ಸಾರಾಂಶ
ಕನ್ನಡಪ್ರಭ ವಾರ್ತೆ ಚವಡಾಪುರ
ಅಫಜಲ್ಪುರ ತಾಲೂಕಿನ ಸುಕ್ಷೇತ್ರ ಚಿನ್ಮಯಗಿರಿ-ಚವಡಾಪುರದ ಮಹಾಂತೇಶ್ವರ ಮಠದ ಜಾತ್ರಾ ಮಹೋತ್ಸವದ ನಿಮಿತ್ತ ಮಠದ ಹಿರಿಯ ಶ್ರೀಗಳಾದ ಸಿದ್ದರಾಮ ಶಿವಾಚಾರ್ಯರ ಸಾನ್ನಿಧ್ಯದಲ್ಲಿ 16 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.ಸಾಮೂಹಿಕ ವಿವಾಹದ ಕುರಿತು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ಓರ್ವ ಹೆಣ್ಣು ಮಗಳ ಮದುವೆ ಮಾಡುವುದಕ್ಕೆ ಕೂಲಿ ಕಾರ್ಮಿಕರು, ರೈತ ಪಾಲಕರಿಗೆ ತುಂಬಾ ಕಷ್ಟವಾಗುತ್ತದೆ. ಅದರಲ್ಲೂ ಇಂತಹ ಭೀಕರ ಬರಗಾಲದಂತ ಪರಿಸ್ಥಿತಿಯಲ್ಲಿ ಎಲ್ಲಾ ರೀತಿಯ ಅನುಕೂಲಸ್ಥರಿಗೂ ಆರ್ಥಿಕ ಹೊರೆ ಆಗುತ್ತದೆ. ಇದನ್ನು ಮನಗಂಡು ಮಠಮಾನ್ಯಗಳು ಕೇವಲ ಧರ್ಮ ಬೋಧನೆ ಮಾಡುವುದು ಮಾತ್ರವಲ್ಲ ಇಂತಹ ಕ್ರಾಂತಿಕಾರಿ ಸಾಮಾಜಿಕ ಕೆಲಸಗಳನ್ನು ಮಾಡಬೇಕೆಂದು ಮಹಾಂತ ಮಠದ ಶ್ರೀಗಳು ಸಾಮೂಹಿಕ ಮದುವೆ ಮಾಡುವ ನಿರ್ಧಾರ ಮಾಡಿದ್ದು ನಿಜಕ್ಕೂ ಶ್ಲಾಘನೀಯ ಕೆಲಸ, ಸಾಮೂಹಿಕ ಮದುವೆ ಏರ್ಪಡಿಸಿದರೂ ಕೂಡ ಸಂಪ್ರದಾಯಕ್ಕೆ ಕುಂದು ಬಾರದಂತೆ ಎಲ್ಲಾ ಸಂಪ್ರದಾಯಗಳನ್ನು ಅನುರಿಸಿ ವಧುವರರ ಅಕ್ಷತಾರೋಪಣ ನಡೆಸಿಕೊಟ್ಟಿದ್ದು ನಿಜಕ್ಕೂ ಮಾದರಿ ಕಾರ್ಯವಾಗಿದೆ ಎಂದರು.
