175 ಕೋಟಿ ರು. ವೆಚ್ಚದ ಯೋಜನಾ ವರದಿ ಸರ್ಕಾರಕ್ಕೆ ಸಲ್ಲಿಸಲು ನಿರ್ಣಯ

| Published : Jan 07 2025, 12:15 AM IST

175 ಕೋಟಿ ರು. ವೆಚ್ಚದ ಯೋಜನಾ ವರದಿ ಸರ್ಕಾರಕ್ಕೆ ಸಲ್ಲಿಸಲು ನಿರ್ಣಯ
Share this Article
  • FB
  • TW
  • Linkdin
  • Email

ಸಾರಾಂಶ

ಪರಿಹಾರವಾಗಿ ಪ್ರತಿ ಚದರ ಅಡಿಗೆ ಕನಿಷ್ಠ 2600 ರು. ನೀಡಬೇಕು. ರಸ್ತೆ ಅಗಲೀಕರಣ ಮುನ್ನಾ ಭೂ ಮತ್ತು ಕಟ್ಟಡ ಮಾಲೀಕರ ಸಭೆ ಕರೆದು ಮುಕ್ತ ಚರ್ಚೆ ನಡೆಸಿದ ನಂತರ ಅಗಲೀಕರಣ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಶಾಸಕ ಉದಯ್ ಮಾಡಿದ ಸಲಹೆಯನ್ನು ಸಭೆ ಅನುಮೋದಿಸಿತು.

ಕನ್ನಡಪ್ರಭ ವಾರ್ತೆ ಮದ್ದೂರು

ಪೇಟೆಬೀದಿಯ ರಸ್ತೆ ಅಗಲೀಕರಣ ಕುರಿತಂತೆ 175 ಕೋಟಿ ರು. ವೆಚ್ಚದ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಸೋಮವಾರ ನಡೆದ ಪುರಸಭೆ ವಿಶೇಷ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.

ಪುರಸಭೆ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಅಧ್ಯಕ್ಷರಾದ ಕೋಕಿಲ ಅರುಣ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಟ್ಟಣದ ಪೇಟೆ ಬೀದಿಯ ಕೊಲ್ಲಿ ವೃತ್ತದಿಂದ ಪ್ರವಾಸಿ ಮಂದಿರ ವೃತ್ತದವರೆಗೆ ಅಗಲೀಕರಣಗೊಳಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಪೇಟೆ ಬೀದಿ ರಸ್ತೆ ಸಾಕಷ್ಟು ಕಿರಿದಾಗಿದೆ. ಅಲ್ಲದೆ ಪುಟ್ ಪಾತ್ ಮೇಲೆ ಅಕ್ರಮ ಅಂಗಡಿಗಳು ತಲೆಯೆತ್ತಿರುವುದರಿಂದ ಜನ ಮತ್ತು ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಹೀಗಾಗಿ ಭವಿಷ್ಯದ ದೃಷ್ಟಿಯಿಂದ ರಸ್ತೆಯನ್ನು ಶೀಘ್ರ ಅಗಲೀಕರಣ ಮಾಡುವುದೇ ಸೂಕ್ತ ಮಾರ್ಗ ಎಂದು ಶಾಸಕ ಕೆ.ಎಂ.ಉದಯ್ ಸಭೆಯಲ್ಲಿ ಮಾಡಿದ ಸಲಹೆಯನ್ನು ಸದಸ್ಯರು ಪಕ್ಷಾತೀತವಾಗಿ ಅನುಮೋದಿಸಿದರು.

