ದಾವಣಗೆರೆಗೆ 16568 ಮೆಟ್ರಿಕ್‌ ಟನ್‌ ಯೂರಿಯಾ: ಕೇಂದ್ರಕ್ಕೆ ಮನವಿ

| Published : Aug 01 2025, 12:00 AM IST

ದಾವಣಗೆರೆಗೆ 16568 ಮೆಟ್ರಿಕ್‌ ಟನ್‌ ಯೂರಿಯಾ: ಕೇಂದ್ರಕ್ಕೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ದಾವಣಗೆರೆ ಜಿಲ್ಲೆಗೆ ಅಗತ್ಯ 16,568 ಮೆಟ್ರಿಕ್ ಟನ್ ಯೂರಿಯಾ ಪೂರೈಸುವಂತೆ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಜೆ.ಪಿ.ನಡ್ಡಾ ಅವರಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಒತ್ತಾಯಿಸಿದ್ದಾರೆ.

- ಜಿಲ್ಲೆಯಲ್ಲಿ ರಸಗೊಬ್ಬರ ಅಭಾವ: ಸಂಸದೆ ಡಾ.ಪ್ರಭಾ । ನವದೆಹಲಿಯಲ್ಲಿ ಕೇಂದ್ರ ಸಚಿವರಿಗೆ ಕಾಂಗ್ರೆಸ್ ಸಂಸದರ ನಿಯೋಗ ಮನವರಿಕೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ದಾವಣಗೆರೆ ಜಿಲ್ಲೆಗೆ ಅಗತ್ಯ 16,568 ಮೆಟ್ರಿಕ್ ಟನ್ ಯೂರಿಯಾ ಪೂರೈಸುವಂತೆ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಜೆ.ಪಿ.ನಡ್ಡಾ ಅವರಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಒತ್ತಾಯಿಸಿದರು.

ನವದೆಹಲಿಯಲ್ಲಿ ಗುರುವಾರ ಬೆಳಗ್ಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್ ಸಂಸದ ನಿಯೋಗದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ದಾವಣಗೆರೆ ಜಿಲ್ಲೆಗೆ ತುರ್ತಾಗಿ ಅಗತ್ಯ ಪ್ರಮಾಣದ ರಸಗೊಬ್ಬರ ಪೂರೈಸಲು ಮನವಿ ಅರ್ಪಿಸಿದರು.

ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ದಾವಣಗೆರೆ ಜಿಲ್ಲೆಗೆ 16,568 ಮೆಟ್ರಿಕ್ ಟನ್ ರಸಗೊಬ್ಬರವನ್ನು ಕೇಂದ್ರ ಸರ್ಕಾರ ಪೂರೈಸಬೇಕು. ಜಿಲ್ಲಾದ್ಯಂತ ಮುಂಗಾರು ಮಳೆ ಉತ್ತಮವಾಗಿದೆ. ಭದ್ರಾ ಅಣೆಕಟ್ಟೆಯಿಂದಲೂ ನಾಲೆಗಳಿಗೆ ನೀರು ಬಿಟ್ಟಿದ್ದರಿಂದ ಕೃಷಿಯಲ್ಲಿ ಈಗ ಯೂರಿಯಾದ ಅವಶ್ಯಕತೆ ಹೆಚ್ಚಾಗಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮನವಿಕೆ ಮಾಡಿದರು.

ಜಿಲ್ಲೆಯಲ್ಲಿ ಯೂರಿಯಾದ ಅಭಾವ:

