ಭದ್ರಾ ಮೇಲ್ದಂಡೆಗೆ ಕೇಂದ್ರದ ನೆರವು 1754 ಕೋಟಿ ರು. ಖೋತಾ?

| Published : Nov 07 2024, 12:00 AM IST

ಭದ್ರಾ ಮೇಲ್ದಂಡೆಗೆ ಕೇಂದ್ರದ ನೆರವು 1754 ಕೋಟಿ ರು. ಖೋತಾ?
Share this Article
  • FB
  • TW
  • Linkdin
  • Email

ಸಾರಾಂಶ

1754 crores from the center for upper bank of Bhadra. fake?

-ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಬಹಿರಂಗ । ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಆತಂಕ

-----

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ಘೋಷಿತ 5300 ಕೋಟಿ ರು. ಅನುದಾನದಲ್ಲಿ 1754 ಕೋಟಿ ರು. ಖೋತ ಆಗುವ ಸಾಧ್ಯತೆ ಇದೆ ಎಂದು ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಆತಂಕ ವ್ಯಕ್ತಪಡಿಸಿದೆ.

ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಮಿತಿಯ ಜೆ.ಯಾದವರೆಡ್ಡಿ ರಾಜ್ಯ ಸರ್ಕಾರದಿಂದ ಅ.28 ರಂದು ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಸಲ್ಲಿಕೆಯಾಗಿರುವ ಮರು ಪ್ರಸ್ತಾವನೆ ಈ ಸಂಗತಿಯ ದೃಢ ಪಡಿಸಿದೆ. ಮರು ಪ್ರಸ್ತಾವನೆಯಲ್ಲಿ 3546.22 ಕೋಟಿ ರು. ಅನುದಾನದ ನೆರವು ಕೋರಲಾಗಿದೆ. ಹಾಗಾಗಿ, ಘೋಷಿತ 5300 ಕೋಟಿ ರು. ನಲ್ಲಿ 1754 ಕೋಟಿ ರು. ಖೋತಾವಾಗಲಿದೆ. ಅನುದಾನ ಖೋತವಾಗುವ ಸಂಗತಿಯ ಸಮಿತಿ ಮೊದಲೇ ಗ್ರಹಿಸಿತ್ತು ಎಂದರು.

ಭದ್ರಾ ಮೇಲ್ದಂಡೆಗೆ ಕೇಂದ್ರದ 2023-24 ನೇ ಸಾಲಿನ ಬಜೆಟ್ ನಲ್ಲಿ 5300 ಕೋಟಿ ರು. ಅನುದಾನ ಘೋಷಿಸಲಾಗಿತ್ತು. ಅನುದಾನ ಬಿಡುಗಡೆ ಸಂಬಂಧ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹಾಕಿತ್ತು. ಏತನ್ಮಧ್ಯೆ ಕಳೆದ ಸೆ.5ರಂದು ಕೇಂದ್ರ ಜಲಶಕ್ತಿ ಸಚಿವಾಲಯ ಕಾರ್ಯದರ್ಶಿ ದೇಬರ್ಶಿ ಮುಖರ್ಜಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಅನುದಾನ ಬಿಡುಗಡೆಗೆ ಆಕ್ಷೇಪಣೆ ವ್ಯಕ್ತಪಡಿಸಿ ಕೆಲ ತಾಂತ್ರಿಕ ಮಾಹಿತಿ ಕೋರಿದ್ದರು.

