ನಾಳೆಯಿಂದ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

| Published : Dec 28 2023, 01:46 AM IST / Updated: Dec 28 2023, 01:47 AM IST

ನಾಳೆಯಿಂದ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
Share this Article
  • FB
  • TW
  • Linkdin
  • Email

ಸಾರಾಂಶ

ತುಮಕೂರಿನಲ್ಲಿ ನಾಳೆಯಿಂದ 15ನೇ ಕನ್ನಡ ಸಾಹಿತ್ಯ ಸಮ್ಮೇಳನ.

ಕನ್ನಡಪ್ರಭ ವಾರ್ತೆ ತುಮಕೂರು

ಕಲೆ, ಸಾಹಿತ್ಯ, ಶಿಕ್ಷಣಗಳ ಜೊತೆಗೆ ವೈವಿದ್ಯಮಯ ಸಂಗೀತ, ನೃತ್ಯ, ಜಾನಪದ, ಯಕ್ಷಗಾನ ಹಾಗೂ ರಂಗಭೂಮಿಯ ಸಂಗಮ ಹಾಗೂ ಶೈಕ್ಷಣಿಕವಾಗಿ ಕಲೆ ಸಾಹಿತ್ಯ ಸಂಸ್ಕೃತಿಗಳ ಶ್ರೀಮಂತಿಕೆಯಿಂದ ಕೂಡಿರುವ ತುಮಕೂರು ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಡಿ.29 ಮತ್ತು 30 ರಂದು ಜಿಲ್ಲಾ 15 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ನಾಡು ನುಡಿ ಜಲಗಳ ಕುರಿತಾದ ಅರ್ಥಪೂರ್ಣ ವಿಚಾರ ವಿನಿಮಯಗಳಿಗೆ ಸಮ್ಮೇಳನ ಒಂದು ವೇದಿಕೆಯಾಗಿದೆ. ನಮ್ಮ ಜಿಲ್ಲೆಯವರೇ ಆದ ಅಂತಾರಾಷ್ಟ್ರೀಯ ಖ್ಯಾತಿಯ ಸಾಹಿತಿ ಡಾ.ಎಚ್.ಎಸ್. ಶಿವಪ್ರಕಾಶ್‌ ಸಮ್ಮೇಳನಾಧ್ಯಕ್ಷರಾಗಿರುತ್ತಾರೆ ಎಂದು ತಿಳಿಸಿದರು..

ಡಿ.29 ರಂದು ಶುಕ್ರವಾರ ಬೆಳಿಗ್ಗೆ 7.30 ಗಂಟೆಗೆ ಧ್ವಜಾರೋಹಣದ ಮೂಲಕ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ. ಅಪರ ಜಿಲ್ಲಾಧಿಕಾರಿ ಶಿವಾನಂದ್ ಬಿ.ಕರಾಳೆ ರಾಷ್ಟ್ರಧ್ವಜಾರೋಹಣ ಮಾಡುವರು. ಮಹಾನಗರಪಾಲಿಕೆಯ ಉಪ ಮೇಯರ್‌ ಟಿ.ಕೆ.ನರಸಿಂಹಮೂರ್ತಿ ನಾಡ ಧ್ವಜಾರೋಹಣ ನೆರವೇರಿಸುವರು, ಅಂದು ಬೆಳಿಗ್ಗೆ 8 ಗಂಟೆಗೆ ಮಹಾನಗರಪಾಲಿಕೆಯ ಆವರಣದಿಂದ ಸಮ್ಮೇಳನಾಧ್ಯಕ್ಷರ ವೈಭವಯುತ ಮೆರವಣಿಗೆ ನಡೆಯಲಿದೆ. ಜಿಲ್ಲೆಯ ಜಾನಪದ ಹಾಗೂ ಸಾಂಸ್ಕೃತಿಕ ಪ್ರಕಾರಗಳಾದ ಕೋಲಾಟ, ವೀರಗಾಸೆ, ನಂದಿಧ್ವಜ, ಸೋಮನಕುಣಿತ, ನಾಸಿಕ್ ಡೋಲು, ನಾದಸ್ವರ, ಗಾರುಡಿ ಗೊಂಬೆ, ಕೋಳಿನೃತ್ಯಗಳ ಜೊತೆಗೆ ಶಾಲಾ ಕಾಲೇಜುಗಳ ಸಾಂಸ್ಕೃತಿಕ ತಂಡಗಳು ಭಾಗವಹಿಸಲಿವೆ. ಪಾಲಿಕೆಯ ಆವರಣದಿಂದ ಬಿ.ಜಿ.ಎಸ್. ವೃತ್ತ, ಎಂ.ಜಿ.ರಸ್ತೆ ಮಾರ್ಗವಾಗಿ ಗುಂಚಿಚೌಕದಲ್ಲಿರುವ ಬಿ. ಶಿವಮೂರ್ತಿ ಶಾಸ್ತ್ರಿಗಳ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದ ಮಾರ್ಗವಾಗಿ ಪ್ರಧಾನ ವೇದಿಕೆ ತಲುಪುವುದು.

