15ರಿಂದ 24ರ ತನಕ ಉಚ್ಚಿಲ ದಸರಾ ವೈಭವ: ನಾಡೋಜ ಜಿ.ಶಂಕರ್‌

| Published : Oct 10 2023, 01:01 AM IST

ಸಾರಾಂಶ

ಅ. 15ರಂದು ಶಾಲಿನಿ ಡಾ. ಜಿ.ಶಂಕರ್ ಸಭಾಂಗಣದಲ್ಲಿ ನವದುರ್ಗೆಯರ ಮತ್ತು ಶಾರದಾ ದೇವಿಯ ಪ್ರತಿಷ್ಠಾಪನೆಯೊಂದಿಗೆ ಉಚ್ಚಿಲ ದಸರಾಕ್ಕೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಚಾಲನೆ ನೀಡಲಿದದಾರೆ. ಅಂದು ಮಹಾಲಕ್ಷ್ಮಿ ಅನ್ನಛತ್ರ ಕಟ್ಟಡ, ಅತಿಥಿಗೃಹ ಉದ್ಘಾಟನೆ ನಡೆಯಲಿದೆ
ಕನ್ನಡಪ್ರಭ ವಾರ್ತೆ ಉಡುಪಿ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಈ ಬಾರಿ ಉಚ್ಚಿಲ ದಸರಾ ಅ. 15 ರಿಂದ 24 ರವರೆಗೆ ನಡೆಯಲಿದೆ ಎಂದು ಕ್ಷೇತ್ರದ ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್ ಹೇಳಿದ್ದಾರೆ. ಉಚ್ಚಿಲ ಮೊಗವೀರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಅ. 15ರಂದು ಶಾಲಿನಿ ಡಾ. ಜಿ.ಶಂಕರ್ ಸಭಾಂಗಣದಲ್ಲಿ ನವದುರ್ಗೆಯರ ಮತ್ತು ಶಾರದಾ ದೇವಿಯ ಪ್ರತಿಷ್ಠಾಪನೆಯೊಂದಿಗೆ ಉಚ್ಚಿಲ ದಸರಾಕ್ಕೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಚಾಲನೆ ನೀಡಲಿದದಾರೆ. ಅಂದು ಮಹಾಲಕ್ಷ್ಮಿ ಅನ್ನಛತ್ರ ಕಟ್ಟಡ, ಅತಿಥಿಗೃಹ ಉದ್ಘಾಟನೆ ನಡೆಯಲಿದೆ ಎಂದರು. ಗಣ್ಯರ ಉಪಸ್ಥಿತಿಯಲ್ಲಿ ದೇವಿಗೆ ಭೂತಾಯಿ ಮೀನಿನ ಬಂಗಾರದ ಹಾರದ, ಬೆಳ್ಳಿ ಕಿರೀಟ, ಬೆಳ್ಳಿ ತಂಬೂರಿ ಸಮರ್ಪಣೆ ನಡೆಯಲಿದೆ. ಈ ಬಾರಿ ದಸರಾ ವಿಶೇಷ ಆಕರ್ಷಣೆಯಾಗಿ ಫಲಪುಷ್ಪ ಪ್ರದರ್ಶನ, ಪುಸ್ತಕ ಮೇಳ, ಮೀನುಗಾರಿಕೆ ಯೋಜನೆಗಳ ಮಾಹಿತಿ, ಮೀನುಗಾರಿಕಾ ಪರಿಕರಗಳ ಪ್ರದರ್ಶನ, ಯುವ ದಸರಾ ಕಾರ್ಯಕ್ರಮಗಳು, ಶತವೀಣಾವಲ್ಲರಿ, ಧಾರ್ಮಿಕ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು. ಕೊನೆಯ ದಿನ ಶೋಭಾಯಾತ್ರೆಯು ದೇವಳದಿಂದ ಪ್ರಾರಂಭಗೊಂಡು ರಾ.ಹೆ. ಮೂಲಕ ಎರ್ಮಾಳು ಜನಾರ್ದನ ದೇವಳದವರೆಗೆ ಸಾಗಿ ಅಲ್ಲಿಂದ ಕೊಪ್ಪಲಂಗಡಿ ಮೂಲಕ ಕಾಪು ದೀಪಸ್ತಂಭದ ಬಳಿ ಸಮುದ್ರ ಕಿನಾರೆಯಲ್ಲಿ ನವದುರ್ಗೆ, ಶಾರದಾ ಮೂರ್ತಿಯ ಜಲಸ್ತಂಭನ ಮಾಡಲಾಗುವುದು. ಶೋಭಾಯಾತ್ರೆಯಲ್ಲಿ ವಿಶೇಷ ಆಕರ್ಷಣೆಯಾಗಿ ಅಂಬಾರಿ ಹೊತ್ತ ಕೃತಕ ಆನೆ, ಭಜನಾ ತಂಡಗಳು, ಹುಲಿವೇಷ, ವಿವಿಧ ವೇಷಭೂಷಣ ಇರಲಿದೆ. ಸಮುದ್ರ ಕಿನಾರೆಯ ಬಳಿ ಕಾಶಿಯ ಅರ್ಚಕರಿಂದ ಗಂಗಾರತಿ ಬೆಳಗುವ ಕಾರ್ಯವೂ ನಡೆಯಲಿದೆ ಎಂದು ಹೇಳಿದರು. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ , ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ. ಅಮೀನ್, ಕ್ಷೇತ್ರಾಡಳಿತ ಸಮಿತಿ‌ ಅಧ್ಯಕ್ಷ ವಾಸುದೇವ ಸಾಲ್ಯಾನ್, ಮಹಿಳಾ ಘಟಕ ಅಧ್ಯಕ್ಷೆ ಉಷಾ ರಾಣಿ, ಕಾಪು ನಾಲ್ಕು ಪಟ್ಣ ಅಧ್ಯಕ್ಷೆ ಸುಗುಣ ಕರ್ಕೇರ, ಉಪಾಧ್ಯಕ್ಷ ಸುಭಾಶ್ಚಂದ್ರ, ಕಾರ್ಯದರ್ಶಿ ಸುಧಾಕರ್ ಕುಂದರ್, ಅನಿಲ್ ಕುಮಾರ್, ಶಂಕರ್ ಸಾಲ್ಯಾನ್, ದಿನೇಶ್ ಮೂಳೂರು, ದಿನೇಶ್ ಎರ್ಮಾಳು, ಸತೀಶ್ ಬಾರ್ಕೂರು, ಮನೋಜ್ ಕಾಂಚನ್, ರವೀಂದ್ರ ಶ್ರೀಯಾನ್, ಸತೀಶ್ ಅಮೀನ್ ಬಾರ್ಕೂರು, ದೇವಳದ ಮುಖ್ಯ ಪ್ರಬಂಧಕ ಸತೀಶ್ ಅಮೀನ್ ಮಟ್ಟು ಇದ್ದರು.