ಕೆರೆಗಳಿಗೆ ನೀರು ಹರಿಸಿ ಎಂಬ ಧರಣಿಗೆ 160 ದಿನ

| Published : Nov 26 2024, 12:48 AM IST

ಕೆರೆಗಳಿಗೆ ನೀರು ಹರಿಸಿ ಎಂಬ ಧರಣಿಗೆ 160 ದಿನ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಜೆಜಿ ಹಳ್ಳಿ ಹೋಬಳಿಯ ಕೆರೆಗಳಿಗೆ ನೀರು ಹರಿಸಿ ಎಂದು ನಡೆಯುತ್ತಿರುವ ಪ್ರತಿಭಟನೆ 160ನೇ ದಿನ ತಲುಪಿದ್ದು ಸೋಮವಾರ ಧರಣಿ ನಿರತರನ್ನು ಉದ್ದೇಶಿಸಿ ರೈತ ಮುಖಂಡ ಕೆ.ಟಿ. ತಿಪ್ಪೇಸ್ವಾಮಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಜೆಜಿ ಹಳ್ಳಿ ಹೋಬಳಿಯ ಗಾಯಿತ್ರಿ ಜಲಾಶಯ ಸೇರಿದಂತೆ 16 ಕೆರೆಗಳಿಗೆ ನೀರು ತುಂಬಿಸಬೇಕು ಎಂದು ನಡೆಸುತ್ತಿರುವ ಧರಣಿ 160ನೇ ದಿನಕ್ಕೆ ಕಾಲಿಟ್ಟಿದೆ.

ಧರಣಿ ನಿರತರನ್ನು ಉದ್ದೇಶಿಸಿ ರೈತಸಂಘದ ತಾಲೂಕು ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವಂತೆ ಸುಮಾರು 5 ತಿಂಗಳಿಗೂ ಹೆಚ್ಚು ಕಾಲ ವಿವಿಧ ರೀತಿಯ ಚಳವಳಿ ನಡೆಸುತ್ತಾ ಸರ್ಕಾರದ ಗಮನ ಸೆಳೆದರೂ ಇದುವರೆಗೂ ಸರ್ಕಾರ ಸ್ಪಂದಿಸದೆ ಇರುವುದು ದುರಂತದ ಸಂಗತಿ. ಬರುವ ಡಿಸೆಂಬರ್ 9 ರಂದು ಚಳಿಗಾಲದ ಅಧಿವೇಶನ ಪ್ರಾರಂಭವಾಗುವುದರಿಂದ ಸರ್ಕಾರದ ಮೇಲೆ ತೀವ್ರತರದ ಒತ್ತಡ ತರುವ ಉದ್ದೇಶದಿಂದ ಡಿ.9 ರಂದು ಹಿರಿಯೂರು ಬಂದ್ ಮಾಡುವ ಮೂಲಕ ಸರ್ಕಾರವನ್ನು ಒತ್ತಾಯಿಸಲು ತೀರ್ಮಾನಿಸಲಾಗಿದೆ.

ಬಯಲು ಸೀಮೆ ಹಿರಿಯೂರು ಇತಿಹಾಸ ತೆಗೆದು ನೋಡಿದರೆ 10 ವರ್ಷಕ್ಕೆ ಕೇವಲ ಮೂರು ವರ್ಷ ಮಾತ್ರ ಮಳೆ ಬರುತ್ತದೆ. ಉಳಿದ ಏಳು ವರ್ಷ ತಾಲೂಕು ಬರಗಾಲಕ್ಕೆ ತುತ್ತಾಗುತ್ತದೆ. ಆದ್ದರಿಂದ ಈ ಭಾಗದ ಕೆರೆಗಳನ್ನು ತುರ್ತಾಗಿ ತುಂಬಿಸಬೇಕಿದೆ. ಭದ್ರಾ ಮೇಲ್ದಂಡೆ ಯೋಜನೆಯ ಹನಿ ನೀರಾವರಿ ಕಾಮಗಾರಿ ಅವೈಜ್ಞಾನಿಕವಾಗಿದ್ದು ಇದನ್ನು ಕೂಡಲೇ ನಿಲ್ಲಿಸಬೇಕು.