ಅಂದು ಬೆಳಿಗ್ಗೆ 10 ಗಂಟೆಗೆ ಶಿಕ್ಷಣ ಭೀಷ್ಮ ಡಾ.ಎಚ್.ಎಂ.ಗಂಗಾಧರಯ್ಯ ಪ್ರಧಾನ ವೇದಿಕೆಯಲ್ಲಿ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗಸ್ವಾಮಿ, ಹಿರೇಮಠಾಧ್ಯಕ್ಷ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಪಾವಗಡ ರಾಮಕೃಷ್ಣ ಸೇವಾಶ್ರಮದ ಜಪಾನಂದಜೀ ಮಹಾರಾಜ್‌ ಅವರ ಸಾನ್ನಿಧ್ಯದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಖ್ಯಾತ ಕವಿಗಳು, ಸಂಸ್ಕೃತಿ ಚಿಂತಕ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಅವರು ಸಮ್ಮೇಳನದ ಉದ್ಘಾಟನೆಯನ್ನು ನೆರವೇರಿಸುವರು. ಅಂದು ಕುವೆಂಪು ಜನ್ಮದಿನಾಚರಣೆಯ ಅಂಗವಾಗಿ ರಾಷ್ಟ್ರಕವಿ ಕುವೆಂಪುರವರ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪಾರ್ಚನೆ ಮಾಡುವರು.

ನವದೆಹಲಿಯ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಸಮ್ಮೇಳನದ ಸ್ಮರಣ ಸಂಚಿಕೆ ‘ಕಲ್ಪಸೌರಭ’ ಬಿಡುಗಡೆ ಮಾಡುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎಂ.ವಿ.ನಾಗರಾಜರಾವ್‌ ಅವರು ಪ್ರಸ್ತುತ ಸಮ್ಮೇಳನಾಧ್ಯಕ್ಷ ಡಾ.ಎಚ್.ಎಸ್. ಶಿವಪ್ರಕಾಶ್ ಅವರಿಗೆ ಧ್ವಜ ಹಸ್ತಾಂತರ ಮಾಡುವರು. ಖ್ಯಾತ ವಿಮರ್ಶಕರಾದ ಎಂ.ಎಸ್.ಆಶಾದೇವಿ ಸಮ್ಮೇಳನಾಧ್ಯಕ್ಷರ ಕೃತಿ ‘ಮುಗಿಲ ಜಹಜು’ ಬಿಡುಗಡೆ ಮಾಡುವರು. ಸಿಹಿಜೀವಿ ವೆಂಕಟೇಶ್ ಅವರ ‘ಕರ್ನಾಟಕದ ಏಳು ಅದ್ಭುತಗಳು’ ಕೃತಿಯನ್ನು ಶಾಸಕ ವೈ.ಎ. ನಾರಾಯಣ ಸ್ವಾಮಿ ಬಿಡುಗಡೆಗೊಳಿಸುವರು.

ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರ ಅಧ್ಯಕ್ಷತೆಯಲ್ಲಿ ಶಾಸಕರಾದ ಆರ್. ರಾಜೇಂದ್ರ, ಕೆ. ಷಡಕ್ಷರಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಇವರು ವಿವಿಧ ಲೇಖಕರ ಕೃತಿಗಳನ್ನು ಬಿಡುಗಡೆ ಮಾಡುವರು. ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಅವರು ಪುಸ್ತಕ ಪ್ರದರ್ಶನ ಉದ್ಘಾಟನೆ ಮಾಡುವರು. ಮಹಾನಗರಪಾಲಿಕೆ ಆಯುಕ್ತ ಅಶ್ವಿಜ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸುವರು. ಮುರಳೀಧರ ಹಾಲಪ್ಪ, ಎಸ್.ಪಿ. ಚಿದಾನಂದ್, ಎನ್.ಬಿ. ಪ್ರದೀಪ್‌ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜಿಲ್ಲೆಯ ಸಂಸದ ಜಿ.ಎಸ್. ಬಸವರಾಜು ಸೇರಿದಂತೆ ವಿವಿಧ ಶಾಸಕರು ಹಾಗೂ ವಿವಿಧ ಸಂಘಟನೆಗಳ ಮುಖ್ಯಸ್ಥರು, ಮಹಾನಗರಪಾಲಿಕೆಯ ಸದಸ್ಯರುಗಳು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ವಿವಿಧ ಗೋಷ್ಠಿಗಳು ನೆರವೇರಲಿದೆ.

30 ರಂದು ಸಂಜೆ 4.15 ಗಂಟೆಗೆ ನಡೆಯಲಿರುವ ಸನ್ಮಾನ ಮತ್ತು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ವಹಿಸುವರು. ಸಹಕಾರ ಸಚಿವ ಕೆ.ಎನ್. ರಾಜಣ್ಣ ಜಿಲ್ಲೆಯ ವಿವಿಧ ಕ್ಷೇತ್ರಗಳ 23 ಜನ ಸಾಧಕರನ್ನು ಸನ್ಮಾನಿಸುವರು. ಹಿರಿಯ ಸಾಹಿತಿ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಸಮಾರೋಪ ಭಾಷಣ ಮಾಡುವರು. ಲೋಕಸಭಾ ಸದಸ್ಯ ಜಿ.ಎಸ್. ಬಸವರಾಜ್ ಸಮ್ಮೇಳನಾಧ್ಯಕ್ಷ ಡಾ.ಎಚ್.ಎಸ್. ಶಿವಪ್ರಕಾಶ್‌ ಅವರನ್ನು ಸನ್ಮಾನಿಸುವರು. ಶಾಸಕರಾದ ಬಿ. ಸುರೇಶ್‌ಗೌಡ, ಎಂ. ಚಿದಾನಂದ ಗೌಡ ಅವರು ಪ್ರಶಂಸನಾ ಪತ್ರ ವಿತರಣೆ ಮಾಡುವರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಮತ್ತಿತರರು ಅತಿಥಿಗಳಾಗಿ ಭಾಗವಹಿಸುವರು.

ತುಮಕೂರು ತಾಲೂಕು ಕಸಾಪ ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್, ಕಸಾಪ ನಗರ ಕಾರ್ಯದರ್ಶಿ ಸಿಹಿಜೀವಿ ವೆಂಕಟೇಶ್, ಸಾಂಸ್ಕೃತಿಕ ಸಂಚಾಲಕ ಕೆಂಕೆರೆ ಮಲ್ಲಿಕಾರ್ಜುನ್, ಸಂಘಟನಾ ಕಾರ್ಯದರ್ಶಿ ತೇಜಸ್ವಿ, ಮಹಿಳಾ ಪ್ರತಿನಿಧಿ ರಾಣಿ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.