ಮಠದ ಹಿರಿಯ ಶ್ರೀಗಳಾದ ಸಿದ್ದರಾಮ ಶಿವಾಚಾರ್ಯರು ಮಾತನಾಡಿ, ಮಹಾಂತನ ಸನ್ನಿಧಿಯಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ 16 ಜೋಡಿಗಳು ಅದೃಷ್ಟವಂತರಾಗಿದ್ದೀರಿ, ಸತಿಪತಿಗಳೊಂದಾಗಿ ಸಾಮರಸ್ಯದ ಜೀವನ ನಡೆಸಿ ಎಲ್ಲರಿಗೂ ಮಾದರಿಯಾಗಿ ಎಂದು ಆಶೀರ್ವದಿಸಿದರು.ಮಠದ ಪೀಠಾಧಿಪತಿ ವೀರಮಹಾಂತ ಶಿವಾಚಾರ್ಯರು ಮಾತನಾಡಿ, ನಮ್ಮ ಮಠದ ಭಕ್ತರಿಗಾಗಿ ಹತ್ತು ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ಮಠದ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ. ಈಗಾಗಲೇ ನಮ್ಮ ಮಠದ ಶಿಕ್ಷಣ ಸಂಸ್ಥೆಯಿಂದ ಗುಣಮಟ್ಟದ ಶಿಕ್ಷಣ ಕೊಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ, ಜೊತೆಗೆ ಜಾತ್ರೆಯ ವೈಭವದ ಕಳೆ ಇನ್ನಷ್ಟು ಹೆಚ್ಚಿಸುವುದರ ಜೊತೆಗೆ ಬಡವರು, ಕೂಲಿ ಕಾರ್ಮಿಕರ ಹೆಣ್ಣು ಮಕ್ಕಳು, ಅನಾಥ ಹೆಣ್ಣು ಮಕ್ಕಳಿಗೆ ತಂದೆ, ತಾಯಿಯ ಸ್ಥಾನದಲ್ಲಿ ನಿಂತು ಅವರ ಮದುವೆ ಮಠದ ವತಿಯಿಂದಲೇ ಉಚಿತವಾಗಿ ನಡೆಸಿಕೊಡುವ ಕಾರ್ಯಕ್ಕೆ ಕಳೆದ ಕೆಲ ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಮಠದ ವತಿಯಿಂದ ನಡೆಯುತ್ತಿರುವ ಸಾಮೂಹಿಕ ವಿವಾಹಕ್ಕೆ ಎಲ್ಲರೂ ಸಹಕಾರ ಮಾಡುತ್ತಿರುವುದು ನಮ್ಮ ಉತ್ಸಾಹ ಇನ್ನಷ್ಟು ಹೆಚ್ಚುವಂತೆ ಮಾಡಿದೆ. ಈ ಬಾರಿ 16 ಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟಿವೆ ಎಂದು ಮಾಹಿತಿ ನೀಡಿದರು.
ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ ಹೊತಪೇಟ ಮಠದ ಶಿವಲಿಂಗ ಮಹಾರಾಜ್, ಮಾಶಾಳದ ಮರುಳಾರಾಧ್ಯ ಶಿವಾಚಾರ್ಯರು, ಅತನೂರಿನ ಗುರುಬಸವ ಶಿವಾಚಾರ್ಯರು, ಚಿದಾನಂದ ಸಾಧು ಮಹಾರಾಜ, ಅಮೋಘಸಿದ್ದ ಮಹಾರಾಜ, ವನಜಾ ಮಾಲೀಕಯ್ಯ ಗುತ್ತೇದಾರ, ಮಲ್ಲಿನಾಥ ಪಾಟೀಲ್, ಶಿವಕಾಂತ ಮಹಾಜನ್, ಯಲ್ಲನಗೌಡ ದಣ್ಣೂರ, ಮಹಾಂತಗೌಡ ಪೊಲೀಸಪಾಟೀಲ, ಮಹಾಂತಪ್ಪ ಅವರಾದ, ಗುರಣ್ಣ ಲಿಂಗಶೆಟ್ಟಿ, ದಯಾನಂದ ಬಂದರವಾಡ, ಬೀರಣ್ಣ ಕಲ್ಲೂರ, ವಿದ್ಯಾಧರ ಮಂಗಳೂರೆ, ಮಲ್ಲಿಕಾರ್ಜುನ ದುತ್ತರಗಾಂವ, ದೇವೀಂದ್ರ ಜಮಾದಾರ, ಶಿವು ಘಾಣೂರ, ಶಿವು ಕಲ್ಲೂರ, ಅಕ್ಕಮ್ಮ ಕಂಟೇಗೋಳ, ಶರಣು ಕಲ್ಬುರ್ಗಿ, ಸಂಗೀತಾ ಬಳೂರ್ಗಿ, ಸುರೇಶ ಪೂಜಾರಿ ಸೇರಿದಂತೆ ಮಠದ ಭಕ್ತರು, ವಧುವರರ ಬಂಧುಮಿತ್ರರು ಇದ್ದರು.