ತುಂಗಭದ್ರಾ ಜಲಾಶಯದಿಂದ ನದಿಗೆ 15100 ಕ್ಯುಸೆಕ್‌ ನೀರು

| Published : Jul 02 2025, 11:49 PM IST

ಸಾರಾಂಶ

ತುಂಗಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದಲ್ಲದೆ ವರದಾ ನದಿಯೂ ಉಕ್ಕಿ ಹರಿಯುತ್ತಿದ್ದು ಮತ್ತು ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಭಾರೀ ಏರಿಕೆಯಾಗುತ್ತಿದೆ.

ಮುನಿರಾಬಾದ್:ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಳವಾದ ಹಿನ್ನೆಲೆ ಬುಧವಾರ ನದಿಗೆ 14100 ಕ್ಯುಸೆಕ್‌ ಹಾಗೂ ವಿದ್ಯುತ್‌ ಉತ್ಪಾದನೆಗೆ 1000 ಕ್ಯುಸೆಕ್‌ ನೀರು ಹರಿಸಲಾಗಿದೆ ಎಂದು ತುಂಗಭದ್ರಾ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಒಳಹರಿವು ಹೆಚ್ಚಿರುವ ಕಾರಣ ಯಾವುದೇ ಕ್ಷಣದಲ್ಲಾದರೂ 20000 ಕ್ಯುಸೆಕ್‌ ವರೆಗೆ ನದಿಗೆ ನೀರು ಬಿಡಲಾಗುವುದು. ಆದರಿಂದ ನದಿ ಪಾತ್ರದಲ್ಲಿರುವ ಜನರು ಎಚ್ಚರಿಕೆ ವಹಿಸಬೇಕೆಂದು ಹೇಳಿದ್ದಾರೆ.

ಬುಧವಾರ ಬೆಳಗ್ಗೆ 11.30ಕ್ಕೆ 33 ಗೇಟ್‌ಗಳ ಪೈಕಿ ಎರಡು ಗೇಟ್‌ಗಳಿಂದ 4680 ಕ್ಯುಸೆಕ್‌ ಬಿಡುಗಡೆ ಮಾಡಲಾಗಿತ್ತು. ಮಧ್ಯಾಹ್ನ 3 ಗಂಟೆಗೆ 4 ಗೇಟ್‌ಗಳನ್ನು ಎರಡು ಅಡಿ ಎತ್ತರಿಸಿ ನದಿಗೆ 10400 ಕ್ಯುಸೆಕ್‌, ಸಂಜೆ 6 ಗೇಟ್‌ಗಳ ಎರಡು ಅಡಿ ಎತ್ತರಿಸಿ 14100 ಕ್ಯುಸೆಕ್‌ ನೀರು ಹರಿಸಲಾಗಿದೆ. ಜತೆಗೆ 1000 ಕ್ಯುಸೆಕ್‌ ನೀರನ್ನು ವಿದ್ಯುತ್‌ ಉತ್ಪಾದನೆಗೆ ಬಿಡಲಾಗಿದೆ.

ತುಂಗಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದಲ್ಲದೆ ವರದಾ ನದಿಯೂ ಉಕ್ಕಿ ಹರಿಯುತ್ತಿದ್ದು ಮತ್ತು ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಭಾರೀ ಏರಿಕೆಯಾಗುತ್ತಿದೆ. ಬುಧವಾರ ಜಲಾಶಯಕ್ಕೆ 32000 ಕ್ಯುಸೆಕ್‌ ನೀರು ಹರಿದು ಬಂದಿದ್ದು ಜಲಾಶಯದಲ್ಲಿ 77 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ನೀರಿನ ಮಟ್ಟ 1625 ಅಡಿ ತಲುಪಿದೆ. ಪ್ರಸಕ್ತ ಸಾಲಿನಲ್ಲಿ ತುಂಗಭದ್ರಾ ಜಲಾಶಯದ ಎಲ್ಲ 33 ಗೇಟ್‌ಗಳು ಶಿಥಿಲಗೊಂಡ ಹಿನ್ನೆಲೆಯಲ್ಲಿ ಜಲಾಶಯದಲ್ಲಿ 80 ಟಿಎಂಸಿ ನೀರು ಮಾತ್ರ ಶೇಖರಣೆ ಮಾಡಲು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಲಾಶಯದ ಹೆಚ್ಚುವರಿ ನೀರನ್ನು ನದಿಗೆ ಹರಿದು ಬಿಡಲಾಗುತ್ತಿದೆ.

