ಸಾರಾಂಶ
ಧಾರವಾಡದ ಫ್ಲ್ಯಾಟ್‌ವೊಂದರಲ್ಲಿ ಮಂಗಳವಾರ ಸಂಜೆ ಹಣ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನಾ ಕಾರ್ಯವನ್ನು ಮುಕ್ತಾಯಗೊಳಿಸಿದ್ದಾರೆ. ಅಪಾರ್ಟ್‌ಮೆಂಟ್‌ನಿಂದ 17.98 ಕೋಟಿ ರು. ವಶಕ್ಕೆ ಪಡೆಯಲಾಗಿದೆ ಎಂದು ಖಚಿತಪಡಿಸಿದ್ದಾರೆ.
- 18 ಬ್ಯಾಗ್‌ಗಳಲ್ಲಿ ಹಣ ತುಂಬಿ 4 ಕಾರಿನಲ್ಲಿ ರವಾನೆ
- ಬ್ಯಾಂಕ್‌ಗೆ ಹಣ ಜಮಾ । ಹಣದ ಮೂಲ ಪತ್ತೆಗೆ ತನಿಖೆಕನ್ನಡಪ್ರಭ ವಾರ್ತೆ ಧಾರವಾಡ ನಗರದ ನಾರಾಯಣಪುರ ರಸ್ತೆಯ ಆರ್ನಾ ಅಪಾರ್ಟ್‌ಮೆಂಟ್‌ನ ಮನೆಯೊಂದರಲ್ಲಿ ಮಂಗಳವಾರ ಸಂಜೆ ಹಣ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನಾ ಕಾರ್ಯವನ್ನು ಮುಕ್ತಾಯಗೊಳಿಸಿದ್ದಾರೆ. ಅಪಾರ್ಟ್‌ಮೆಂಟ್‌ನಿಂದ 17.98 ಕೋಟಿ ರು. ವಶಕ್ಕೆ ಪಡೆಯಲಾಗಿದೆ ಎಂದು ಐಟಿ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಬುಧವಾರ ಮಧ್ಯಾಹ್ನದ ಹೊತ್ತಿಗೆ ಪರಿಶೀಲನೆ ಅಂತ್ಯಗೊಂಡಿದ್ದು, 4 ಇನ್ನೋವಾ ಕಾರುಗಳಲ್ಲಿ 18 ಬ್ಯಾಗ್‌ಗಳಲ್ಲಿ ಹಣವನ್ನು ಹುಬ್ಬಳ್ಳಿಯ ಎಸ್‌ಬಿಐ ಕೇಶ್ವಾಪುರ ಶಾಖೆಗೆ ಜಮಾ ಮಾಡಲಾಗಿದೆ. ಪರಿಶೀಲನೆ ವೇಳೆ ₹17.98 ಕೋಟಿ ನಗದು ಪತ್ತೆಯಾಗಿದೆ.ಅಕ್ರಮ ಮದ್ಯ ಸಂಗ್ರಹದ ದೂರಿನ ಹಿನ್ನೆಲೆಯಲ್ಲಿ ಮನೆಯಲ್ಲಿ ಪರಿಶೀಲನೆ ವೇಳೆ ಕಂತೆ ಕಂತೆ ಹಣ ಪತ್ತೆಯಾಗಿತ್ತು. ಸಿಕ್ಕ ಹಣ ₹10 ಲಕ್ಷಕ್ಕಿಂತ ಹೆಚ್ಚಿರುವ ಕಾರಣ ಪ್ರಕರಣವನ್ನು ಐಟಿ ಇಲಾಖೆಗೆ ವರ್ಗಾಯಿಸಲಾಗಿತ್ತು. ಐಟಿ ಇಲಾಖೆಯ 8 ಮಂದಿ ಅಧಿಕಾರಿಗಳು ಪರಿಶೀಲನಾ ಕಾರ್ಯ ಕೈಗೊಂಡಿದ್ದರು.
ಬಸವರಾಜ ದತ್ತುನವರ ಎಂಬವರ ಮನೆ ಇದಾಗಿದ್ದು, ಅವರು ಖ್ಯಾತ ಗುತ್ತಿಗೆದಾರರೊಬ್ಬರ ಖಾತೆಗಳನ್ನು ನಿರ್ವಹಿಸುತ್ತಿದ್ದರು. ಹೀಗಾಗಿ, ಅಲ್ಲಿಯೇ ಸಮೀಪದಲ್ಲಿದ್ದ ಆ ಗುತ್ತಿಗೆದಾರನ ಕಚೇರಿಯಲ್ಲೂ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹಣದ ಮೂಲ ಪತ್ತೆಗೆ ತನಿಖೆ ಮುಂದುವರಿದಿದೆ.ಇದು ಚುನಾವಣೆಗೆ ಬಳಕೆ ಮಾಡಲು ತಂದಿರುವ ಹಣ. ಧಾರವಾಡ ಹಾಗೂ ಬೆಳಗಾವಿ ವ್ಯಾಪ್ತಿಯಲ್ಲಿ ಹಣ ವಿತರಿಸಲು ತಂದಿಡಲಾಗಿತ್ತು ಎಂಬ ಮಾತುಗಳು ಸ್ಥಳೀಯರಿಂದ ಕೇಳಿ ಬರುತ್ತಿವೆ.