ಭದ್ರಾ ಮೇಲ್ದಂಡೆಗೆ ರಾಜ್ಯ ಸರ್ಕಾರ ಈವರೆಗೆ ಮಾಡಿದ ವೆಚ್ಚ, ಯೋಜನೆ ಪೂರ್ಣಗೊಳಿಸಲು ಬೇಕಾದ ಬಾಕಿ ಮೊತ್ತ, ಭೌಗೋಳಿಕ ಹಂಚಿಕೆ ಹಾಗೂ ಹಣಕಾಸು ಲಭ್ಯತೆ ನೋಡಿಕೊಂಡು ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂಬ ಸಂಗತಿ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗಲು ಕೇಂದ್ರ ನಿರ್ಧರಿಸುವಾಗಲೇ ಎಲ್ಲ ತಾಂತ್ರಿಕ ಮಾಹಿತಿ ರಾಜ್ಯ ಸರ್ಕಾರ ಪೂರೈಕೆ ಮಾಡಿತ್ತು. ಯಾವುದೇ ಬಾಕಿ ಇರಲಿಲ್ಲ. ದೇಬರ್ಶಿ ಮುಖರ್ಜಿ ಬರೆದ ಪತ್ರ ಅನುದಾನ ಬಿಡುಗಡೆಗೆ ಕೇಂದ್ರ ಮಾಡುತ್ತಿರುವ ಖ್ಯಾತೆ ಹಾಗೂ ಕಾಲ ಹರಣ ಮಾಡುವುದಾಗಿದೆ ಎಂಬುದು ವೇದ್ಯವಾಗಿತ್ತೆಂದು ಯಾದವರೆಡ್ಡಿ ಆರೋಪಿಸಿದರು.

ದೇಬರ್ಶಿ ಮುಖರ್ಜಿ ಬರೆದ ಪತ್ರಕ್ಕೆ ಅ.28ರಂದು ರಾಜ್ಯ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಹರ್ಷ ಗುಪ್ತ ಸಲ್ಲಿಸಿರುವ ತಾಂತ್ರಿಕ ಮಾಹಿತಿ ಪೂರೈಕೆಯ ಮರು ಪ್ರಸ್ತಾವನೆ ಅನುಸಾರ 1754 ಕೋಟಿ ರು. ಖೋತವಾಗುತ್ತದೆ. ಮಾರ್ಚ್ 2022 ರವರೆಗೆ ಖರ್ಚು ಮಾಡಿದ ಅನುದಾನ ಆಧರಿಸಿ 5300 ಕೋಟಿ ರು. ಕೇಂದ್ರದಿಂದ ಲಭ್ಯವಾಗಬೇಕಿತ್ತು. ಅಂದರೆ 14697 ಕೋಟಿ ರು. ಒಟ್ಟಾರೆ ಯೋಜನಾ ವೆಚ್ಚದಲ್ಲಿ 5528 ಕೋಟಿ ರು. ರಾಜ್ಯ ಸರ್ಕಾರ ಖರ್ಚು ಮಾಡಿತ್ತು. ಉಳಿದ 9168 ಕೋಟಿ ರು.ಯಲ್ಲಿ ಕೇಂದ್ರ ಸರ್ಕಾರ ತನ್ನ ಪಾಲಿನ ಶೇ.60 ರಷ್ಟು ಮೊತ್ತ 5501 ಕೋಟಿ ಕೊಡಬೇಕಾಗಿದ್ದು, ಅದನ್ನು 5300 ಕೋಟಿಗೆ ಸೀಮಿತಗೊಳಿಸಲಾಗಿತ್ತು.

