ಸಾರಾಂಶ
ಕನ್ನಡಪ್ರಭ ಅಜ್ಜಂಪುರ
ಪ್ರಸಕ್ತ ಸಾಲಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ₹12.34 ಲಕ್ಷ ಲಾಭ ಗಳಿಸಿದೆ ಎಂದು ಪಟ್ಟಣದ ವಿಠ್ಠಲ ರುಕ್ಮಾಯಿ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಂಘದ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷರಾದ ಎಸ್. ನಂಜುಂಡಪ್ಪನವರು ಉದ್ಘಾಟಿಸಿ ಮಾತನಾಡಿದರು.ಸಂಘವು 3,034 ಸದಸ್ಯರನ್ನು ಹೊಂದಿದ್ದು ₹2.27 ಕೋಟಿ ಠೇವಣಿ ಹೊಂದಿದೆ. 100 ಸದಸ್ಯರಿಗೆ ಹೈನುಗಾರಿಕೆಗಾಗಿ ₹28 ಲಕ್ಷ, 76 ಸದಸ್ಯರಿಗೆ ವ್ಯಾಪಾರ ಉದ್ದೇಶಕ್ಕಾಗಿ ₹1.43 ಲಕ್ಷ, ಐವರು ಸದಸ್ಯರಿಗೆ ₹3.97 ಲಕ್ಷ ಗೃಹ ಸಾಲ, 1,318 ರೈತರಿಗೆ ₹16.86 ಕೋಟಿ, ಹಾಗೂ ಕೆ.ಸಿ.ಸಿ ಸಾಲ ವಿತರಿಸಲಾಗಿದೆ ಎಂದರು. ನಿರ್ದೇಶಕ ಬಿ. ರಂಗಸ್ವಾಮಿ ಮಾತನಾಡಿ, ‘ಸಂಘದಲ್ಲಿ ಅಧಿಕಾರ ದುರುಪಯೋಗ ಆರೋಪದಲ್ಲಿ ಸದಸ್ಯ ಜಿ. ಸಿದ್ರಾಮಪ್ಪ ಅವರ ಸದಸ್ಯತ್ವ ರದ್ದುಗೊಳಿಸಲಾಗಿದೆ. ಕರ್ತವ್ಯ ಲೋಪದ ಕಾರಣ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಬಿ.ಟಿ ತಿಪ್ಪೇಶಪ್ಪ ಅವರಿಗೆ ಕಡ್ಡಾಯ ನಿವೃತ್ತಿ ನೀಡಲಾಗಿದೆ ಎಂದು ತಿಳಿಸಿದರು.ಸಂಘದಲ್ಲಿ 930 ಕ್ಕೂ ಹೆಚ್ಚು ಸದಸ್ಯರು ಕಡಿಮೆ ಷೇರು ಹಣ ಹೊಂದಿದ್ದಾರೆ. ಅವರೆಲ್ಲರೂ ಷೇರು ಹಣ ₹1 ಸಾವಿರಕ್ಕೆ ಸರಿದೂಗಿಸುವಷ್ಟು ಹಣ ಪಾವತಿಸಬೇಕು ಎಂದು ಮನವಿ ಮಾಡಿದರು. ಷೇರುದಾರರಾದ ಕೆ. ಶಾಂತಕುಮಾರ್ ಧಾರ್ಮಿಕ ನಿಧಿ ವೆಚ್ಚದ ಬಗ್ಗೆ ಮಾತನಾಡಿದರು. ಎಸ್ ಟಿ. ಸಿದ್ದಪ್ಪ, ಕೃಷ್ಣ ಮೂರ್ತಿರವರು ರೈತರು ಆಕಸ್ಮಿಕವಾಗಿ ಮರಣ ಹೊಂದಿದ್ದಲ್ಲಿ ಅವರಿಗೆ ವಿಮೆ ನೀಡುವ ಬಗ್ಗೆ ಚರ್ಚಿಸಿದರು. ಮುಂದಿನ ಸಾಲಿನಲ್ಲಿ ಹೆಚ್ಚುವರಿ ಸಾಲ ಪಡೆಯಲು ನಾಲ್ಕು ಕೋಟಿ ರೂ ಗೆ ಪ್ರಸ್ತಾವನೆ ಕಳುಹಿಸಲು ತೀರ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ಟಿ.ಟಿ ತಿಪ್ಪೇಶಪ್ಪ, ನಿರ್ದೇಶಕ ಗಿರೀಶ್ ಚೌವ್ಹಾಣ್, ಮಂಜುನಾಥ್ , ಸಿ. ರಂಗಸ್ವಾಮಿ, ಎಸ್ ಶಿವಾನಂದ್, ಕಾರ್ಯ ನಿರ್ವಾಹಣಾಧಿಕಾರಿ ಪಿ.ಆರ್ ಸತೀಶ್ ಮಾತನಾಡಿದರು.
ನಿರ್ದೇಶಕ ಜಿ.ಜಿ ತಿಪ್ಪೇಶ್, ನಿರ್ದೇಶಕಿ ಕಾಂತಮಣಿ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಸತೀಶ್, ಸಂಘದ ವಾಣಿ, ಪುಟ್ಟರಾಣಿ, ಭಾಗ್ಯಶ್ರೀ, ಪ್ರವೀಣ್, ಗಗನ್, ಎಸ್. ಜಾದವ್, ಅಕ್ಬರ್ ಭಾಗವಹಿಸಿದ್ದರು.