ತುಮಕೂರು ಶಾಖಾ ಕಾಲುವೆ ಮೂಲಕ ಹಿರಿಯೂರು ತಾಲೂಕು ವಾಣಿವಿಲಾಸದ ಸಮೀಪದವರೆಗೂ ಮಳೆಗಾಲದಲ್ಲಿ 4 ತಿಂಗಳು ನೀರು ಹರಿಸಲಾಗುತ್ತದೆ ಎಂದು ಹೇಳುತ್ತಾ ಕಂದಾಯ ಇಲಾಖೆಯ ನಿಯಮಗಳನ್ನು ಮೀರಿ ರೈತರಿಗೆ ಯಾವುದೇ ನೋಟಿಸ್ ನೀಡದೆ ಅಕ್ರಮವಾಗಿ ಪ್ರವೇಶಿಸಿ ಪರಿಹಾರ ನೀಡದೇ ಹಗಲು ರಾತ್ರಿ ಗಿಡ, ಮರ, ಬೆಳೆ ಹಾಗೂ ಭೂಮಿಗೆ ಹಾನಿ ಮಾಡಿ ಪೊಲೀಸ್ ಬಂದೋಬಸ್ತಿನಲ್ಲಿ ರೈತರನ್ನು ಹೆದರಿಸಿ ಕಾಮಗಾರಿ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ತೀವ್ರತರದ ಹೋರಾಟ ನಡೆಯಲಿದೆ ಎಂದರು.

ರೈತ ಮುಖಂಡ ಸಿದ್ದರಾಮಣ್ಣ ಮಾತನಾಡಿ, ಪ್ರತಿ ಹಳ್ಳಿಯಿಂದಲೂ ರೈತರು ಸಂಘಟಿತರಾಗಿ ಸಾವಿರಾರು ಸಂಖ್ಯೆಯಲ್ಲಿ ಈ ಹೋರಾಟದಲ್ಲಿ ಪಾಲ್ಗೊಂಡರೆ ಸರ್ಕಾರ ಖಂಡಿತವಾಗಿಯೂ ನಮಗೆ ಸ್ಪಂದಿಸುತ್ತದೆ. ನಮ್ಮ ತಾಲೂಕಿನಲ್ಲಿ ಇರುವ ವಾಣಿವಿಲಾಸ ಜಲಾಶಯ ಇನ್ನೇನು ಕೋಡಿ ಬೀಳುವ ಹoತಕ್ಕೆ ಬಂದಿದೆ. ಆದರೆ ನಮ್ಮ ತಾಲೂಕಿನ ಜನ ನೀರಿಗಾಗಿ ಪರದಾಡುವ ಸ್ಥಿತಿ ಹಾಗೆಯೇ ಇದೆ. ಇನ್ನಾದರೂ ಜೆಜಿ ಹಳ್ಳಿ, ಕಸಬಾ, ಐಮಂಗಲ ಭಾಗದ ಮಣ್ಣಿನ ಕೆರೆಗಳಿಗೆ ನೀರು ತುಂಬಿಸಲು ಕ್ರಮ ವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಎಂಆರ್ ಈರಣ್ಣ, ಅಶ್ವತಪ್ಪ, ಈರಣ್ಣ, ಕನ್ಯಪ್ಪ, ಜಯರಾಮಪ್ಪ, ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹೇಶ್, ಮಂಜುನಾಥ್, ರಾಜಪ್ಪ, ರಾಜಕುಮಾರ್, ರಾಮಯ್ಯ, ಸಣ್ಣ ತಿಮ್ಮಣ್ಣ, ವಿರೂಪಾಕ್ಷಪ್ಪ, ರಾಜಣ್ಣ, ಸಿದ್ದಪ್ಪ, ರಮೇಶ್, ದೇವೇಗೌಡ,ಚಂದ್ರಣ್ಣ, ವಜೀರ್ ಸಾಬ್, ಮಹೇಶ್, ಕಲೀಮ್ ಸಾಬ್, ಕಾಂತಣ್ಣ, ಅನಂತಪ್ಪ ಮುಂತಾದವರು ಹಾಜರಿದ್ದರು.