ಹಾಲಿ ಕೇಂದ್ರಕ್ಕೆ ಸಲ್ಲಿಸಲಾದ ಮರು ಪ್ರಸ್ತಾವನೆಯಲ್ಲಿ ಮಾರ್ಚ್ 2024 ರವರೆಗೆ ಖರ್ಚು ಮಾಡಲಾದ ಮಾಹಿತಿ ಸಲ್ಲಿಸಲಾಗಿದೆ. ಮಾರ್ಚ್ ಅಂತ್ಯಕ್ಕೆ ಭದ್ರಾ ಮೇಲ್ದಂಡೆಗೆ 8785ಕೋಟಿ ರು. ಖರ್ಚು ಮಾಡಲಾಗಿದ್ದು, 5910 ಕೋಟಿ ರು. ಬಾಕಿ ಉಳಿಯುತ್ತದೆ. ಈ ಮೊತ್ತಕ್ಕೆ ಶೇ.60ರಷ್ಟು ಅನುದಾನವ ಕೇಂದ್ರ ಸರ್ಕಾರ ನೀಡಿದ್ದಲ್ಲಿ 3546 ಕೋಟಿ ರು. ಮಾತ್ರ ಲಭ್ಯವಾಗುತ್ತದೆ. ಕೇವಲ ಎರಡು ವರ್ಷಕ್ಕೆ 1754 ಕೋಟಿ ರು. ಖೋತವಾಗುತ್ತದೆ. ಕೇಂದ್ರ ಸರ್ಕಾರದ ಸೂಚನೆ ಪಾಲನೆ ಸಂಬಂಧ ರಾಜ್ಯ ಸಲ್ಲಿಸಿರುವ ಪ್ರಸ್ತಾವನೆ ಕೊಟ್ಟಷ್ಟು ಕೊಡಲಿ ಎಂಬಂತಿದೆ ಎಂದು ಯಾದವರೆಡ್ಡಿ ದೂರಿದರು.

ಭದ್ರಾ ಮೇಲ್ದಂಡೆ ವಿಚಾರವಾಗಿ ಕೇಂದ್ರ ಸಚಿವರು, ಬಿಜೆಪಿ ಸಂಸದರು ಪ್ರಧಾನಿ ಮೋದಿ ಮುಂದೆ ನಿಂತು ಮಾತನಾಡುವ ಪರಿಸ್ಥಿತಿಯಿಲ್ಲ. ಸಚಿವರಿಗೆ ಪ್ರಧಾನಿಯವರ ಭೇಟಿಗೆ ಟೈಂ ಸಿಗುತ್ತಿಲ್ಲ. ಕಳೆದ ತಿಂಗಳು ಚಿತ್ರದುರ್ಗಕ್ಕೆ ಆಗಮಿಸಿದ್ದ ಜಲಶಕ್ತಿಯ ರಾಜ್ಯ ಸಚಿವ ವಿ.ಸೋಮಣ್ಣ, ನೀರಾವರಿ ಅನುಷ್ಢಾನ ಸಮಿತಿಯೊಂದಿಗೆ ಸಭೆ ನಡೆಸಿ ಒಂದೂವರೆ ತಿಂಗಳ ಒಳಗಾಗಿ ಕೇಂದ್ರದಿಂದ ಮೊದಲ ಕಂತಿನ ಅನುದಾನ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿ ಹೋಗಿದ್ದರು. ಗಡುವು ಹತ್ತಿರ ಬಂದಿದೆ. ಈಗಲಾದರೂ ರಾಜ್ಯದ ಬಿಜೆಪಿ ಸಂಸದರು ದಿವ್ಯ ನಿರ್ಲಕ್ಷ್ಯದಿಂದ ಹೊರ ಬಂದು ಕೇಂದ್ರದಿಂದ ಭದ್ರಾ ಮೇಲ್ಡಂಡೆಗೆ ಅನುದಾನ ಬಿಡುಗಡೆ ಮಾಡಿಸುವುದರ ಮೂಲಕ ಇಚ್ಚಾಶಕ್ತಿ ಪ್ರದರ್ಶಿಸಲಿ. ಜನತಂತ್ರ ವ್ಯವಸ್ಥೆ ಬದ್ದತೆ ಅರಿತುಕೊಳ್ಳಲಿ ಎಂದು ಯಾದವರೆಡ್ಡಿ ಆಗ್ರಹಿಸಿದರು.

ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಸುರೇಶ್ ಬಾಬು, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಮಲ್ಲಾಪುರ ತಿಪ್ಪೇಸ್ವಾಮಿ ಇದ್ದರು.

-----------------

ಪೋಟೋ ಕ್ಯಾಪ್ಸನ್

ನೀರಾವರಿ ಅನುಷ್ಠಾನ ಹೋರಾಟ ಸಮಿತಿಯ ಜೆ.ಯಾದವರೆಡ್ಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

---------

ಪೋಟೋ:

6 ಸಿಟಿಡಿ1