179.640 ಲೀಟರ್ ಗೋವಾ ಮದ್ಯ ಹಾಗೂ ಮದ್ಯ ಸಾಗಾಟಕ್ಕೆ ಬಳಸಲಾಗಿದ್ದ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.

ಕಾರವಾರ: ತಾಲೂಕಿನ ಮುಡಗೇರಿ ಅರಣ್ಯ ಪ್ರದೇಶದಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ 179.640 ಲೀಟರ್ ಗೋವಾ ಮದ್ಯ ಹಾಗೂ 2 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ 2 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.ಅ. 6ರಂದು ಮಧ್ಯಾಹ್ನ 12.30 ಹಾಗೂ 1.30ರ ಸುಮಾರಿಗೆ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ಕಾರವಾರ ಉಪವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಮುಡಗೇರಿ ಅರಣ್ಯ ಪ್ರದೇಶದಲ್ಲಿ ದಾಳಿ ನಡೆಸಿದರು. ಈ ವೇಳೆ ಒಟ್ಟು 179.640 ಲೀಟರ್ ಗೋವಾ ಮದ್ಯ ಹಾಗೂ ಮದ್ಯ ಸಾಗಾಟಕ್ಕೆ ಬಳಸಲಾಗಿದ್ದ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.ಜಪ್ತಿ ಮಾಡಲಾದ ಗೋವಾ ಮದ್ಯದ ಮೌಲ್ಯ ₹98,400 ಹಾಗೂ 2 ದ್ವಿಚಕ್ರ ವಾಹನಗಳ ಮೌಲ್ಯ ₹80,000 ಎಂದು ಅಂದಾಜಿಸಲಾಗಿದೆ. ಕಾರ್ಯಾಚರಣೆಯ ಬಳಿಕ ಅಬಕಾರಿ ಅಧಿಕಾರಿಗಳು 2 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರು(ಜಾರಿ ಮತ್ತು ತನಿಖೆ) ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಬಕಾರಿ ಉಪ ಆಯುಕ್ತರ ನಿರ್ದೇಶನದ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ. ಅಕ್ರಮ ಗೋವಾ ಮದ್ಯ ವಶ: ಕಾರು ಜಪ್ತಿ

ಕಾರವಾರ: ಗೋವಾದಿಂದ ಕಾರವಾರದ ಕಡೆಗೆ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ರಾಜ್ಯದ ಮದ್ಯ ಹಾಗೂ ಬಿಯರ್‌ನ್ನು ಮಾಜಾಳಿ ಅಬಕಾರಿ ತನಿಖಾ ಠಾಣೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಿ, ಮದ್ಯ ಸಾಗಾಟಕ್ಕೆ ಬಳಸಿದ್ದ ಕಾರನ್ನು ಜಪ್ತಿ ಮಾಡಲಾಗಿದೆ.ಶನಿವಾರ ಮಧ್ಯಾಹ್ನ ಕಾರವಾರದ ಮಾಜಾಳಿ ಅಬಕಾರಿ ತನಿಖಾ ಠಾಣೆಯಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ, ಗೋವಾದಿಂದ ಕಾರವಾರದ ಕಡೆಗೆ ಬರುತ್ತಿದ್ದ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರಿನ ಬಗ್ಗೆ ಅಧಿಕಾರಿಗಳಿಗೆ ಖಚಿತ ಮಾಹಿತಿ ಲಭಿಸಿತ್ತು. ಅದರಂತೆ ಕಾರನ್ನು ತಪಾಸಣೆ ನಡೆಸಿದಾಗ, ಬಾನೆಟ್‌ನಲ್ಲಿ ಅಡಗಿಸಿಟ್ಟಿದ್ದ ಒಟ್ಟು 28.750 ಲೀಟರ್ ಗೋವಾ ರಾಜ್ಯದ ಮದ್ಯ ಹಾಗೂ 2.320 ಲೀಟರ್ ಬಿಯರ್ ಪತ್ತೆಯಾಗಿವೆ.

ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಸ್ಥಳದಲ್ಲೇ ಬಂಧಿಸಿದ ಅಧಿಕಾರಿಗಳು, ಮದ್ಯ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕಾರವಾರ ಉಪವಿಭಾಗದ ಅಬಕಾರಿ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಂಗಳೂರು ವಿಭಾಗದ ಜಂಟಿ ಅಬಕಾರಿ ಆಯುಕ್ತರ ನಿರ್ದೇಶನ ಹಾಗೂ ಉತ್ತರ ಕನ್ನಡ ಜಿಲ್ಲಾ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ, ಕಾರವಾರ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಕಾರವಾರ ಉಪವಿಭಾಗದ ಅಬಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.