ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ 16.85 ಕೋಟಿ ರು. ಲಾಭ

| Published : Apr 09 2024, 12:52 AM IST

ಸಾರಾಂಶ

ಸಹಕಾರ ಕ್ಷೇತ್ರದಲ್ಲಿ 106 ವರ್ಷಗಳ ಸಾರ್ಥಕ ಸೇವೆ ನೀಡುತ್ತಿರುವ ಸಂಘವು 2023-24 ವರ್ಷಾಂತ್ಯಕ್ಕೆ 18.397 ಸದಸ್ಯರಿಂದ 4.77 ಕೋಟಿ ರು. ಪಾಲು ಬಂಡವಾಳ ಹೊಂದಿದೆ. 506.64 ಕೋಟಿ ರು. ಠೇವಣಿ ಸಂಗ್ರಹಿಸಿದ್ದು, ಶೇ.12.23 ಏರಿಕೆ ಕಂಡಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ರಾಜ್ಯದ ಪ್ರತಿಷ್ಠಿತ ಸಹಕಾರ ಸಂಸ್ಥೆಯಾದ ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು 2023-24ನೇ ಸಾಲಿನಲ್ಲಿ 2,378.78 ಕೋಟಿ ರು. ವಾರ್ಷಿಕ ವ್ಯವಹಾರ ನಡೆಸಿ, 16.85 ಕೋಟಿ ರು. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಹಕಾರ ಕ್ಷೇತ್ರದಲ್ಲಿ 106 ವರ್ಷಗಳ ಸಾರ್ಥಕ ಸೇವೆ ನೀಡುತ್ತಿರುವ ಸಂಘವು 2023-24 ವರ್ಷಾಂತ್ಯಕ್ಕೆ 18.397 ಸದಸ್ಯರಿಂದ 4.77 ಕೋಟಿ ರು. ಪಾಲು ಬಂಡವಾಳ ಹೊಂದಿದೆ. 506.64 ಕೋಟಿ ರು. ಠೇವಣಿ ಸಂಗ್ರಹಿಸಿದ್ದು, ಶೇ.12.23 ಏರಿಕೆ ಕಂಡಿದೆ. 400.68 ಕೋಟಿ ರು. ಮುಂಗಡ ನೀಡಿದೆ. 84.40 ಕೋಟಿ ರು.ಗಳ ನಿಧಿಗಳಿದ್ದು, 591.05 ಕೋಟಿ ರು. ದುಡಿಯುವ ಬಂಡವಾಳ ಹೊಂದಿದೆ. ಪ್ರಸ್ತುತ ಸಂಘವು 11 ಶಾಖೆಗಳನ್ನು ಹೊಂದಿದ್ದು, ಈ ಪೈಕಿ 8 ಶಾಖೆಗಳು ಸ್ವಂತ ನಿವೇಶನ ಹೊಂದಿವೆ. ಮುಂದೆ ಜಿಲ್ಲೆಯ ಇತರ ಭಾಗಗಳಲ್ಲಿಯೂ ಶಾಖೆಯನ್ನು ವಿಸ್ತರಿಸಲು ಅನುಮತಿ ಪಡೆಯಲಾಗಿದೆ ಎಂದು ಅಧ್ಯಕ್ಷರು ಹೇಳಿದರು.

