ಸಾರಾಂಶ
ಚಾಮರಾಜನಗರ: ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಗಣೇಶ್ ಪ್ರಸಾದ್ ಅವರೇ ನಿಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳಿ ಅನುದಾನ ತಂದು ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್ ಸಲಹೆ ನೀಡಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ನಿರಂಜನ್‌ಕುಮಾರ್ ಅವರ ಅವಧಿಯಲ್ಲಿ ಆಗಿರುವ ಯೋಜನೆಗಳು, ಸಮುದಾಯ ಭವನಗಳನ್ನು ಉದ್ಘಾಟನೆ ಮಾಡಿದ ಮಾತ್ರಕ್ಕೆ ನಿಮ್ಮ ಕ್ಷೇತ್ರದ ಅಭಿವೃದ್ಧಿ ಆಗಲ್ಲ. ನಿರಂಜನ್‌ಕುಮಾರ್ ಅವರ ಅವಧಿಯಲ್ಲಿ 800 ಕೋಟಿ ರು. ಅನುದಾನ ಕ್ಷೇತ್ರಕ್ಕೆ ತಂದಿದ್ದರು. ನೀವೂ ಕೂಡ ನಿಮ್ಮ ಸಿದ್ದು ಅಂಕಲ್‌ಗೆ ಹೇಳಿ, ಕ್ಷೇತ್ರದ ಅಭಿವೃದ್ಧಿಗೆ 1600 ಕೋಟಿ ರು. ಅನುದಾನ ತರುವ ಮೂಲಕ ನಿಮ್ಮ ಧಮ್, ತಾಕತ್ ತೋರಿಸಬೇಕು ಎಂದು ಸವಾಲು ಹಾಕಿದರು.ತಮ್ಮ ತಾಕತ್ ತೋರಿಸಲಾಗದೆ ಹೊರಗಿನವರನ್ನು ಕರೆದುಕೊಂಡು ಬಂದು ಧಮ್ಕಿ ಹಾಕಿಸಿದ್ದೀರಿ ಎಂದು ಶಾಸಕ ಗಣೇಶ್ ಪ್ರಸಾದ್ ಹೇಳಿಕೆ ನೀಡಿರುವುದು ಸರಿಯಲ್ಲ. ಛಲವಾದಿ ನಾರಾಯಣಸ್ವಾಮಿ ಅವರು ವಿರೋಧ ಪಕ್ಷ ನಾಯಕರು, ದಲಿತ ಸಮುದಾಯದ ನಾಯಕರು. ಅವರು ಜನರಕಷ್ಟ ಕೇಳಲು ಬರಬಾರದೇ? ನೀವೇಕೆ ಪದೇ ಪದೇ ಮುಖ್ಯಮಂತ್ರಿ, ಸಚಿವರನ್ನು ಕರೆಸಿಕೊಳ್ಳುತ್ತಿದೀರಿ. ಕ್ಷೇತ್ರದ ಶಾಸಕರು ನೀವೇ ಅಲ್ಲವೇ? ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಬೇಕು ಎಂದರು.ಹಿರೀಕಾಟಿ ಗ್ರಾಮದಲ್ಲಿ ತಲತಲಾಂತರಿಂದ ದಲಿತರು ಜಮೀನಿನಲ್ಲಿ ಕೃಷಿ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಶಾಸಕ ಗಣೇಶ್‌ಪ್ರಸಾದ್ ಅವರು ಅಧಿಕಾರಿಗಳನ್ನು ಬಿಟ್ಟು ಏಕಾಏಕಿ ಕ್ರಷರ್ ನಿರ್ಮಾಣಕ್ಕೆ ದಲಿತರ ಜಮೀನಿನ ಮೇಲೆ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ, ತಾಕತ್, ಧಮ್ ಇದ್ದರೆ ಕಾಮಗಾರಿ ತಡೆಯಲಿ ಎಂದು ಹೇಳಿಕೆ ನೀಡಿದ್ದಾರೆ. ಕ್ಷೇತ್ರದ ಶಾಸಕರಾಗಿ ಇಂತಹ ಹೇಳಿಕೆ ನೀಡಿರುವುದು ಇವರಿಗೆ ಶೋಭೆ ತರುವಂತದ್ದು ಅಲ್ಲ ಎಂದರು.ಎಲ್ಲ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರದ ಅಭಿವೃದ್ಧಿ ಪಡಿಸುವುದು ಒಬ್ಬ ಶಾಸಕನ ಕರ್ತವ್ಯವಾಗಿರುತ್ತದೆ. ಆದರೆ ತಾಕತ್ ತೋರಿಸಬೇಕಾಗಿರುವುದು ಎಲ್ಲಿ? ದಲಿತ ಜಮೀನಿನ ಮೇಲೆ ರಸ್ತೆ ಮಾಡಿಸಿದ ತಕ್ಷಣ ಶಾಸಕರಿಗೆ ಧಮ್, ತಾಕತ್ತು ಜಾಸ್ತಿಯಾಗಿಬಿಡ್ತಾ ? ಶಾಸಕರು ಅರ್ಥಮಾಡಿಕೊಳ್ಳಬೇಕು ಎಂದರು. ಆಹಾರ ಇಲಾಖೆಯಲ್ಲಿ ಯಾವುದೇ ಸಿಬ್ಬಂದಿ ಇಲ್ಲ. ಕ್ಷೇತ್ರದಲ್ಲಿ ಜನಸಾಮಾನ್ಯರ ಸಂಕಷ್ಟ ಕೇಳದ ಅಧಿಕಾರಿಗಳು ಇದ್ದರೆ ದಲಿತರ ವೋಟಿನಿಂದ ಶಾಸಕರಾದ ಗಣೇಶ್ ಪ್ರಸಾದ್ ಅವರು ದಲಿತ ರೈತರ ಜಮೀನಿನ ರಸ್ತೆ ಮಾಡಲು ಹೊರಟಿದ್ದಾರೆ. ನೀವೇ ಮುಂದೆ ನಿಂತು ಆ ಜನರಿಗೆ ನ್ಯಾಯ ಕೊಡಿಸಿದರೆ ಅದು ನಿಮ್ಮ ತಾಕತ್, ಧಮ್ ಆಗುತ್ತದೆ. ದಲಿತರ ಜಮೀನನ್ನು ಕಿತ್ತುಕೊಳ್ಳಲು ನಿಮ್ಮ ಧಮ್, ತಾಕತ್ ತೋರಿಸಬೇಡಿ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನೂರು ಮಹದೇವಸ್ವಾಮಿ, ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್, ಗುಂಡ್ಲುಪೇಟೆ ಮಂಡಲ ಅಧ್ಯಕ್ಷ ಮಹದೇವಸ್ವಾಮಿ, ಮುಖಂಡರಾದ ಡಾ.ನವೀನ್‌ಮೌರ್ಯ, ವೇಣುಗೋಪಾಲ್ ಹಾಜರಿದ್ದರು.