್‌ಎನ್‌ಎಲ್ ಸಲಹಾ ಸಮಿತಿ ಸದಸ್ಯರ ಸಭೆ ನಡೆಯಿತು.