ಬೆಂಗಳೂರು : 9 ದಿನದಲ್ಲೇ 1500 ಡೆಂಘೀ ಪ್ರಕರಣ ಪತ್ತೆ!

| Published : Jul 11 2024, 01:31 AM IST / Updated: Jul 11 2024, 08:52 AM IST

ಸಾರಾಂಶ

ನಗರದಲ್ಲಿ ದಿನದಿಂದ ದಿನಕ್ಕೆ ಡೆಂಘೀ ಪ್ರಕರಣ ಹೆಚ್ಚುತಲೇ ಇದೆ. ಕೇವಲ 9 ದಿನದಲ್ಲೇ 1500 ಪ್ರಕರಣ ಪತ್ತೆ ಆಗಿದೆ.

 ಬೆಂಗಳೂರು :  ರಾಜಧಾನಿ ಬೆಂಗಳೂರಿನಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜು.1ರಿಂದ 9ರವರೆಗೆ ಬರೋಬ್ಬರಿ 1,500 ಡೆಂಘೀ ಪ್ರಕರಣ ಕಾಣಿಸಿಕೊಂಡಿವೆ. ಜನವರಿಯಿಂದ ಈವರೆಗೆ ಪ್ರಕರಣಗಳ ಸಂಖ್ಯೆ 4,500ರ ಗಡಿ ಸಮೀಪಿಸಿದೆ.

ಬಿಬಿಎಂಪಿಯ ಅಂಕಿ ಅಂಶದ ಪ್ರಕಾರ, ಕಳೆದ 9 ದಿನದಲ್ಲಿ ನಗರದಲ್ಲಿ ಒಟ್ಟು 1,482 ಪ್ರಕರಣ ಕಾಣಿಸಿಕೊಂಡಿದ್ದು, ಬಿಬಿಎಂಪಿಯ ಪೂರ್ವ ವಲಯ ಹಾಗೂ ಮಹದೇವಪುರ ವಲಯದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಪ್ರತಿ ನಿತ್ಯ ಕಾಣಿಸಿಕೊಳ್ಳುತ್ತಿವೆ.

9 ದಿನದಲ್ಲಿ ಪೂರ್ವ ವಲಯದಲ್ಲಿ 302 ಹಾಗೂ ಮಹದೇವಪುರ ವಲಯದಲ್ಲಿ 319 ಡೆಂಘೀ ಪ್ರಕರಣ ಕಾಣಿಸಿಕೊಂಡರೆ, ಈ ವರ್ಷದಲ್ಲಿ ಪೂರ್ವ ವಲಯದಲ್ಲಿ ಒಟ್ಟಾರೆ 996 ಹಾಗೂ ಮಹದೇವಪುರದಲ್ಲಿ 1,159 ಪ್ರಕರಣ ದೃಢಪಟ್ಟಿವೆ. ಒಟ್ಟಾರೆ ಈ ವರ್ಷ ನಗರದಲ್ಲಿ 4,385 ಡೆಂಘೀ ರೋಗಿಗಳನ್ನು ಬಾಧಿಸಿದೆ.

ಜಾಗೃತಿ ಕೊರತೆ:  ಬಿಬಿಎಂಪಿಯ ಅಧಿಕಾರಿ ಸಿಬ್ಬಂದಿಯು ಪರಿಣಾಮಕಾರಿ ಜಾಗೃತಿ ನಡೆಸುತ್ತಿಲ್ಲ. ಅಲ್ಲಲ್ಲಿ ಜಾಗೃತಿ ಫ್ಲೆಕ್ಸ್‌ ಅಳವಡಿಕೆ ಮಾಡಿರುವುದು ಮಾತ್ರ ಕಂಡು ಬಂದಿದೆ. ಉಳಿದಂತೆ ಆರೋಗ್ಯ ವಿಭಾಗದ ಸಿಬ್ಬಂದಿ, ಆಶಾ ಕಾರ್ಯಕರ್ತರು ಮನೆ-ಮನೆ ಭೇಟಿ ನೀಡುತ್ತಿಲ್ಲ. ಕೇವಲ ಮಾಧ್ಯಮಗಳಲ್ಲಿ ಮನೆ ಮನೆ ಸಮೀಕ್ಷೆ ನಡೆಸಲಾಗಿದೆ. ಜಾಗೃತಿ ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಲಾಗುತ್ತಿದೆ. ಇನ್ನು ನಿಯಮಿತವಾಗಿ ಫಾಗಿಂಗ್‌ ಸೇರಿದಂತೆ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕೆಲಸ ಮಾಡುತ್ತಿಲ್ಲ. ಕೆಲವು ರಸ್ತೆಗಳಲ್ಲಿ ಮಾತ್ರ ಫಾಗಿಂಗ್‌ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ವಿಳಾಸ ಹುಡುಕಾಟ ತಲೆ ನೋವು:

ಬಿಬಿಎಂಪಿ ವ್ಯಾಪ್ತಿಯಲ್ಲಿ ದೃಢಪಡುತ್ತಿರುವ ಡೆಂಘೀ ಪ್ರಕರಣಗಳ ಪೈಕಿ ಜು.1ರಿಂದ 9 ಅವಧಿಯಲ್ಲಿ 199 ಡೆಂಘೀ ರೋಗಿಗಳ ವಿಳಾಸ ದೊರೆಯುತ್ತಿಲ್ಲ. ವಿಳಾಸ ಪತ್ತೆ ಮಾಡುವುದು ಬಿಬಿಎಂಪಿ ಆರೋಗ್ಯ ವಿಭಾಗದ ಸಿಬ್ಬಂದಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.

ನಗರ ಡೆಂಘೀ ವಿವರ (ಬಿಬಿಎಂಪಿ ಅಂಕಿ ಅಂಶ)

ವಲಯಒಟ್ಟು ಪ್ರಕರಣಜುಲೈ ಪ್ರಕರಣ (1 ರಿಂದ 9)

ಬೊಮ್ಮನಹಳ್ಳಿ430110

ದಾಸರಹಳ್ಳಿ4418

ಪೂರ್ವ996302

ಮಹದೇವಪುರ1,159319

ಆರ್‌ಆರ್‌ನಗರ34998

ದಕ್ಷಿಣ589147

ಪಶ್ಚಿಮ432147

ಯಲಹಂಕ28158

ವಿಳಾಸ ಸಿಗದ ಸಂಖ್ಯೆ-199

ಬಿಬಿಎಂಪಿ ವ್ಯಾಪ್ತಿಗೆ ಬಾರದ ಸಂಖ್ಯೆ-84

ಒಟ್ಟು4,3851,482