ಜಿಲ್ಲೆಯಲ್ಲಿ ಯೂರಿಯಾದ ಅಭಾವ ಏರ್ಪಟ್ಟಿದೆ. 2025ರ ಮುಂಗಾರು ಹಂಗಾಮಿಗೆ ಏಪ್ರಿಲ್‌ನಿಂದ ಸೆಪ್ಟಂಬರ್‌ವರೆಗೆ ನಮ್ಮ ಜಿಲ್ಲೆಗೆ ಒಟ್ಟು 54,162 ಮೆಟ್ರಿಕ್ ಟನ್ ಯೂರಿಯಾದ ಅಗತ್ಯವಿದೆ. ಏಪ್ರಿಲ್‌ನಿಂದ ಜುಲೈವರೆಗೆ ಜಿಲ್ಲೆಗೆ ಸುಮಾರು 24,388 ಮೆಟ್ರಿಕ್ ಟನ್‌ವರೆಗೂ ಯೂರಿಯಾ ಬಂದಿದೆ. ಕ್ಷೇತ್ರದಲ್ಲಿ 37,594 ಮೆಟ್ರಿಕ್ ಟನ್ ರಸಗೊಬ್ಬರ ಅವಶ್ಯಕತೆ ಇದೆ. ನಮ್ಮ ಜಿಲ್ಲೆಯಲ್ಲಿ ಮುಂಗಾರು ಅವಧಿಗೂ ಮುನ್ನವೇ ಶುರುವಾಗಿದೆ. ಮಳೆ ಪ್ರಮಾಣ ಶೇ.41ರಷ್ಟು ಹೆಚ್ಚಾಗಿದ್ದರಿಂದ ಸಹಜವಾಗಿಯೇ ಬಿತ್ತನೆ ಪ್ರಮಾಣ ಶೇ.103ರಷ್ಟು ಹೆಚ್ಚಾಗಿದೆ. ಯೂರಿಯಾ ಬೇಡಿಕೆಯೂ ಅಂದಾಜು ಅಗತ್ಯಕ್ಕಿಂತಲೂ ಹೆಚ್ಚಾಗಿ ಕೇಳಿಬರುತ್ತಿದೆ ಎಂದು ಸಚಿವರಿಗೆ ವಿವರಿಸಿದರು.

ದಾವಣಗೆರೆ ಜಿಲ್ಲೆಗೆ ಯೂರಿಯಾದ ಅವಶ್ಯಕತೆ, ಅಗತ್ಯತೆಯನ್ನು ಮನಗಂಡು ನಮ್ಮ ಜಿಲ್ಲೆಗೆ ಬೇಕಾಗಿರುವ 16,568 ಮೆಟ್ರಿಕ್ ಟನ್ ರಸಗೊಬ್ಬರವನ್ನು ಪೂರೈಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಮೆಕ್ಕೆಜೋಳ, ಹತ್ತಿ, ಬತ್ತ ಸೇರಿದಂತೆ ಬೆಳೆಗಳಿಗೆ ಈಗ ರಸಗೊಬ್ಬರವನ್ನು ರೈತರು ಹಾಕಬೇಕಾದ ಅನಿವಾರ್ಯತೆ ಇದೆ. ಪ್ರಥಮ ಆದ್ಯತೆ ಮೇರೆಗೆ ದಾವಣಗೆರೆ ಜಿಲ್ಲೆಗೆ ಬೇಡಿಕೆ ಪ್ರಮಾಣದಲ್ಲೇ ರಸಗೊಬ್ಬರವನ್ನು ಪೂರೈಸಬೇಕು ಎಂದು ಸಂಸದೆ ಡಾ.ಪ್ರಭಾ ಮನವಿ ಮಾಡಿದರು.

ಈ ಸಂದರ್ಭ ಸಂಸದರಾದ ಬೀದರ್‌ನ ಸಾಗರ್ ಈಶ್ವರ ಖಂಡ್ರೆ, ರಾಯಚೂರಿನ ಕುಮಾರ ನಾಯ್ಕ್, ಬಳ್ಳಾರಿಯ ತುಕಾರಾಂ ನಿಯೋಗದಲ್ಲಿದ್ದರು.

- - -

-31ಕೆಡಿವಿಜಿ1.ಜೆಪಿಜಿ:

ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸೇರಿದಂತೆ ಕಾಂಗ್ರೆಸ್ ಸಂಸದರ ನಿಯೋಗ ನವದೆಹಲಿಯಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ, ಅಗತ್ಯ ರಸಗೊಬ್ಬರ ಪೂರೈಸುವಂತೆ ಒತ್ತಾಯಿಸಿತು.