ಎಚ್ಚರಿಕೆ ವಹಿಸಿ:ಜಲಾಶಯಕ್ಕೆ ಒಳಹರಿವು ಹೆಚ್ಚಾದಂತೆ ನದಿಗೆ ಹೆಚ್ಚುವರಿ ನೀರು ಹರಿಸಲಾಗುವುದು. ಯಾವುದೇ ಕ್ಷಣದಲ್ಲಾದರೂ 20000 ಕ್ಯುಸೆಕ್‌ ವರೆಗೆ ನದಿಗೆ ನೀರು ಬಿಡಲಾಗುವುದು. ಆದರಿಂದ ನದಿ ಪಾತ್ರದಲ್ಲಿರುವ ಜನರು ಎಚ್ಚರಿಕೆ ವಹಿಸಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಜು. 24ರಂದು ಜಲಾಶಯದ 10 ಗೇಟ್‌ಗಳಿಂದ ನದಿಗೆ 19000 ಕ್ಯುಸೆಕ್‌ ನೀರು ಹರಿಸಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಲಾಶಯದಿಂದ 22 ದಿನಗಳ ಮುಂಚಿತವಾಗಿ ನದಿಗೆ ನೀರು ಹರಿಸಲಾಗುತ್ತಿದೆ. ಕಳೆದ ವರ್ಷ ಇದೇ ದಿನದಂದು ಜಲಾಶಯದಲ್ಲಿ ನೀರಿನ ಮಟ್ಟ 1585 ಅಡಿಗಳಿದ್ದು 7 ಟಿಎಂಸಿ ನೀರು ಶೇಖರಣೆಯಾಗಿತ್ತು ಹಾಗೂ ಜಲಾಶಯದ ಒಳಹರಿವು 13410 ಕ್ಯುಸೆಕ್‌ ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಲಾಶಯದಲ್ಲಿ 70 ಟಿಎಂಸಿ ಹೆಚ್ಚುವರಿ ನೀರು ಶೇಖರಣೆಯಾಗಿದೆ ಮತ್ತು ನೀರಿನ ಮಟ್ಟದಲ್ಲೂ ಸಹ 40 ಅಡಿಗಳಷ್ಟು ಅಂತರವಿದೆ.

ಪ್ರಸಕ್ತ ಸಾಲಿನಲ್ಲಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರಿನ ಒಳಹರಿವು ಇರುವುದರಿಂದ ತುಂಗಭದ್ರಾ ಜಲಾಶಯದ ಎಡದಂಡೆ ಮುಖ್ಯ ಕಾಲುವೆ, ಬಲದಂಡೆ ಕೆಳಮಟ್ಟದ ಹಾಗೂ ಮೇಲ್ಮಟ್ಟದ ಕಾಲುವೆ, ರಾಯ ಮತ್ತು ಬಸವಣ್ಣ ಕಾಲುವೆಗಳಿಂದ ಅಚ್ಚುಕಟ್ಟು ಪ್ರದೇಶದ ರೈತರ ಮುಂಗಾರು ಬೆಳೆಗೆ ಜು.1ರಿಂದಲೇ ನೀರು ಹರಿಸಲಾಗಿದೆ. ಕಳೆದ ವರ್ಷ ಜು. 24ರಂದು ಜಲಾಶಯದ ಕಾಲುವೆಗಳಿಂದ ನೀರು ಹರಿಸಲಾಗಿತ್ತು.