ಸಂಘವು ‘ಚೇತನಾ’ ಮೊಬೈಲ್ ಆ್ಯಪ್ ಮೂಲಕ ಗ್ರಾಹಕರು ಹಣ ವರ್ಗಾವಣೆ, ಆರ್ ಡಿ ಹಾಗೂ ಸಾಲ ಖಾತೆಗಳಿಗೆ ಹಣ ಪಾವತಿಸಬಹುದಾಗಿದೆ. ಸೇಫ್ ಲಾಕರ್, ಇ-ಸ್ಟಾಂಪಿಂಗ್, ಪಾನ್ ಕಾರ್ಡ್, ನೆಪ್ಟ್/ಆರ್ಟಿಜಿಎಸ್ ಸೇವೆ, ಮನಿ ಟ್ರಾನ್ಸ್‌ಫ‌ರ್, ಲಂಬಾರ್ಡ್ ಆರೋಗ್ಯ ಕಾರ್ಡ್, ಮಣಿಪಾಲ ಆರೋಗ್ಯ ಕಾರ್ಡ್, ಆರೋಗ್ಯ ವಿಮೆ, ಸಾಮಾನ್ಯ ವಿಮೆ, ಜಿರೋ ಬ್ಯಾಲೆನ್ಸ್ ವಿದ್ಯಾನಿಧಿ ಖಾತೆ, ಮಿಸ್‌ಕಾಲ್ ಸರ್ವಿಸ್, ಉಚಿತ ಎಸ್.ಎಂ.ಎಸ್ ಸೌಲಭ್ಯ ನೀಡುತ್ತಿದೆ.

* 600 ಕೋಟಿ ರು. ಠೇವಣಿ ಗುರಿ

ಮುಂದಿನ ವರದಿ ವರ್ಷದಲ್ಲಿ 600 ಕೋಟಿ ರು. ಠೇವಣಿ, 500 ಕೋಟಿ ರು. ಮುಂಗಡ ನೀಡುವ ಗುರಿ, ನಗರದಲ್ಲಿ 1 ಎಕ್ರೆ ಸ್ವಂತ ಜಮೀನಿನಲ್ಲಿ 10 ಕೋಟಿ ರು. ವೆಚ್ಚದಲ್ಲಿ ‘ಸಹಕಾರ ಸೌಧ’ ನಿರ್ಮಾಣದ ಯೋಜನೆ ಇದೆ ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಜಾರ್ಜ್ ಸಾಮ್ಯುಯೆಲ್, ನಿರ್ದೇಶಕರಾದ ಸಂಜೀವ ಕಾಂಚನ್, ಪುರುಷೋತ್ತಮ ಪಿ. ಶೆಟ್ಟಿ, ಉಮಾನಾಥ ಎಲ್., ವಿನಯ ಕುಮಾರ್ ಟಿ.ಎ., ಪದ್ಮನಾಭ ನಾಯಕ್, ಸೈಯ್ಯದ್ ಅಬ್ದುಲ್ ರಜಾಕ್, ಸದಾಶಿವ ನಾಯ್ಕ, ಜಯಾ ಶೆಟ್ಟಿ, ಗಾಯತ್ರಿ ಎಸ್. ಭಟ್, ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್, ಸಹಾಯಕ ಮಹಾಪ್ರಬಂಧಕ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.ರಾಜ್ಯ - ರಾಷ್ಟ್ರ ಪ್ರಶಸ್ತಿಗಳ ಹೆಮ್ಮೆ

ಸತತವಾಗಿ 2 ಬಾರಿ ರಾಷ್ಟ್ರ ಪ್ರಶಸ್ತಿ, 8 ಬಾರಿ ರಾಜ್ಯ ಮಟ್ಟದ ಪ್ರಶಸ್ತಿ, 17 ಬಾರಿ ಅವಿಭಜಿತ ದ.ಕ. ಜಿಲ್ಲಾ ಪ್ರಶಸ್ತಿಗಳನ್ನು ಪಡೆದು ಯಶಸ್ವಿ ಕ್ರೆಡಿಟ್ ಸೊಸೈಟಿಯಾಗಿ ಗುರುತಿಸಿಕೊಂಡಿರುವ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಕೇವಲ ವ್ಯಾವಹಾರಿಕ ದೃಷ್ಟಿಯನ್ನು ಇಟ್ಟುಕೊಳ್ಳದೆ, ಶಿಕ್ಷಣ, ಆರೋಗ್ಯ ಮುಂತಾದ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಿಗೆ ವಾರ್ಷಿಕ ಸುಮಾರು 20 ಲಕ್ಷ ರು.ಗಳನ್ನು ಮೀಸಲಿಟ್ಟಿದೆ.