ರಸ್ತೆಯನ್ನು ಕನಿಷ್ಠ 100 ಅಡಿ ಅಗಲೀಕರಣ ಮಾಡಬೇಕು, ಜೊತೆಗೆ ರಸ್ತೆಯ ಎರಡೂ ಬದಿಗಳಲ್ಲಿ ಪುಟ್ ಪಾತ್ ನಿರ್ಮಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಅಗಲೀಕರಣದಲ್ಲಿ ಕಟ್ಟಡ ಮತ್ತು ಭೂಮಿ ಕಳೆದುಕೊಳ್ಳುವ ಮಾಲೀಕರಿಗೆ ಪ್ರತಿ ಚದರ ಅಡಿಗೆ ಸರ್ಕಾರ ನಿಗದಿಪಡಿಸುವ ದರಕ್ಕಿಂತ ಹೆಚ್ಚಿನ ಪರಿಹಾರ ನೀಡುವಂತೆ ಉಪಾಧ್ಯಕ್ಷ ಟಿ.ಆರ್.ಪ್ರಸನ್ನ ಕುಮಾರ್, ಸದಸ್ಯರಾದ ಎಂ.ಐ.ಪ್ರವೀಣ್ , ಎಂ. ಬಿ. ಸಚಿನ್, ಮಹೇಶ್ ಸೇರಿದಂತೆ ಹಲವು ಸದಸ್ಯರು ಆಗ್ರಪಡಿಸಿದರು.

ಪರಿಹಾರವಾಗಿ ಪ್ರತಿ ಚದರ ಅಡಿಗೆ ಕನಿಷ್ಠ 2600 ರು. ನೀಡಬೇಕು. ರಸ್ತೆ ಅಗಲೀಕರಣ ಮುನ್ನಾ ಭೂ ಮತ್ತು ಕಟ್ಟಡ ಮಾಲೀಕರ ಸಭೆ ಕರೆದು ಮುಕ್ತ ಚರ್ಚೆ ನಡೆಸಿದ ನಂತರ ಅಗಲೀಕರಣ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಶಾಸಕ ಉದಯ್ ಮಾಡಿದ ಸಲಹೆಯನ್ನು ಸಭೆ ಅನುಮೋದಿಸಿತು.

ಪಟ್ಟಣದ ಒಳಚರಂಡಿ ಮತ್ತು ಕೊಳವೆ ಮಾರ್ಗಗಳ ಎರಡನೇ ಹಂತದ ಕಾಮಗಾರಿಗಳಲ್ಲಿ ಸಾಕಷ್ಟು ಲೋಪಗಳು ಉಂಟಾಗಿವೆ. ಪುರಸಭೆಯ ಜನಪ್ರತಿನಿಧಿಗಳ ಅಧಿಕಾರ ಇಲ್ಲದ ವೇಳೆ ಮಂಡಳಿ ಅಧಿಕಾರಿಗಳು ಕಾಮಗಾರಿಗಳನ್ನು ನಡೆಸಿದ್ದಾರೆ ಎಂದು ಸದಸ್ಯ ಸಚಿನ್ ಗಂಭೀರ ಆರೋಪ ಮಾಡಿದರು.

ಕಾಮಗಾರಿಗಳ ಕುರಿತಂತೆ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಇಇ ನದಾಫ್ ಪುರಸಭೆಗೆ ಸಲ್ಲಿಸಿರುವ ದಾಖಲಾತಿಗಳಲ್ಲೂ ಸಹ ಲೋಪ ದೋಷಗಳು ಇವೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಕಾಮಗಾರಿಗಳಲ್ಲಿ ಅವ್ಯವಹಾರ ನಡೆಸಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷ ಟಿ.ಆರ್. ಪ್ರಸನ್ನ ಕುಮಾರ್ , ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸಿದ್ದರಾಜು, ಮಾಜಿ ಅಧ್ಯಕ್ಷ ಸುರೇಶ್ ಕುಮಾರ್,ಸದಸ್ಯರಾದ ವನಿತಾ, ಲತಾ ರಾಮು, ಸುಬ್ರೀನ್ ತಾಜ್, ಕಮಲ ನಾಥ್, ಪ್ರಿಯಾಂಕಾ ಅಪ್ಪು ಗೌಡ, ಮುಖ್ಯ ಅಧಿಕಾರಿ ಮೀನಾಕ್ಷಿ ಸಭೆಯಲ್ಲಿ ಭಾಗವಹಿಸಿದ್ದರು.